ಕಾಂಗ್ರೆಸ್(INC Karnataka) ಸರ್ಕಾರದ ಅಧಿಕಾರಕ್ಕೆ ಬಂದ ಬಳಿಕ ನಿಗಮ ಮಂಡಳಿ ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಭಾರೀ ಹಗ್ಗಾಜಗ್ಗಾಟ ನಡೆದಿತ್ತು. ಅಂತಿಮವಾಗಿ ನಿಗಮ ಮಂಡಳಿಗಳಿಗೆ 34 ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಮಾಡಿದೆ. ಹೈಕಮಾಂಡ್ ನಾಯಕರು ಯಾರನ್ನೂ ಹೇಳದೆ ಕೇಳದೆ ಹೆಸರು ಅಂತಿಮ ಮಾಡಿದ್ದಾರೆ ಅನ್ನೋ ಕಾರಣಕ್ಕೆ ಸಚಿವ ಕೆ.ಎನ್ ರಾಜಣ್ಣ(KN Rajanna) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಅದಕ್ಕೂ ಮೊದಲು ಗೃಹ ಸಚಿವ ಡಾ ಜಿ ಪರಮೇಶ್ವರ್(G Parameshwar) ನಮ್ಮ ಅಭಿಪ್ರಾಯ ಕೇಳಿಲ್ಲ ಎಂದಿದ್ದರು. ಆ ಬಳಿಕ ಎಲ್ಲರ ಅಭಿಪ್ರಾಯ ಪಡೆದೇ ನೇಮಕ ಮಾಡಲಾಗಿದೆ ಎಂದು ಡಿಸಿಎಂ(DCM) ಡಿ.ಕೆ ಶಿವಕುಮಾರ್(DK Shivakumar) ಸ್ಪಷ್ಟನೆ ನೀಡಿದ್ದರು. ಆ ಬಳಿಕ ಅಂತಿಮವಾಗಿದ್ದ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.
S A ಹ್ಯಾರಿಸ್‌ಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ವಿನಯ್ ಕುಲಕರ್ಣಿ ಅವರಿಗೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ, ಅನಿಲ್ ಚಿಕ್ಕಮಾಧು ಅವರಿಗೆ ಜಂಗಲ್ ಲಾಡ್ಜಸ್, ಬಸವನಗೌಡ ದದ್ದಲ್ ಅವರಿಗೆ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ, ಖನೀಜ್ ಫಾತಿಮಾಗೆ ರೇಷ್ಮೆ ಉದ್ಯಮಗಳ ನಿಗಮ, ವಿಜಯಾನಂದ ಕಾಶಪ್ಪನವರ್‌ಗೆ ಕ್ರೀಡಾ ಪ್ರಾಧಿಕಾರ, ಟಿ.ಡಿ.ರಾಜೇಗೌಡಗೆ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ, ರೂಪಾ ಶಶಿಧರಗೆ ಕರಕುಶಲ ಕೈಗಾರಿಕಾ ಅಭಿವೃದ್ಧಿ ನಿಗಮ, ಸತೀಶ್ ಕೃಷ್ಣ ಸೈಲ್‌ಗೆ ಮಾರ್ಕೆಟಿಂಗ್ ಕನ್ಸಲ್ಟೆಂಟ್ ಅಂಡ್ ಏಜೆನ್ಸಿಸ್, ಶರತ್ ಬಚ್ಚೇಗೌಡಗೆ ವಿದ್ಯುನ್ಮಾನ ಅಭಿವೃದ್ಧಿ ನಿಗಮ, ಕಂಪ್ಲಿ ಗಣೇಶ್‌ಗೆ ಕೈಮಗ್ಗ ಅಭಿವೃದ್ಧಿ ನಿಗಮ, ಬಸವನಗೌಡ ತುರುವಿಹಾಳಗೆ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.
ಸಿಎಂ ಸಿದ್ದರಾಮಯ್ಯ 36 ಶಾಸಕರ ಪಟ್ಟಿ ಕಳುಹಿಸಿದ್ದು, ಅಧಿಸೂಚನೆ ಹೊರಡಿಸಿದಾಗ 34 ನಿಗಮ ಮಂಡಳಿಗಳಿಗೆ ಮಾತ್ರ ಅಧಿಕೃತ ಮುದ್ರೆ ಬಿದ್ದಿದೆ. ಪಟ್ಟಿಯಲ್ಲಿದ್ದ ಇಬ್ಬರು ಶಾಸಕರಿಗೆ ನಿಗಮ ಮಂಡಳಿಯಿಂದ ಕೋಕ್ ನೀಡಲಾಗಿದೆ. ಡಿಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ನಿಯೋಜನೆಯಾಗಿದ್ದ ಶಾಸಕ ಶ್ರೀನಿವಾಸ್ ಮಾನೆ ಹೆಸರನ್ನು ತೆಗೆಯಲಾಗಿದೆ. ಇನ್ನು ಮಳವಳಿ ಶಾಸಕ ಪಿ.ಎಂ ನರೇಂದ್ರ ಸ್ವಾಮಿಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವಂತೆ ಸೂಚಿಸಲಾಗಿತ್ತು. ಆದರೆ ಅಂತಿಮ ಕ್ಷಣದಲ್ಲಿ ಇಬ್ಬರು ಶಾಸಕರ ಹೆಸರನ್ನ ಹಿಂಪಡೆದಿದ್ದಾರೆ ಸಿಎಂ ಸಿದ್ದರಾಮಯ್ಯ. ನರೇಂದ್ರ ಸ್ವಾಮಿ ಹಾಗು ನಾರಾಯಣಸ್ವಾಮಿ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅದೇ ಕಾರಣಕ್ಕೆ ಕೈ ಬಿಡಲಾಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.