ಕೇಂದ್ರ ಸರ್ಕಾರ ಮಾಸ್ಕ್ ಕಡ್ಡಾಯ ಸೇರಿದಂತೆ ಯಾವುದೇ ಅವಶ್ಯಕತೆ ಇಲ್ಲ ಎಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಭಾರತ ಹೆದರುವ ಅಗತ್ಯ ಇಲ್ಲ. ಕೊರೊನಾ ಸೋಂಕು ಭಾರತಲ್ಲಿ ಹೆಚ್ಚಳ ಆಗಿಲ್ಲ. ಮುಂಜಾಗ್ರತೆ ಅಷ್ಟೇ ಸಾಕು ಎಂದಿತ್ತು. ಆ ಬಳಿಕ ರಾಜ್ಯದಲ್ಲೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಚಿವರು, ಅಧಿಕಾರಿಗಳ ಸಭೆ ನಡೆಸಿದ್ರು. ಆ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್, ರಾಜ್ಯದಲ್ಲಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗುವುದು. ILI, SARI ಲಕ್ಷಣ ಇದ್ದವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ, ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸುವುದು ಉತ್ತಮ, ಎಸಿ ಬಳಸುವ ಪ್ರದೇಶಗಳಲ್ಲೂ ಮಾಸ್ಕ್ ಇರಲಿ ಎಂದಿದ್ದರು. ಇನ್ನೂ ಏರ್ಪೋರ್ಟ್ಗಳಲ್ಲಿ ಱಂಡಮ್ ಟೆಸ್ಟಿಂಗ್ ಮಾಡಲಾಗುವುದು. ಆಮ್ಲಜನಕ ಪ್ಲಾಂಟ್, ಕೋವಿಡ್ ಹಾಸಿಗೆ ಮೀಸಲು ಇಡುವುದಕ್ಕೆ ನಿರ್ಧಾರ ಮಾಡಿದ್ದೇವೆ. 3ನೇ ಡೋಸ್ ಲಸಿಕಾಕರಣಕ್ಕೆ ವಿಶೇಷ ಒತ್ತು ನೀಡುತ್ತೇವೆ. ಲಸಿಕೆ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು. ಸಂಜೆ ಕೋವಿಡ್ ಮಾರ್ಗಸೂಚಿ ಬಿಡುಗಡೆ ಮಾಡ್ತೇವೆ ಎಂದಿದ್ದರು. ಅದರಂತೆ ಮಾರ್ಗಸೂಚಿ ಬಿಡುಗಡೆ ಆಯ್ತು. ಆದರೆ ಒಂದಲ್ಲ, ಎರಡು. ಇದೇ ಗೊಂದಲ ಸೃಷ್ಟಿಸಿತು.
ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಇರಲೇ ಇಲ್ಲ..!
ಮುಂಜಾಗ್ರತೆ ತೆಗೆದುಕೊಳ್ಳಬೇಕು, ಈಗ ಇರುವ ವ್ಯವಸ್ಥೆಗೆ ಪೂರಕವಾಗಿ ಕೋವಿಡ್ ಸೋಂಕನ್ನು ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಸಿಟಿ-ವ್ಯಾಲ್ಯೂ 25ಕ್ಕಿಂತ ಕಡಿಮೆ ಬಂದವರನ್ನು ಜೀನೋಮ್ಟೆಸ್ಟಿಂಗ್ ಮಾಡಿಸಬೇಕು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶೇಕಡ 2ರಷ್ಟು ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗ್ತಿದೆ. ಅದನ್ನು ಹಾಗೇ ಮುಂದುವರಿಸಿ. ಸೋಂಕಿನ ಲಕ್ಷಣ ಇದ್ದವರು ಹಾಗು ಸಂಪರ್ಕಿತರಿಗೆ ಕೋವಿಡ್ ಟೆಸ್ಟ್ ಮಾಡಿಸಿ. ಬೂಸ್ಟರ್ ಡೋಸ್ಗೆ ವೇಗ ಕೊಟ್ಟು ಜನವರಿ 2023ರ ಒಳಗಾಗಿ ಶೇಕಡ 50ರಷ್ಟು ಗುರಿ ಸಾಧಿಸಬೇಕು. ಸರ್ಕಾರಿ ಹಾಗು ಖಾಸಗಿ ಆಸ್ಪತ್ರೆಗಳು ಸನ್ನದ್ಧರಾಗಬೇಕು. ಕನಿಷ್ಠ ಸಂಖ್ಯೆಯ ಐಸೋಲೇಷನ್ ಬೆಡ್ಗಳನ್ನು ಮೀಸಲಿಡಬೇಕು. ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪೂರೈಕೆ, ಔಷಧಿ, ಬೆಡ್ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳುವುದು. ಆಕ್ಸಿಜನ್ ಸರಾಗವಾಗಿ ಪೂರೈಕೆ ಆಗ್ತಿದೆಯಾ ಅನ್ನೋದನ್ನು 15 ದಿನಗಳಿಗೆ ಒಮ್ಮೆ ಸುಮ್ಮನೆ ಆದರೂ ಫ್ಲೋ ಮಾಡಿ ಪರಿಶೀಲಿಸಿಕೊಳ್ಳಿ. ಆರೋಗ್ಯ ಸಿಬ್ಬಂದಿ ಹಾಗು ಆರೋಗ್ಯ ಕಾರ್ಯಕರ್ತರು ಮಾಸ್ಕ್ ಧರಿಸಿ ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಮತ್ತೊಂದು ಮಾರ್ಗಸೂಚಿಸಿ ಕಂಪ್ಲೀಟ್ ಮಾರ್ಗಸೂಚಿಯನ್ನೇ ಬದಲಿಸಿತು.

ರಾತ್ರೋರಾತ್ರಿ ಮಾರ್ಗಸೂಚಿ ಬದಲಾಗಿದ್ದು ಏಕೆ..?
ರಾತ್ರಿ 9 ಗಂಟೆ ಸುಮಾರಿಗೆ ಒಂದು ಮಾರ್ಗಸೂಚಿ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ ಕೇವಲ 1 ಗಂಟೆ ಅವಧಿಯಲ್ಲಿ ರಾತ್ರಿ 10 ಗಂಟೆಗೆ ಮತ್ತೊಂದು ಮಾರ್ಗಸೂಚಿಯನ್ನು ಬಿಡುಗಡೆ ಮಾಡಿತ್ತು. ಹೊಸ ಮಾರ್ಗಸೂಚಿಯಲ್ಲಿ ಎಲ್ಲಾ ರೀತಿಯ AC ಕೊಠಡಿಗಳಲ್ಲಿ ಮಾಸ್ಕ್ ಕಡ್ಡಾಯ, ಮದುವೆ, ಮುಂಜಿ, ನಾಮಕರಣಗಳಲ್ಲೂ ಮಾಸ್ಕ್ ಧರಿಸಿರಬೇಕು. ಪಬ್, ಬಾರ್, ರೆಸ್ಟೋರೆಂಟ್ನಲ್ಲೂ ಮಾಸ್ಕ್ ಬೇಕು. ಸಿನಿಮಾ, ಮಾಲ್, ಕಚೇರಿಗಳಲ್ಲೂ ಮಾಸ್ಕ್ ಕಡ್ಡಾಯ. ಬಸ್ಸು, ರೈಲು, ಮೆಟ್ರೋ, ವಿಮಾನದಲ್ಲೂ ಮಾಸ್ಕ್ ಹಾಕಬೇಕು. ವೃದ್ಧರು, ಅನಾರೋಗ್ಯ ಪೀಡಿತರು ಮಾಸ್ಕ್ ಧರಿಸಬೇಕು. ILI ಮತ್ತು SARI ಸಮಸ್ಯೆಗಳಿದ್ರೆ ಟೆಸ್ಟ್ ಮತ್ತು ಪ್ರತ್ಯೇಕ ಕೊಠಡಿಯಲ್ಲಿರಿ. 6 ಅಡಿ ಅಂತರ ಕಾಪಾಡಿ, ಗುಂಪು ಗೂಡುವುದನ್ನ ತಡೆಗಟ್ಟಬೇಕು. ಎಲ್ಲಾ ಜಿಲ್ಲೆಗಳ ಆರೋಗ್ಯ ಪ್ರಾಧಿಕಾರಕ್ಕೆ ಜವಾಬ್ದಾರಿ ಕೊಟ್ಟ ಸರ್ಕಾರ ಹೊ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಬಹಿರಂಗ ಸಭೆಗಳನ್ನು ತೆರೆದ ಮೈದಾನದಲ್ಲಿ ಆಯೋಜನೆ ಮಾಡ್ಬೇಕು. ಮುಂಜಾನೆ ಹಾಗು ಸಂಜೆ ಶೀತ ಗಾಳಿ ತಪ್ಪಿಸಿ ಸಭೆ ಆಯೋಜನೆ ಮಾಡಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಯೋಗಾ ಮಾಡಿ ಎಂದು ಪುಕ್ಕಟ್ಟೆ ಸಲಹೆಯನ್ನೂ ನೀಡಿದ್ದಾರೆ.
