ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮನೆ ಮೇಲೆ ನಡೆದ ಸಿಬಿಐ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ಸಿಕ್ಕಿದೆ. ಕೇಂದ್ರೀಯ ತನಿಖಾ ದಳ (ಸಿಬಿಐ) ಅಧಿಕಾರಿಗಳಿಗೆ ತಮ್ಮ ಮನೆಯಲ್ಲಿ ಮತ್ತು ಅವರ ಬ್ಯಾಂಕ್ ಲಾಕರ್‌ನಲ್ಲಿ ಏನೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಘಾಜಿಯಾಬಾದ್ ಬ್ಯಾಂಕ್‌ನಲ್ಲಿನ ಲಾಕರ್ ಅನ್ನು ಮಂಗಳವಾರ ಕೇಂದ್ರ ಏಜೆನ್ಸಿಯ ಅಧಿಕಾರಿಗಳು ಪರೀಕ್ಷಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಸೋಡಿಯಾ, “ಲಾಕರ್‌ನಲ್ಲಿ ನನ್ನ ಮಕ್ಕಳು ಮತ್ತು ಪತ್ನಿಗೆ ಸೇರಿದ ಸುಮಾರು 70 ಸಾವಿರ ರುಪಾಯಿ ಮೌಲ್ಯದ ಚಿನ್ನಾಭರಣಗಳಿದೆ. ಸಿಬಿಐ ಮನೆಗೆ ದಾಳಿ ಮಾಡಿ ಲಾಕರ್‌ನಲ್ಲಿ ಶೋಧನೆ ನಡೆಸಿದ್ದು, ಯಾವ ಅಕ್ರಮ ವಸ್ತುಗಳು ಪತ್ತೆಯಾಗದಿರುವುದು ಸಂತಸ ತಂದಿದೆ. ಎಲ್ಲಾ ದಾಳಿಗಳಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಕ್ಲೀನ್ ಚಿಟ್ ಸಿಕ್ಕಿದೆ” ಎಂದು ಹೇಳಿದರು.
“ದಾಳಿಯ ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ಸಭ್ಯವಾಗಿ ವರ್ತಿಸಿದ್ದಾರೆ. ಏನೂ ಸಿಗುವುದಿಲ್ಲ ಎಂದು ಗೊತ್ತಿದ್ದರೂ ನನ್ನನ್ನು ಕೆಲವು ತಿಂಗಳು ಜೈಲಿನಲ್ಲಿಡುವಂತೆ ಪ್ರಧಾನಿ ಒತ್ತಡಕ್ಕೆ ಮಣಿದಿದ್ದಾರೆ” ಎಂದು ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.

ಮಂಗಳವಾರ ಸಿಬಿಐ ನಮ್ಮ ಬ್ಯಾಂಕ್ ಲಾಕರ್ ಮೇಲೆ ದಾಳಿ ನಡೆಸಿದೆ. ಆಗಸ್ಟ್ 19ರಂದು ನನ್ನ ಮನೆಯಲ್ಲಿ 14 ಗಂಟೆಗಳ ಕಾಲ ನಡೆದ ದಾಳಿಯಲ್ಲಿ ಏನೂ ಪತ್ತೆಯಾಗಿಲ್ಲ, ಲಾಕರ್‌ನಲ್ಲಿಯೂ ಏನೂ ಪತ್ತೆಯಾಗಿಲ್ಲ. ಸಿಬಿಐಗೆ ಸ್ವಾಗತ, ನನ್ನ ಕುಟುಂಬ ಮತ್ತು ನಾನು ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇವೆ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದರು.
ಸುಮಾರು ಎರಡು ವಾರಗಳ ಹಿಂದೆ ಸಿಸೋಡಿಯಾ ಅವರ ಮನೆಯ ಮೇಲೆ ದಾಳಿ ನಡೆದಾಗ ಅವರು ತಮ್ಮ ಲಾಕರ್‌ನಲ್ಲಿ ಏನೂ ಸಿಗುವುದಿಲ್ಲ ಎಂದು ಹೇಳಿದ್ದರು.