ಉದ್ಯೋಗಿಗಳ ಒತ್ತಡಕ್ಕೆ ಮಣಿದು ಅಮೆರಿಕಾ ಮೂಲದ ದಲಿತ ಹೋರಾಟಗಾರ್ತಿ ʼತೇನ್ಮೊಳಿ ಸೌಂದರರಾಜನ್ʼ ಅವರ ಭಾಷಣವನ್ನು ಗೂಗಲ್ ರದ್ದುಮಾಡಿದ್ದು, ತೀವ್ರ ಚರ್ಚೆಗೆ ಕಾರಣವಾಗಿದೆ. ತೇನ್ಮೊಳಿ ಅವರ ಭಾಷಣವನ್ನು ವಿರೋಧಿಸಿದ ಗೂಗಲ್ ಉದ್ಯೋಗಿಗಳು, ʼ “ಜಾತಿ ಸಮಾನತೆಯ ಚರ್ಚೆಯಿಂದ ತಮ್ಮ ಜೀವಕ್ಕೆ ಅಪಾಯವಿದೆʼ ಎಂದು ಹೇಳಿಕೊಂಡಿದ್ದು, ಅಮೇರಿಕಾದಲ್ಲಿ ಜಾತಿ ಇಲ್ಲ. ಜಾತಿ ತಾರತಮ್ಯ ಅಸ್ತಿತ್ವದಲ್ಲಿಲ್ಲ, ದಮನಿದ ಜಾತಿಗಳ ಜನರು ಕಡಿಮೆ ವಿದ್ಯಾವಂತರು. ಭಾರತದಲ್ಲಿರುವ ಮೀಸಲಾತಿಯು ‘ಮೇಲ್ಜಾತಿಗಳ ವಿರುದ್ಧ ಹಿಮ್ಮುಖ ತಾರತಮ್ಯʼ ಎಂದೆಲ್ಲಾ ಹೇಳಿಕೊಂಡಿರುವ ಉದ್ಯೋಗಿಗಳು ದಲಿತ ಚಿಂತಕಿಯ ಜಾತಿ ಅಸಮಾನತೆ ಕುರಿತಾಗಿನ ಭಾಷಣಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧಕ್ಕೆ ಗೂಗಲ್ ಮಣೆ ಹಾಕಿದ್ದು, ತೇನ್ಮೊಳಿ ಅವರ ಭಾಷಣವನ್ನೇ ರದ್ದು ಪಡಿಸಿ ಅಚ್ಚರಿ ಮೂಡಿಸಿದೆ.
ಕಂಪನಿಯ ಡೈವರ್ಸಿಟಿ ಇಕ್ವಿಟಿ ಇನ್ಕ್ಲೂಸಿವಿಟಿ (DEI) ಕಾರ್ಯಕ್ರಮದ ಭಾಗವಾಗಿ ಉದ್ಯೋಗಿಗಳ ಸಂವೇದನಾಶೀಲತೆಗಾಗಿ ತೇನ್ಮೊಳಿ ಈ ಭಾಷಣವನ್ನು ಮಾಡಬೇಕಾಗಿತ್ತು. ಆದರೆ, ಈಕ್ವಾಲಿಟಿ ಲ್ಯಾಬ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿರುವ ತೇನ್ಮೊಳಿ ಅವರನ್ನು ‘‘ಹಿಂದೂ ಫೋಬಿಕ್’’ ಮತ್ತು “ಹಿಂದೂ ವಿರೋಧಿ” ಎಂದು ಕರೆದಿರುವ ಗೂಗಲ್‌ನ ಉದ್ಯೋಗಿಗಳ ಗುಂಪುಗಳು ಭಾಷಣವನ್ನು ರದ್ದು ಪಡಿಸುವಂತೆ ಸಾಮೂಹಿಕ ಇಮೇಲ್‌ಗಳನ್ನು ಕಳುಹಿಸಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಗೂಗಲ್‌ನ ಒಳಗಿನ ಹಿಂದೂ-ಪರ ಗುಂಪುಗಳ ಅಭಿಯಾನದ ಹಿನ್ನೆಲೆಯಲ್ಲಿ ತೇನ್ಮೊಳಿ ಅವರ ಕಾರ್ಯಕ್ರಮವು ರದ್ದಾಗಿದೆ. ತೇನ್ಮೊಳಿ ಅವರನ್ನು ಭಾಷಣ ಮಾಡಲು ಆಹ್ವಾನಿಸಿದ ಗೂಗಲ್‌ನ ಹಿರಿಯ ಮ್ಯಾನೇಜರ್ ತನುಜಾ ಗುಪ್ತಾ, ಅವರನ್ನು ಆಹ್ವಾನಿಸಿದ್ದಕ್ಕಾಗಿ ಉಳಿದ ಉದ್ಯೋಗಿಗಳು ತಕರಾರು ಎತ್ತಿದ್ದಾರೆ. ದಲಿತ ನಾಗರಿಕ ಹಕ್ಕುಗಳ ಸಂಘಟನೆ ಈಕ್ವಾಲಿಟಿ ಲ್ಯಾಬ್ಸ್ ಗೂಗಲ್‌ನಲ್ಲಿ ದಲಿತ ವಿರೋಧಿ ವರ್ತನೆಯನ್ನು ಖಂಡಿಸಿದೆ.
ಗೂಗಲ್ ಮ್ಯಾನೇಜ್‌ಮೆಂಟ್ ಜಾತಿ ಅರ್ಹತೆಯ ಕೊರತೆಯ ಬಗ್ಗೆ ಮಾತನಾಡಿದೆ ಎಂದು ಈಕ್ವಾಲಿಟಿ ಲ್ಯಾಬ್ಸ್ ಆರೋಪಿಸಿದೆ. ಗೂಗಲ್ ಕಂಪನಿಯಲ್ಲಿ ಜನಾಂಗೀಯ ಕಿರುಕುಳದ ವರದಿಗಳು ಬಂದಿದ್ದು, ಅದನ್ನು ಗೂಗಲ್ ಹತ್ತಿಕ್ಕಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಾದ್ಯಂತ ವಿಭಾಗಗಳನ್ನು ಹೊಂದಿರುವ ಅಂಬೇಡ್ಕರ್‌ವಾದಿಗಳ ಸಂಘದ (AANA) ಅಧ್ಯಕ್ಷರಾಗಿದ್ದ ತೇನ್ಮೋಳಿ ಅವರು ಜಾಗತಿಕವಾಗಿ ಗುರುತಿಸಲ್ಪಟ್ಟ ಜಾತಿ ವಿರೋಧಿ ಪ್ರಚಾರಕರಾಗಿದ್ದಾರೆ. ಬಹುರಾಷ್ಟ್ರೀಯ ಕಂಪನಿಗಳಲ್ಲಿ DEI ಕಾರ್ಯಕ್ರಮಗಳು ಹೆಚ್ಚು ಸಾಮಾನ್ಯವಾಗುತ್ತಿವೆ ಆದರೆ ಅವು ಹೆಚ್ಚಾಗಿ ಜನಾಂಗೀಯವಾದ, ಲಿಂಗ ಮತ್ತು ಲೈಂಗಿಕತೆಯ ಸಮಸ್ಯೆಗಳಿಗೆ ಸೀಮಿತವಾಗಿವೆ. ಕಳೆದ ಕೆಲವು ವರ್ಷಗಳಿಂದ, ದಲಿತ ಕಾರ್ಯಕರ್ತರು ಈ ಉದ್ಯೋಗಿಗಳ ಜಾಗೃತಿ ಕಾರ್ಯಕ್ರಮಗಳಲ್ಲಿ ಜಾತಿ ಸಮಸ್ಯೆಯನ್ನೂ ಸೇರಿಸಬೇಕೆಂದು ಪ್ರಚಾರ ಮಾಡುತ್ತಿದ್ದಾರೆ.

“ಕಂಪೆನಿಯು ಕಾನೂನುಬಾಹಿರವಾಗಿ ಜಾತಿ ಇಕ್ವಿಟಿಯ ಕುರಿತಾದ ಮಾತನ್ನು ರದ್ದುಗೊಳಿಸಿದ್ದರಿಂದ, ಅದರ ಉದ್ಯೋಗಿಗಳಿಗೆ ಮತ್ತು ನನ್ನ ಕಡೆಗೆ Google ನ ಕ್ರಮಗಳು ಎಷ್ಟು ಆಘಾತಕಾರಿ ಮತ್ತು ತಾರತಮ್ಯವನ್ನು ವ್ಯಕ್ತಪಡಿಸುತ್ತವೆ ಎಂಬುದನ್ನು ವ್ಯಕ್ತಪಡಿಸಲು ನನಗೆ ಪದಗಳು ಸಿಗುತ್ತಿಲ್ಲ. ಈ ದಾಳಿಗಳು ಸಂಭವಿಸಲು ಮತ್ತು ಮುಂದುವರೆಯಲು ಅನುವು ಮಾಡಿಕೊಡುವ ತನ್ನ ಕಾರ್ಯಪಡೆಯೊಳಗಿನ ಜಾತೀಯತೆಯನ್ನು ಗೂಗಲ್ ಪರಿಹರಿಸಬೇಕು, ”ಎಂದು ತೇನ್ಮೋಳಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏಪ್ರಿಲ್ 18 ರಂದು ದಲಿತ ಇತಿಹಾಸ ತಿಂಗಳಿಗೆ ಹೊಂದಿಕೆಯಾಗುವಂತೆ ತೇನ್ಮೋಳಿ ಅವರು ಭಾಷಣವನ್ನು ನೀಡಲು ನಿರ್ಧರಿಸಿದ್ದರು ಆದರೆ ಅದನ್ನು ಮುಂದೂಡಲಾಗಿದೆ ಎಂದು ತಿಳಿಸಲಾಯಿತು. ಈ ಬೆಳವಣಿಗೆಯಿಂದ ತಾನು ತೊಂದರೆಗೀಡಾಗಿದ್ದೇನೆ ಮತ್ತು ತನ್ನ ಮಾತು ಗೂಗಲ್‌ನ ಉದ್ಯೋಗಿಗಳಿಗೆ ಸಮಸ್ಯೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಅವರು ನಂತರ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದ್ದರು.
“ಜಾತಿ ತಾರತಮ್ಯ, ಗುರುತಿಸಲಾಗದಿದ್ದರೂ, ವ್ಯಾಪಾರಕ್ಕೆ ಕೆಟ್ಟದು ಮತ್ತು ಇದು ಅಸುರಕ್ಷಿತ ಮತ್ತು ಪ್ರತಿಕೂಲವಾದ ಕೆಲಸದ ಸ್ಥಳಗಳನ್ನು ಸೃಷ್ಟಿಸುತ್ತದೆ. ಗೂಗಲ್‌ನ ಅತಿದೊಡ್ಡ ಮಾರುಕಟ್ಟೆಗಳಲ್ಲಿ ಒಂದಾದ ಭಾರತದಲ್ಲಿ, ಜಾತಿ-ದಮನಿತ ಜನರು ಕನಿಷ್ಠ 25 ರಿಂದ 30% ಮಾರುಕಟ್ಟೆಯನ್ನು ಹೊಂದಿದ್ದಾರೆ” ಎಂದು ಅವರು ಬರೆದಿದ್ದಾರೆ.