ಸರ್ಕಾರದ ಈ ನವರಂಗಿ ಆಟ, ವಿರೋಧ ಪಕ್ಷಗಳಿಗೆ ಊಟ..!
ಸರ್ಕಾರ ಮಾರ್ಗಸೂಚಿ ಹೊರಡಿಸುವ ಮೊದಲೇ ರಾಜ್ಯ ಸರ್ಕಾರದ ವಿರುದ್ಧ ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರು ವಾಗ್ದಾಳಿ ಮಾಡಿದ್ದರು. ಪಂಚರತ್ನ ಯಾತ್ರೆ ನಿಲ್ಲಿಸಲು ಕೊರೊನಾ ಭೂತವನ್ನು ಬಿಡಲಾಗ್ತಿದೆ. ಇದು ‘ಕೇಶವಕೃಪ’ದಿಂದ ಬಂದಿರುವ ಕೊರೊನಾ ಭೂತದ ಹುನ್ನಾರ ಎಂದು ಮಂಡ್ಯದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದರು. ಜೆಡಿಎಸ್ ರಥಯಾತ್ರೆ ನಿಲ್ಲಿಸಲು ಕೇಶವಕೃಪಾದಲ್ಲಿ ಚಿಂತನೆ ನಡೆದಿದೆ. ರಥಯಾತ್ರೆಯಲ್ಲಿ ಸೇರುತ್ತಿರುವ ಜನರ ಅಲೆ ನೋಡಿ ಈ ರೀತಿ ಮಾಡ್ತಿದ್ದಾರೆ ಎಂಬ ಮಾಹಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗಲೂ ಇದೇ ರೀತಿ ಮಾಡಿದ್ರು. ಈಗ ರಾಹುಲ್ ಭಾರತ್ ಜೋಡೋ ಯಾತ್ರೆಯಿಂದ ಕಂಗಾಲು ಆಗಿದ್ದಾರೆ. ರಾಹುಲ್ಗೆ ಜನಬೆಂಬಲ ನೋಡಿ ಬಿಜೆಪಿ ಹೀಗೆಲ್ಲಾ ಮಾಡ್ತಾ ಇದೆ ಎಂದು ರಾಜ್ಯ ಹಾಗು ಕೇಂದ್ರ ಸರ್ಕಾರ ಕೊರೊನಾ ರೂಲ್ಸ್ ಬಗ್ಗೆ ಟೀಕಿಸಿದ್ದರು. ಇದು ರಾಜಕೀಯ ಪ್ರೇರಿತ, ನಾವೇನು ಅಮೆರಿಕ, ಚೀನಾದಲ್ಲಿ ಕೊರೊನಾ ಹರಡಿಸಲು ಹೋಗಿದ್ವಾ..? ಸ್ವಲ್ಪ ತಲೆಯಲ್ಲಿ ಬುದ್ಧಿ ಇಟ್ಕೊಂಡು ಮಾತನಾಡುವುದು ಸೂಕ್ತ ಎಂದು ಆರೋಗ್ಯ ಸಚಿವ ಡಾ ಸುಧಾಕರ್ ತಿರುಗೇಟು ನೀಡಿದ್ದರು. ಆದರೆ ಸರ್ಕಾರ ಸಂಜೆ ಬಳಿಕ ಮಾರ್ಗಸೂಚಿಯಲ್ಲಿ ಮಾಡಿದ ಗೊಂದಲ, ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪ ಸರಿನಾ..? ಎನ್ನುವ ಪ್ರಶ್ನೆಯನ್ನು ಮನಸ್ಸಲ್ಲಿ ಹುಟ್ಟು ಹಾಕುತ್ತಿರುವುದು ನಿಜ.
ಕೃಷ್ಣಮಣಿ