ಬಿಬಿಎಂಪಿ ಚುನಾವಣೆ ಸಂಬಂಧ ವಾರ್ಡ್ ಮರುವಿಂಗಡಣೆ ಆಯ್ತು. ವಿಂಗಡಣೆಯಾದ ವಾರ್ಡ್ ಗಳಿಗೆ ಮೀಸಲಾತಿಯನ್ನು ನಿಗಧಿ ಮಾಡಿಯೂ ಆಯ್ತು. ಆದ್ರೆ ಮೀಸಲಾತಿ ನಿಗಧಿ ಸಂಬಂಧ ಅಸಮಧಾನ ಹೊರಬಿದ್ದಿದ್ದು ಈ ಅಸಮಧಾನದ ನಡುವೆಯೇ ಅಂತಿಮ ಪಟ್ಟಿ ಪ್ರಕಟವಾಗಿದ್ರೆ, ಇತ್ತ ಹೈ ಕೋರ್ಟ್ ನಲ್ಲಿ ಪಾಲಿಕೆ ಚುನಾವಣೆ ಸಂಬಂಧ ವಿಚಾರಣೆಯೂ ನಡೆದಿದೆ.
ರಾತ್ರೋರಾತ್ರಿ ಬಿಬಿಎಂಪಿ ವಾರ್ಡ್ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ
ಬಿಬಿಎಂಪಿ ಚುನಾವಣೆ ಸಂಬಂಧ ವಾರ್ಡ್ ಮೀಸಲಾತಿ ಅಂತಿಮ ಪಟ್ಟಿ ಪ್ರಕಟವಾಗಿದೆ. ಕಳೆದ 15 ದಿನಗಳ ಹಿಂದೆ ವಾರ್ಡ್ ವಾರು ಮೀಸಲಾತಿ ಕರುಡು ಪಟ್ಟಿ ಪ್ರಕಟಿಸಿದ್ದ ಸರ್ಕಾರ, 10 ದಿನಗಳ ಕಾಲ ಸಾರ್ವಜನಿಕ ಆಕ್ಷೇಪಣೆಗೆ ಅವಕಾಶ ನೀಡಿತ್ತು. ಹೀಗಾಗಿ 3000 ಕ್ಕೂ ಹೆಚ್ಚು ಆಕ್ಷೇಪಣೆ ಅರ್ಜಿಗಳು ಸಲ್ಲಿಸಿಕೆಯಾಗಿದ್ವು. ಸಾರ್ವಜನಿಕ ಆಕ್ಷೇಪಣೆ ಪರಿಶೀಲನೆ ನಂತರ ಸರ್ಕಾರ ಅಂತಿಮ ಪಟ್ಟಿ ಪ್ರಟಿಸಿದ್ದು, 2011 ರ ಜನಗಣತಿಯಂತೆ ಮೀಸಲಾತಿ ಅಂತಿಮಗೊಳಿಸಿ ಅಧಿಸೂಚನೆ ಹೊರಡಿಸಿದೆ. ಆಕ್ಷೇಪಣೆಗಳ ಪರಿಶೀಲನೆಗಾಗಿ ನಗರಾಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಪರಿಶೀಲನಾ ಸಮಿತಿ ರಚನೆ ಮಾಡಲಾಗಿತ್ತು. ಈ ಪರಿಶೀಲನಾ ಸಮಿತಿ 243 ವಾರ್ಡ್ ಗಳ ಮೀಸಲಾತಿ ಆಕ್ಷೇಪಣೆಗಳನ್ನ ಕೂಲಂಕಷ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಸದ್ಯ ಸಮಿತಿಯ ಶಿಫಾರಸ್ಸುಗಳನ್ನ ಒಪ್ಪಿ ಸರ್ಕಾರ ಕಳೆದ ರಾತ್ರಿ ಅಂತಿಮ ಅಧಿಸೂಚನೆ ಹೊರಡಿಸಿದೆ.

