ಬೆಂಗಳೂರು: ರಾಜ್ಯ ಸರ್ಕಾರದ ಅವಧಿ ಇನ್ನು ಒಂದು ತಿಂಗಳು ಮಾತ್ರವಿದ್ದು, ಈ ಸಮಯದಲ್ಲಿ ಬಿಜೆಪಿ ಸರ್ಕಾರ ಎಲ್ಲಾ ಇಲಾಖೆಗಳ ಟೆಂಡರ್ ಅನ್ನು ತರಾತುರಿಯಲ್ಲಿ ಸಿದ್ದಪಡಿಸಿ 500 ಕೋಟಿ ರೂ ಟೆಂಡರ್ ಅನ್ನು 1000 ಕೋಟಿ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ತಮ್ಮ ನಿವಾಸದಲ್ಲಿ ಬುಧವಾರ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಟೆಂಡರ್ ಗೋಲ್ ಮಾಲ್ ನಡೆಸುತ್ತಿದ್ದು, ಬಜೆಟ್ ಅಧಿವೇಶನದ ನಂತರ ಮುಂದಿನ ತಿಂಗಳು 7-10 ರ ಒಳಗೆ ಚುನಾವಣಾ ನೀತಿ ಸಂಹಿತೆ ಜಾರಿಯಾಗಲಿದೆ. ಬಿಜೆಪಿ ಸರ್ಕಾರ ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ, ಸಣ್ಣ ನೀರಾವರಿ, ಇಂಧನ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ಟೆಂಡರ್ ಗಳನ್ನು ತರಾತುರಿಯಲ್ಲಿ ಸಿದ್ಧಪಡಿಸುತ್ತಿದೆ. ಈ ಬಗ್ಗೆ ನಾವು ಎಲ್ಲ ರೀತಿಯ ದಾಖಲೆ ನೀಡಲು ಸಿದ್ಧವಿದ್ದೇವೆ ಎಂದು ಹೇಳಿದರು.
ಪ್ರಮುಖ ಇಲಾಖೆಗಳಲ್ಲಿ ಪ್ರತಿ ಟೆಂಡರ್ ಮೊತ್ತವನ್ನು ದುಪ್ಪಟ್ಟು ಮಾಡಿ ಕೆಲವನ್ನು ಸಂಪುಟದಲ್ಲಿ ತೀರ್ಮಾನಿಸಿ ನೀಡಿದರೆ, ಮತ್ತೆ ಕೆಲವನ್ನು ಸಂಪುಟದ ತೀರ್ಮಾನವಿಲ್ಲದೇ ಕೇವಲ 7 ದಿನಗಳ ಅಲ್ಪಾವಧಿಯಲ್ಲೇ ನೀಡುತ್ತಿದ್ದಾರೆ. ಶಾಸಕರಿಗೆ ಇದರ ಉಸ್ತುವಾರಿ ವಹಿಸಿ, ಅವರೇ ಗುತ್ತಿಗೆದಾರರನ್ನು ಗುರುತಿಸಿ ಟೆಂಡರ್ ನೀಡುವ ಜವಾಬ್ದಾರಿ ನೀಡಲಾಗಿದೆ. ಈ ಶಾಸಕರು ಬೀದಿ, ಬೀದಿಯಲ್ಲಿ ಗುತ್ತಿಗೆದಾರರಿಗೆ ಆಹ್ವಾನ ನೀಡುತ್ತಿದ್ದಾರೆ. ಈ ವಿಚಾರವಾಗಿ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಕೂಡ ದೂರು ನೀಡಿದ್ದಾರೆ ಎಂದು ಹೇಳಿದರು.

ಕಮಿಷನ್ ನೀಡುವವರ ಬಿಲ್ ಪಾಸ್
ಬಿಜೆಪಿ ಶಾಸಕರು, ಮಂತ್ರಿಗಿರಿ ಸಿಗದವರಿಗೆ ಈ ರೀತಿ ಟೆಂಡರ್ ಹಂಚುತ್ತಿದ್ದಾರೆ. ಈ ವಿಚಾರವಾಗಿ ಶಾಸಕರು, ಗುತ್ತಿಗೆದಾರರು ನಮಗೆ ಮಾಹಿತಿ ನೀಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಹಳೆ ಕಾಮಗಾರಿಯ ಸಾವಿರಾರು ಕೋಟಿ ಹಣ ಬಾಕಿ ಉಳಿಸಿಕೊಂಡಿದ್ದು, ಯಾರು ಮಂತ್ರಿಗಳು ಹಾಗೂ ಸರ್ಕಾರಕ್ಕೆ ಕಮಿಷನ್ ನೀಡುತ್ತಾರೋ ಅವರ ಬಿಲ್ ಮಾತ್ರ ಪಾಸ್ ಮಾಡುತ್ತಿದ್ದಾರೆ. ಇನ್ನು ನೂತನ ಟೆಂಡರ್’ಗಳನ್ನು ಪಾರದರ್ಶಕವಾಗಿ, ಅರ್ಹ ಗುತ್ತಿಗೆದಾರರಿಗೆ ನೀಡುತ್ತಿಲ್ಲ. ಶಿವರಾಮ ಕಾರಂತ್ ಲೇಔಟ್ ನಿರ್ಮಾಣಕ್ಕೆ ಜಮೀನು ವಶಪಡಿಸಿಕೊಳ್ಳದೇ ಟೆಂಡರ್ ಕರೆಯಲಾಗಿದೆ. ಅಲ್ಲದೆ ಮುಂಗಡವಾಗಿ ಹಣ ಬಿಡುಗಡೆ ಮಾಡಿ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಅಧಿಕಾರಕ್ಕೆ ಬಂದರೆ ಅಕ್ರಮ ಟೆಂಡರ್ ರದ್ದು
ಬೆಂಗಳೂರು ನಗರದಲ್ಲಿ ಯಾವುದಾದರೂ ಕೆಲಸ ಆಗಬೇಕಾದರೆ ಸಿಎಂ ಕಚೇರಿಯಲ್ಲಿ ಡೀಲ್ ಆಗುತ್ತಿವೆ. ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರದ ವಿರುದ್ದ ನಾವು ಹೋರಾಟ ಮಾಡುತ್ತೇವೆ. ಸರ್ಕಾರ, ಗುತ್ತಿಗೆದಾರರು, ಅಧಿಕಾರಿಗಳಿಗೆ ಈ ಸಂದರ್ಭದಲ್ಲಿ ಎಚ್ಚರಿಕೆ ನೀಡುತ್ತಿದ್ದೇವೆ. ನಮ್ಮ ಸರ್ಕಾರ ಮುಂದೆ ಅಧಿಕಾರಕ್ಕೆ ಬಂದ ನಂತರ ಕಳೆದ 6 ತಿಂಗಳಿಂದ ನಡೆಸಲಾಗಿರುವ ಅಕ್ರಮ ಟೆಂಡರ್ ಗಳನ್ನು ನಾವು ರದ್ದು ಮಾಡಲಿದ್ದೇವೆ. ಎಲ್ಲ ಟೆಂಡರ್ ತನಿಖೆ ಮಾಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.