ದ್ವಿತೀಯ ಪಿಯುಸಿ ಪರೀಕ್ಷೆ ಮೇ 18ರವರೆಗೆ ನಡೆಯಲಿದೆ. ಆದರೆ ಈ ವರ್ಷ ಪ್ರತೀ ಬಾರಿಯಂತೆ ಫಲಿತಾಂಶ ಲೇಟಾಗಲ್ಲ. ಇದೆ ಮೊದಲ ಬಾರಿಗೆ ಒಂದೊಂದು ವಿಷಯದ ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನಕ್ಕೆ ಆಗಲಿದೆ.
ಏಪ್ರಿಲ್ 22ರಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗಳು ಇನ್ನು ಮುಗಿದಿಲ್ಲ. ಪ್ರತಿ ವರ್ಷ ಎಲ್ಲ ವಿಷಯಗಳ ಪರೀಕ್ಷೆ ಮುಗಿದ ಬಳಿಕ ಮೌಲ್ಯಮಾಪನ ಕಾರ್ಯ ಶುರು ಮಾಡ್ತಿದ್ದ ಪಿಯು ಮಂಡಳಿ, ಇದೀಗ ಒಂದು ವಿಷಯದ ಪರೀಕ್ಷೆ ಮುಗಿದ ಬಳಿಕವೇ ಮೌಲ್ಯಮಾಪನ ಕಾರ್ಯ ಪ್ರಾರಂಭಕ್ಕೆ ಸಜ್ಜಾಗುತ್ತಿದೆ. ಹೌದು, ಜೂನ್ ಕೊನೆ ವಾರದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಹೊರ ಬೀಳಲಿದೆ. ಪ್ರತಿ ವರ್ಷದಂತೆ ಈ ಬಾರಿ ದ್ವಿತೀಯ PU ಫಲಿತಾಂಶ ತಡವಾಗಲ್ಲ. ದ್ವಿತೀಯ PU ಪರೀಕ್ಷೆ ಫಲಿತಾಂಶ ನೀಡಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈವರೆಗೆ ಪರೀಕ್ಷೆ ಮುಗಿದ ನಂತರ ಮೌಲ್ಯಮಾಪನ ಮಾಡಲಾಗ್ತಿತ್ತು. ಆದರೆ ಈ ಬಾರಿ ಒಂದೊಂದು ಪರೀಕ್ಷೆ ಮುಗಿಯುತ್ತಿದ್ದಂತೆ ಮೌಲ್ಯಮಾಪನ ಮಾಡಲಾಗುತ್ತಿದೆ.
ಕಳೆದ ವರ್ಷ ಕೊರೊನಾದಿಂದ ಫಲಿತಾಂಶ 1 ತಿಂಗಳು ತಡವಾಗಿತ್ತು. ಪ್ರತಿ ವರ್ಷ ಮಾರ್ಚ್, ಏಪ್ರಿಲ್ ನಲ್ಲಿ ಪಿಯು ಪರೀಕ್ಷೆ ನಡೆಯುತ್ತಿತ್ತು. ಆದರೆ ಈ ವರ್ಷ ಏಪ್ರಿಲ್, ಮೇ ತಿಂಗಳಲ್ಲಿ ಪರೀಕ್ಷೆ ನಡೆಯುತ್ತಿದೆ. PU ಫಲಿತಾಂಶ ಬೇಗ ನೀಡಲು ರಜಾ ದಿನಗಳಲ್ಲೂ ಮೌಲ್ಯಮಾಪನ ಮಾಡಲು ನಿರ್ಧರಿಸಲಾಗಿದೆ. ಮೊದಲಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮೌಲ್ಯಮಾಪಕರ ನಿಯೋಜನೆ ಮಾಡಲಾಗಿದೆ. ಮೇ 20ರಿಂದ ಜೂನ್ 15ರೊಳಗೆ ಮೌಲ್ಯಮಾಪನ ಕಾರ್ಯ ಪೂರ್ಣಗೊಳ್ಳಲಿದೆ. ಉನ್ನತ ಶಿಕ್ಷಣಕ್ಕೆ ಹೋಗಲು ವಿದ್ಯಾರ್ಥಿಗಳಿಗೆ ತೊಂದ್ರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರದ ಪರೀಕ್ಷೆಗಳಿಗೆ ಅನುಕೂಲವಾಗುವಂತೆ ತ್ವರಿತಗತಿಯಲ್ಲಿ ರಿಸಲ್ಟ್ ನೀಡಲಾಗುತ್ತೆ ಎಂದು ಬೆಂಗಳೂರಿನಲ್ಲಿ PU ಮಂಡಳಿ ನಿರ್ದೇಶಕ ಆರ್.ರಾಮಚಂದ್ರನ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಮುಂದಿನ ಶೈಕ್ಷಣಿಕ ವರ್ಷ ಹಾಗೂ ವೃತ್ತಿಪರ ಕೋರ್ಸ್ ಗಳಿಗೆ ವಿಳಂಬವಾಗದಂತೆ ಆದಷ್ಟು ಬೇಗ ಫಲಿತಾಂಶ ನೀಡಲು ಪಿಯು ಮಂಡಳಿ ನಿರ್ಧರಿಸಿದೆ. ಎಲ್ಲಾ ಅಂದುಕೊಂಡಂತೆ ಆದರೆ ಜೂನ್ ಕೊನೆ ವಾರದಲ್ಲೇ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ.