ಬೆಂಗಳೂರು ಜು 19: ನುಡಿದಂತೆ ನಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬದ್ಧತೆಗೆ ಮತ್ತೊಂದು ಸೇರ್ಪಡೆ “ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ (ತಿದ್ದುಪಡಿ) ಮಸೂದೆ.
ಚುನಾವಣೆ ಪೂರ್ವ ಕೊಟ್ಟಿದ್ದ ಮಾತಿನಂತೆ ಮೊದಲ ಅಧಿವೇಶನದಲ್ಲೇ ತಿದ್ದುಪಡಿ ಮಸೂದೆ ಮಂಡಿಸಲು ವಿಶೇಷ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿದ್ದಾರೆ.
ವಿಶೇಷ ಸಚಿವ ಸಂಪುಟ ಸಭೆ ನಡೆಸುವುದಕ್ಕೆ ಎರಡು ದಿನಗಳ ಮೊದಲು ದಲಿತ ಸಮುದಾಯಗಳ ಮುಖಂಡರು, ವಕೀಲರುಗಳ ಸಭೆ ನಡೆಸಿದ್ದರು. ಈ ಸಭೆಯಲ್ಲಿ ವ್ಯಕ್ತವಾದ ಒಕ್ಕೋರಲ ತೀರ್ಮಾನದಂತೆ ದೂರು ದಾಖಲಿಸಲು ಕಾಲಮಿತಿ ತೆಗೆಯಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಆ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಚಾರಿತ್ರಿಕ ಹೆಜ್ಜೆ ಇಟ್ಟಿದೆ.
ತಿದ್ದುಪಡಿಯಲ್ಲಿ ಏನಿದೆ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹಂಚಿಕೆಯಾದ ಜಮೀನನ್ನು ಸರ್ಕಾರದ ಅನುಮತಿಯಿಲ್ಲದೆ ಪರಭಾರೆ ಮಾಡಿದ ಸಂದರ್ಭದಲ್ಲಿ ಜಮೀನು ಮಾಲೀಕರು ಕಾಯ್ದೆಯ ಸೆಕ್ಷನ್ ೫(೧) ರನ್ವಯ ದೂರು ದಾಖಲಿಸಲು ಕಾಲಮಿತಿ ತೆಗೆದು ಹಾಕುವ ಕುರಿತು ಕಾಯ್ದೆ ತಿದ್ದುಪಡಿ ಮಾಡಲು ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
2023-24ನೇ ಆಯವ್ಯಯದಲ್ಲಿ ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ ತಂದು ಇನ್ನಷ್ಟು ಬಲಪಡಿಸುವ ಕುರಿತು ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತುತ ಅಧಿವೇಶನದಲ್ಲಿಯೇ ತಿದ್ದುಪಡಿ ಮಂಡಿಸುವ ಗುರಿಯೊಂದಿಗೆ ಮುಂದಡಿಯಿಟ್ಟಿದ್ದಾರೆ. ಜುಲೈ 17 ರಂದು ವಿಧಾನಸೌಧದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಸಮುದಾಯಗಳ ಮುಖಂಡರ ಸಭೆ ನಡೆಸಿ ಅವರ ಅಭಿಪ್ರಾಯ ಪಡೆದಿದ್ದರು. ಇದೀಗ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿಗೆ ಅನುಮೋದನೆ ಪಡೆದುಕೊಂಡು ವಿಧಾನಮಂಡಲದಲ್ಲಿ ವಿಧೇಯಕ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆ ಮೂಲಕ ಪರಿಶಿಷ್ಟ ಜಾತಿ, ಪಂಗಡದ ಸಮುದಾಯಗಳ ಹಿತರಕ್ಷಣೆ ಕುರಿತು ತಮ್ಮ ಬದ್ಧತೆಯನ್ನು ಮುಖ್ಯಮಂತ್ರಿಗಳು ಪ್ರದರ್ಶಿಸಿದ್ದಾರೆ ಹಾಗೂ ನುಡಿದಂತೆ ನಡೆಯುವ ಸರ್ಕಾರ ತಮ್ಮದು ಎಂದು ಸಾಬೀತು ಪಡಿಸಿದ್ದಾರೆ.