ಸಾವಿರಾರು ಆಕ್ಷೇಪಣೆಗಳು ಇದ್ರೂ ಯಾವುದೇ ಬದಲಾವಣೆ ಮಾಡದ ಸರ್ಕಾರ
ವಾರ್ಡ್ ಮೀಸಲಾತಿ ಸಂಬಂಧ ಸರ್ಕಾರ 243 ವಾರ್ಡ್ ಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಳೆಯ ಅಧಿಸೂಚನೆಯನ್ನೇ ಹೋಲುವ ಅಂತಿಮ ಅಧಿಸೂಚನೆಯನ್ನ ಹೊರಡಿಸಿದ್ದು, ಮೀಸಲಾತಿ ವಿಚಾರದಲ್ಲಿ ಸರ್ಕಾರ ತಾರತಮ್ಯ ಮಾಡ್ತಿದೆ ಎಂದು ಕಾಂಗ್ರೆಸ್ ನಾಯಕರು ಅಸಮಧಾನ ಹೊರ ಹಾಕಿದ್ದಾರೆ. ನಾಮಕಾವಸ್ಥೆಗೆ ಸರ್ಕಾರ ಆಕ್ಷೇಪಣೆಗಳನ್ನ ಸ್ವೀಕರಿಸಿದ್ದು 3000 ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ರೂ ಯಾವುದೇ ಬದಲಾವಣೆ ಮಾಡಿಲ್ಲ. ಕಾಂಗ್ರೆಸ್ ಜೆಡಿಎಸ್ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಹೆಚ್ಚು ಮೀಸಲಾತಿ ನೀಡಲಾಗಿದ್ದು, ಹೆಚ್ಚಿನ ಸಾಮಾನ್ಯ ಮೀಸಲಾತಿಗಳು ಬಿಜೆಪಿ ಪ್ರಭಾವವಿರುವ ವಾರ್ಡ್ ಗಳಲ್ಲಿ ನಿಗಧಿ ಮಾಡಲಾಗಿದೆ. ಹಿಂದಿನ ಮೀಸಲಾತಿ ಪಟ್ಟಿ ಅಧಿಸೂಚನೆಗೂ ಅಂತಿಮ ಅಧಿಸೂಚನೆಗೂ ವ್ಯತ್ಯಾಸ ಇಲ್ಲ ಅಂತಾ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರದ ಮೀಸಲಾತಿ ವಿರುದ್ಧ ರೊಚ್ಚಿಗೆದ್ದ ಕಾಂಗ್ರೆಸ್ ನಾಯಕರು
ಇನ್ನು ಮೀಸಲಾತಿ ಅಕ್ಷೇಪಣೆ ಅರ್ಜಿಗಳನ್ನೂ ಇಂದು ವಿಚಾರಣೆ ನಡೆಸಿದ ಹೈಕೋರ್ಟ ಇದೆ ತಿಂಗಳು 26 ರಂದು ಸುಪ್ರೀಂ ಕೋರ್ಟನಲ್ಲಿ ವಿಚಾರಣೆ ಇದೆ. ಅದನ್ನೂ ನೋಡಿ ಮುಂದಿನ ತೀರ್ಮಾನ ಕೈಗೋಳ್ತಿವಿ ಅಂತ ಅರ್ಜಿದರರ ಪರ ವಕೀಲರಿಗೆ ಸೂಚಿಸಿದೆ. ಇತ್ತ ಹೈಕೋರ್ಟನಲ್ಲಿ ಚುನಾವಣೆ ಆಯೋಗದ ಪರ ಹಿರಿಯ ವಕೀಲ ಕೆ.ಎನ್.ಫಣೀಂದ್ರ ವಾದ ಮಂಡಿಸಿ, ಸುಪ್ರೀಂ ಕೋರ್ಟ್ ಶೀಘ್ರ ಚುನಾವಣೆ ನಡೆಸಲು ಸೂಚಿಸಿದೆ. ಅರ್ಜಿದಾರರಿಗೆ ಆಕ್ಷೇಪಣೆಗಳಿದ್ದರೆ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲಿ. ಸುಪ್ರೀಂ ಕೋರ್ಟ್ ನಿಂದಲೇ ಸ್ಪಷ್ಟನೆ ಪಡೆಯಲಿ. ಸೆ.22 ರೊಳಗೆ ಮತದಾರರ ಪಟ್ಟಿ ಅಂತಿಮಗೊಳಿಸಲಾಗುವುದು. ಸೆ.22 ರ ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಆರಂಭವಾಗುತ್ತೆ ಅಂತ ವಾದಮಂಡಿಸಿದರು. ಇತ್ತ ಅರ್ಜಿದಾರರ ವಕೀಲರು ರಾಜ್ಯ ಸರ್ಕಾರ ನಿನ್ನೆ ಮೀಸಲಾತಿ ಅಂತಿಮ ಅಧಿಸೂಚನೆ ಹೊರಡಿಸಿದೆ. ಹೀಗಾಗಿ ವಾರ್ಡ್ ಪುನರ್ವಿಂಗಡಣೆಗೆ ತಡೆ ಕೋರಿ ವಾದ ಮಂಡಿಸಿದರು.ಅದ್ರೆ ಸರ್ಕಾರ ಎಲ್ಲವನ್ನೂ ತರಾತುರಿಯಲ್ಲಿ ಮಾಡುತ್ತಿದೆ. ಸುಪ್ರೀಂ ಕೋರ್ಟ್ ನಿಂದಲೇ ಸ್ಪಷ್ಟನೆ ಪಡೆಯುವುದು ಸೂಕ್ತ ಅಂತ ನ್ಯಾಮೂರ್ತಿ ಹೇಮಂತ್ ಚಂದನ್ ಗೌಡರ್ ಅಭಿಪ್ರಾಯ ವ್ಯಾಕ್ತಪಡಿಸಿ, ವಿಚಾರಣೆಯನ್ನೂ ಆ.29 ಕ್ಕೆ ಮುಂದೂಡಿದೆ. ಒಟ್ನಲ್ಲಿ ವಾರ್ಡ್ ಮೀಸಲಾತಿ ಸಂಬಂಧ ಅಸಮಧಾನ ಇದ್ದರೂ ಸರ್ಕಾರ ಹಳೆಯ ಮೀಸಲಾತಿಯನ್ನೆ ಅಂತಿಮ ಮಾಡಿದೆ. ಹೀಗಾಗಿ ಮುಂದೆ ಕಾಂಗ್ರೆಸ್ ನಾಯಕರು ಹಾಗೂ ಮಾಜಿ ಕಾರ್ಪೋರೇಟರ್ ಗಳ ನಡೆ ಹೇಗಿರಲಿದೆ ಎಂಬುದೆ ಪ್ರಶ್ನೆಯಾಗಿ ಉಳಿದಿದೆ.






