ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಟೀಕಿಸಿ ಟ್ವೀಟ್ ಮಾಡಿದ್ದ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿಗೆ ಅಸ್ಸಾಂ ಸೋಮವಾರ ಜಾಮೀನು ನೀಡಿದ್ದಾದರೂ, ಜೀಮೀನು ನೀಡಿದ ಬೆನ್ನಲ್ಲಿಯೇ ಅಸ್ಸಾಂ ಪೊಲೀಸ್ ಹೊಸ ಕೇಸ್ ನಲ್ಲಿ ಜಿಗ್ನೇಶ್ ಮೇವಾನಿಯನ್ನು ಮತ್ತೆ ಬಂಧಿಸಿರುವುದನ್ನು ಹಲವು ರಾಜಕೀಯ ನಾಯಕರು ವಿರೋಧಿಸಿ ಜಿಗ್ನೇಶ್ ಪರ ಬ್ಯಾಟ್ ಬೀಸಿದ್ದರು. ಈಗ ಬಹುಭಾಷ ನಟ ಪ್ರಕಾಶ್ ರೈ ಕೂಡ ಮೇವಾನಿ ಬೆನ್ನಿಗೆ ನಿಂತು ಕೇಂದ್ರ ಸರ್ಕಾರವನ್ನು ಟೀಕಿಸಿದೆ.
ಜಿಗ್ನೇಶ್ ಮೇವಾನಿ ಬಂಧನವನ್ನು ಖಂಡಿಸಿ ಟ್ವೀಟ್ ಮಾಡಿರುವ ಬಹುಭಾಷ ನಟ ಪ್ರಕಾಶ್ ರೈ, ನಮ್ಮ ಮಹಾತ್ಮಾ ಗಾಂಧಿಯನ್ನು ಕೊಂದ ಸ್ವತಂತ್ರ ಭಾರತದ ಮೊದಲ ಭಾರತೀಯ ಭಯೋತ್ಪಾದಕ ಗೋಡ್ಸೆ .. ಹೃದಯದಲ್ಲಿ ಗೋಡ್ಸೆ ಮತ್ತು ಬಾಯಲ್ಲಿ ಗಾಂಧಿ ಹೆಸರು ಹೇಳುವ ನಾಯಕರಿಗೆ ನಾಚಿಕೆಯಾಗಬೇಕು. ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನ. ಗಟ್ಟಿಯಾಗಿರಿ ಎಂದು ಟ್ವೀಟ್ ಮಾಡುವ ಮೂಲಕ ಜಿಗ್ನೇಶ್ ಮೇವಾನಿ ಬೆನ್ನಿಗೆ ನಿಂತಿದ್ದಾರೆ.
“ಮೋದಿ ಜೀ, ನೀವು ರಾಜ್ಯ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಯತ್ನಿಸಬಹುದು. ಆದರೆ ನೀವು ಎಂದಿಗೂ ಸತ್ಯವನ್ನು ಬಂಧಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ನ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ಜಾಮೀನಿನ ಮೇಲೆ ಜೈಲಿನಿಂದ ಹೊರಗೆ ಬಂದ ಬಳಿಕ ಸುದ್ದಿಗಾರರಿಗೆ ಮಾತನಾಡಿದ ಶಾಸಕ ಜಿಗ್ನೇಶ್ ಮೇವಾನಿ, “ಇದು ಬಿಜೆಪಿ ಮತ್ತು ಆರ್ಎಸ್ಎಸ್ನ ಷಡ್ಯಂತ್ರ. ಅವರು ನನ್ನ ವರ್ಚಸ್ಸನ್ನು ಹಾಳುಮಾಡಲು ಇದನ್ನು ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಅವರು ಹಿಂದೆ ರೋಹಿತ್ ವೇಮುಲಾಗೆ, ಚಂದ್ರಶೇಖರ್ ಆಜಾದ್ಗೆ ಇದೇ ರೀತಿ ಮಾಡಿದರು, ಈಗ ನನ್ನನ್ನು ಗುರಿಯಾಗಿಸುತ್ತಿದ್ದಾರೆ” ಎಂದು ಆಕ್ರೋಸ ವ್ಯಕ್ತಪಡಿಸಿದ್ದಾರೆ.
ಒಂದು ಪ್ರಕರಣದಲ್ಲಿ ಜಾಮೀನು ಸಿಕ್ಕರೂ ಕೂಡಾ ದುರಾದೃಷ್ಟವಶಾತ್ ಮತ್ತೊಂದು ಪ್ರಕರಣದಲ್ಲಿ ಮೇವಾನಿ ಅವರು ಜೈಲು ಸೇರಬೇಕಾಗಿದೆ ಎಂದು ಅವರ ವಕೀಲ ಅಂಶುಮನ್ ಬೋರಾ ಅವರು ತಿಳಿಸಿದ್ದಾರೆ. ಇದೀಗ ಮೇವಾನಿ ವಿರುದ್ಧ ಐಪಿಸಿ ಸೆಕ್ಷನ್ 323, 353 ಹಾಗೂ 354 ಅಡಿ ಪ್ರಕರಣ ದಾಖಲಿಸಲಾಗಿದೆ. ಕೋಕ್ರಜಾರ್ನಲ್ಲಿ ಪೊಲೀಸ್ ವಶದಲ್ಲಿ ಇರುವಾಗಲೇ ಬರಾಪೇಟಾ ಜಿಲ್ಲಾ ವ್ಯಾಪ್ತಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ನಡೆಸಿದ ಆರೋಪ ಮೇವಾನಿ ಮೇಲಿದೆ.
ಈಗ ಮತ್ತೊಂದು ಸುದ್ದಿ ಮೇವಾನಿ ಹೆಸರಲ್ಲಿ ಸೇರ್ಪಡೆಯಾಗಿದ್ದು, ಶಾಸಕ ಹಾಗೂ ದಲಿತ ನಾಯಕ ಜಿಗ್ನೇಶ್ ಮೇವಾನಿ ವಿರುದ್ದ ಪೊಲೀಸರು ಎರಡನೇ ಪ್ರಕರಣ ದಾಖಲಿಸಿದ್ದಾರೆ. ಅಸ್ಸಾಂನ ಗುವಾಹಟಿ ವಿಮಾಣ ನಿಲ್ದಾಣದಿಂದ ಕೊಕ್ರಜಾರ್ಗೆ ಕರೆತರುವ ವೇಳೆ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಅಸ್ಸಾಂನ ಬಾರ್ಪೆಟಾಗೆ ಕರೆದುಕೊಂಡು ಹೋಗುವ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಸೀಟಿನ ಮೇಲೆ ಅಧಿಕಾರಿಯನ್ನು ತಳ್ಳುವ ಮೂಲಕ ಅಸಭ್ಯ ಸನ್ನೆಗಳನ್ನು ಮಾಡುವ ಮೂಲಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.