“ನನ್ನಂತಹ ಸಲಹೆಗಾರರು ಕೂಡ ನೀಮ್ಮ ನೇತೃತ್ವದ ಕಂಪನಿಯಲ್ಲಿ ಜಾತಿ ನಿಂದನೆಗಳನ್ನು ಎದುರಿಸುತ್ತಿದ್ದಾರೆ. ಗೂಗಲ್‌ನಲ್ಲಿ ಜಾತಿ-ತುಳಿತಕ್ಕೊಳಗಾದ ಕಾರ್ಮಿಕರು ಮುಂದೆ ಬರಲು ಧೈರ್ಯಮಾಡಿದರೆ ಏನನ್ನು ಎದುರಿಸುತ್ತಾರೆ ಎಂದು ಊಹಿಸಿ, ”ಎಂದು ತೇನ್ಮೊಳಿ ಬರೆದಿದ್ದಾರೆ.
“ನಾವು ಈಗ ನಮ್ಮ ತಾಯ್ನಾಡಿನಿಂದ ದೂರವಿದ್ದರೂ, ಜಾತಿಯ ಭಯಾನಕತೆಯು ನಮ್ಮಿಬ್ಬರನ್ನೂ ರೂಪಿಸಿದೆ. ಮತ್ತು ಆತ್ಮಸಾಕ್ಷಿಯ ಜನರಂತೆ, ಜಾತಿ ತಾರತಮ್ಯವು ನಮ್ಮ ಜನರನ್ನು ಪಟ್ಟುಬಿಡದೆ ಹೇಗೆ ಹಿಡಿದಿಟ್ಟುಕೊಳ್ಳುತ್ತದೆ ಎಂಬುದನ್ನು ಬೇರೆ ರೀತಿಯಲ್ಲಿ ನೋಡದಿರುವ ಅವಶ್ಯಕತೆಯಿದೆ. ಜಾತಿ ಸವಲತ್ತು ಹೊಂದಿರುವ ವ್ಯಕ್ತಿಯಾಗಿ, ಈ ಸಂಭಾಷಣೆಗಳನ್ನು ಅನುಗ್ರಹದಿಂದ ಮುನ್ನಡೆಸಲು ನಿಮಗೆ ಅವಕಾಶವಿರುವ ಕಂಪನಿಯಲ್ಲಿ ಈ ಸಮಸ್ಯೆಯನ್ನು ಪರಿಹರಿಸಲು ನೀವು ಸರಿಯಾದ ಕೆಲಸವನ್ನು ಮಾಡುವ ಪಾತ್ರದಲ್ಲಿದ್ದೀರಿ, ”ಎಂದು ಅವರು ಬರೆದಿದ್ದಾರೆ.
ಈಕ್ವಾಲಿಟಿ ಲ್ಯಾಬ್ಸ್ ತೆನ್ಮೋಳಿ ಅವರ ಭಾಷಣವನ್ನು ರದ್ದುಗೊಳಿಸಿರುವುದನ್ನು ಖಂಡಿಸಿದೆ, ಗೂಗಲ್‌ನ ವರ್ತನೆಯನ್ನು ಜಾತಿವಾದಿ ಎಂದು ಬಣ್ಣಿಸಿದೆ ಮತ್ತು ಅದರ ವೈವಿಧ್ಯತೆ ಮತ್ತು ಒಳಗೊಳ್ಳುವಿಕೆಯ ಉಪಕ್ರಮದ ನ್ಯಾಯಸಮ್ಮತತೆಯನ್ನು ಪ್ರಶ್ನಿಸಿದೆ. ಗೂಗಲ್ “ಜಾತಿ ಧರ್ಮಾಂಧತೆ ಮತ್ತು ಕಿರುಕುಳವನ್ನು ಅತಿರೇಕವಾಗಿ ನಡೆಸಲು ಅವಕಾಶ ಮಾಡಿಕೊಟ್ಟಿದೆ” ಎಂದು ಈಕ್ವಾಲಿಟಿ ಲ್ಯಾಬ್ಸ್ ಹೇಳಿದೆ.












