ಹೊಸ ವರ್ಷದ ಹಿನ್ನಲೆಯಲ್ಲಿ ಕಬ್ಬು ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಬಂಪರ್ ಕೊಡುಗೆ ನೀಡಲಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೊಲ್ಯಾಸಿಸ್ ಮಾರಾಟದಿಂದ ಕಾರ್ಖಾನೆಗಳಿಗೆ ಬರುವ ಲಾಭಾಂಶವನ್ನು ರೈತರಿಗೆ ವರ್ಗಾಯಿಸಲು ಸಕ್ಕರೆ ಕಾರ್ಖಾನೆಗಳಿಗೆ ಆದೇಶ ನೀಡಿದೆ.
ಇದರ ಜೊತೆಗೆ FRP ದರ ಹೊರತುಪಡಿಸಿ, ಪ್ರತೀ ಮೆಟ್ರಿಕ್ ಟನ್ಗೆ 100 ರೂಪಾಯಿ ಹೆಚ್ಚು ಪಾವತಿಸಲು ಆದೇಶಿಸಲಾಗಿದೆ. ಈ ಮೂಲಕ ರಾಜ್ಯದ ಕಬ್ಬು ಬೆಳೆಗಾರರಿಗೆ 622 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಂದಾಯವಾಗಲಿದೆ ಎಂದು ತಿಳಿದು ಬಂದಿದೆ.
ಈ ಮುನ್ನ ರಾಜ್ಯ ಸರ್ಕಾರ ಎಥೆನಾಲ್ನಿಂದ ಬರುವ ಲಾಭಾಂಶದಲ್ಲಿ 50 ರೂಗಳಂತೆ ಒಟ್ಟು ಎಥೆನಾಲ್ನಿಂದ 204 ಕೋಟಿ ರೂಪಾಯಿ ಪಾವತಿಸಲು ಆದೇಶಿಸಿತ್ತು. ಕಬ್ಬಿನ ಉಪ ಉತ್ಪನ್ನಗಳಾದ ಎಥೆನಾಲ್ ಮತ್ತು ಮೊಲ್ಯಾಸಿಸ್ ಮೂಲಕ ಒಟ್ಟಾರೆ ಈ ಸಾಲಿನಲ್ಲಿ ಎಫ್ಆರ್ಪಿ ದರ ಹೊರತುಪಡಿಸಿ, ಕಬ್ಬು ಬೆಳೆಗಾರರಿಗೆ ಒಟ್ಟು 804 ಕೋಟಿ ರೂಗಳನ್ನು ಹೆಚ್ಚುವರಿಯಾಗಿ ಪಾವತಿಸಲು ಈವರೆಗೆ ಆದೇಶಿಸಲಾಗಿದೆ.