ಪಾಂಡವಪುರ : ಶ್ರೀಮಂತರು ಸರ್ಕಾರಿ ಆಸ್ಪತ್ರೆಗೆ ಯಾರೂ ಬರೋದಿಲ್ಲ. ಬಡವರು ಹೆಚ್ಚಾಗಿ ಬರುತ್ತಾರೆ, ವೈದ್ಯರು ಹೆಚ್ಚುವರಿ ಹಣ ವಸೂಲಿ ಮಾಡುವಂತಿಲ್ಲ. ಹಣ ವಸೂಲಿ ಮಾಡಿದರೆ ನನಗೆ ತಿಳಿಸಿ, ಕ್ರಮ ಕೈಗೊಳ್ಳುತ್ತೇನೆ ಎಂದು ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಎಚ್ಚರಿಸಿದ್ದಾರೆ.
ಪಟ್ಟಣದಲ್ಲಿರುವ ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು, ಆಸ್ಪತ್ರೆಯ ಒಳ ಆವರಣ, ಕೊಠಡಿಗಳಲ್ಲಿ ಚಿಕಿತ್ಸೆ ಸ್ಥಿತಿ, ಆಕ್ಸಿಜನ್ ಸೆಂಟರ್, ಸಿಬ್ಬಂದಿ ಕೊರತೆ ಸೇರಿದಂತೆ ಇನ್ನಿತರ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಬಳಿಕ ಅಸ್ಪತ್ರೆ ವೈದ್ಯಾಧಿಕಾರಿ ಡಾ.ಎಚ್. ಕುಮಾರ್ ಅವರೊಂದಿಗೆ ಸಮಸ್ಯೆ ಬಗ್ಗೆ ಚರ್ಚೆ ನಡೆಸಿದರು.

ಶಾಸಕನಾಗಿ ನಾನು ಮೂಲಭೂತ ಸೌಕರ್ಯ ಹಾಗೂ ಆರ್ಥಿಕ ಭದ್ರತೆಗೆ ಹೆಚ್ಚು ಆದ್ಯತೆ ನೀಡುತ್ತೇನೆ. ಜತೆಗೆ ಉದ್ಯೋಗ ಸೃಷ್ಟಿ ಮಾಡಿ, ಅವಶ್ಯಕತೆ ಇರುವಷ್ಟು ಅಭಿವೃದ್ಧಿ ಕೆಲಸಕ್ಕೆ ರಾಜ್ಯ ಸರ್ಕಾರದಿಂದ ಅನುದಾನ ತರುತ್ತೇನೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಏಜೆನ್ಸಿ ಮೂಲಕ ಕ್ಲೀನಿಂಗ್ ಕೆಲಸ ಮಾಡುವ ಮಹಿಳೆಯರ ಸಂಬಳದಲ್ಲಿ ಏಜೆನ್ಸಿ ಮಾಲೀಕ ಪ್ರತಿ ತಿಂಗಳು 5 ಸಾವಿರ ರೂ ವಾಪಸ್ಸು ಪಡೆದುಕೊಳ್ಳುತ್ತಿದ್ದನ್ನು ನಿಲ್ಲಿಸಿದ್ದೇನೆ.

ಆಸ್ಪತ್ರೆಯಲ್ಲಿ 50ಕ್ಕೂ ಹೆಚ್ಚು ಉದ್ಯೋಗ ಖಾಲಿ ಇದೆ. ಭರ್ತಿ ಮಾಡಿದರೆ ಮತ್ತಷ್ಟು ಸೇವೆ ಹೆಚ್ಚಾಗುತ್ತದೆ. ಹೊರ ಗುತ್ತಿಗೆ ಆಧಾರದ ಮೇರೆಗೆ ಜಿಲ್ಲಾಧಿಕಾರಿ ಮೂಲಕ ಸಿಬ್ಬಂದಿ ತೆಗೆದುಕೊಳ್ಳಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಉಪವಿಭಾಗೀಯ ಸಾರ್ವಜನಿಕ ಆಸ್ಪತ್ರೆ ಕಟ್ಟಡ ನವೀಕರಣ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಸರ್ಕಾರಿ ಆಸ್ಪತ್ರೆಗೆ ಬಂದವರು ಖಾಸಗಿ ಆಸ್ಪತ್ರೆಗೆ ಏಕೆ ಹೋಗಬೇಕು ಅಥವಾ ಇಲ್ಲಿಯ ವೈದ್ಯರು ಏಕೆ ಕಳುಹಿಸಬೇಕು ಎಂದು ವೈದ್ಯರಿಗೆ ಸೂಚಿಸಿ, ವೈದ್ಯರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಚರ್ಚಿಸಿದ್ದೇನೆ.
ಸರ್ಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ನಡೆಸುವಂತಿಲ್ಲ. ಯಾವ ವೈದ್ಯರೂ ಹಣ ವಸೂಲಿ ಮಾಡುವಂತಿಲ್ಲ. ನಿಮಗೆ ಇಷ್ಟ ಇದ್ದರೆ ನಮ್ಮಲ್ಲಿ ಕೆಲಸ ಮಾಡಿ, ನಿಮಗೆ ಕಷ್ಟ ಆದ್ರೆ ಬೇರೆ ಕಡೆ ಹೋಗಿ ಎಂದು ಕೆಲ ವೈದ್ಯರಿಗೆ ಸೂಚಿಸಿದ್ದೇನೆ ಎಂದರು.

ಪಾಂಡವಪುರ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್ ಅವರಿಗೆ ಸಾರ್ವಜನಿಕರು ಪ್ರಶ್ನಿಸಿ, ತಾಲೂಕಿನ ನಾರಾಯಣಪುರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಸೇರಿದಂತೆ ಅನೇಕ ಆಸ್ಪತ್ರೆಯಲ್ಲಿ ವೈದ್ಯರೇ ಇರೋದಿಲ್ಲ. ವೈದ್ಯರು ಲಂಚ ಪಡೆಯುತ್ತಿದ್ದಾರೆ. ಈ ಬಗ್ಗೆ ಕ್ರಮ ಜರುಗಿಸಿ ಎಂದು ಒತ್ತಾಯಿಸಿದರು.

ಸರ್ಕಾರಿ ಆಸ್ಪತ್ರೆಯ ಎಲ್ಲಾ ಕೊಠಡಿಗಳನ್ನು ವೀಕ್ಷಿಸಿ, ಹೊರ ಹಾಗೂ ಒಳ ರೋಗಿಗಳ ಆರೋಗ್ಯ ಮಾಹಿತಿ ಮತ್ತು ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ವಿಚಾರಿಸಿ ನಂತರ ಆಸ್ಪತ್ರೆ ಸಿಬ್ಭಂದಿ ಹಾಗೂ ವೈದ್ಯರೊಂದಿಗೆ ಕೆಲಕಾಲ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ರೈತಸಂಘದ ಮುಖಂಡರಾದ ಕ್ಯಾತನಹಳ್ಳಿ ದಯಾನಂದ್, ಪುರಸಭೆ ಸದಸ್ಯರಾದ ಪಾರ್ಥ, ಉಮಾಶಂಕರ್, ದೀಪು, ಮಹೇಶ್ ಸೇರಿದಂತೆ ಅನೇಕರಿದ್ದರು.






