
ಬೀದರ್ : ಹಿಂದು ಸಂಪ್ರದಾಯದಲ್ಲಿ ಗಣಪತಿ ಪೂಜೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.ವಿಘ್ನ ನಿವಾರಣೆಯ ಶಕ್ತಿ ಗಣಪತಿ ದೇವರಿಗೆ ಇದೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಬೀದರ್ ನಗರದ ಗಾಂಧಿ ಗಂಜ್ ಆವರಣದಲ್ಲಿ ಶ್ರೀ ವರ ಸಿದ್ದಿ ವಿನಾಯಕ ಗಣೇಶ ಮಂಡಳಿಯ ವತಿಯಿಂದ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ, ನಗರದ ಶ್ರೀಸಾಯಿ ಶಿಕ್ಷಣ ಸಂಸ್ಥೆಯ ಸಾಯಿ ಸ್ಕೂಲ್ ಆವರಣದಲ್ಲಿ ಪ್ರತಿಷ್ಠಾಪಿಸಿದ ಬೀದರ್ ಕಾ ರಾಜಾ ಗಣೇಶ ಮೂರ್ತಿಗಳ ದರ್ಶನ ಪಡೆದು ಪೂಜೆ ಸಲ್ಲಿಸಿದ ಬಳಿಕ ಮಂಗಳವಾರ ಅವರು ಮಾತನಾಡಿದರು.ಮುಂಬೈನಲ್ಲಿ ಪ್ರತಿಷ್ಠಾಪನೆ ಮಾಡಿದಂತೆ ನಮ್ಮ ಬೀದರ್ ನಲ್ಲಿ ಕೂಡ ಅನೇಕ ವರ್ಷಗಳಿಂದ ದೊಡ್ಡ ಪ್ರಮಾಣದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಅರ್ಥಪೂರ್ಣವಾಗಿ ಪೂಜೆ ಕಾರ್ಯಕ್ರಮಗಳನ್ನು ಮಾಡಿ ವಿಜೃಂಭಣೆಯೊಂದಿಗೆ ವಿಸರ್ಜನೆ ಮಾಡಲಾಗುತ್ತದೆ.ಗಣೇಶ ಮೂರ್ತಿ ಪ್ರತಿಷ್ಠಾಪನೆಯಿಂದ ವಿಸರ್ಜನೆ ಕಾರ್ಯಕ್ರಮದವರೆಗೂ ಪ್ರಸಾದ ವ್ಯವಸ್ಥೆ ಕೂಡ ಇರುತ್ತದೆ.

ಈ ಬಾರಿ ನಾನು ಬೀದರ್ ನಗರದ ಗಾಂಧಿ ಗಂಜ್ ಆವರಣದಲ್ಲಿ, ಶ್ರೀ ಸಾಯಿ ಶಿಕ್ಷಣ ಸಂಸ್ಥೆಯ ಸಾಯಿ ಸ್ಕೂಲ್ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ಗಣಪತಿ ದೇವರ ದರ್ಶನ ಪಡೆದಿದ್ದೇನೆ. ದೊಡ್ಡಮಟ್ಟದ ಗಣೇಶ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.ಸಾಯಿ ಸ್ಕೂಲ್ ಆವರಣದಲ್ಲಿ ಮತ್ತು ಗಾಂಧಿ ಗಂಜ್ ನಲ್ಲಿ ಬಹುತೇಕ ಕೇದಾರನಾಥ ಮಂದಿರದ ರೀತಿಯಲ್ಲಿಯೇ ಮಂದಿರ ನಿರ್ಮಾಣ ಮಾಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ವಿಶೇಷವಾಗಿದೆ.ಹಿಮಾಲಯವೇ ಬೀದರ್ ಗೆ ಬಂದಿದೆ ಏನೋ ಅನ್ನೋ ರೀತಿಯ ಸುಂದರವಾದ ವಾತಾವರಣ ಬೀದರ್ ನಲ್ಲಿ ನಿರ್ಮಾಣವಾಗಿದೆ.




ನಾನು ಕೂಡ ಗಣಪತಿ ದೇವರಿಗೆ ಪೂಜೆ ಸಲ್ಲಿಸಿ, ನಾಡಿನ ಮತ್ತು ಬೀದರ್ ಜನತೆಯ ಒಳಿತಿಗಾಗಿ ಪ್ರಾರ್ಥಿಸಿದ್ದೇನೆ.ನಾಡಿನ ಜನತೆಗೆ ಸುಖ, ಶಾಂತಿ, ಸಮೃದ್ಧಿ, ಅಭಿವೃದ್ಧಿ ಕರುಣಿಸುವಂತೆ ಗಣೇಶ್ವರನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ. ಸನಾತನ ಪರಂಪರೆಯ ಉಳಿವಿಗಾಗಿ ಜನರು ಶ್ರಮಿಸುತ್ತಿದ್ದಾರೆ. ಅವರಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರು ಶುಭ ಕೋರಿದರು.
ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ರವರೊಂದಿಗೆ ಗಾಂಧಿ ಗಂಜ್ ಆವರಣದ ಶ್ರೀ ವರಸಿದ್ದಿವಿನಾಯಕ ಗಣೇಶ ಮಂಡಳಿಯ ಗಣಪತಿ ಮೂರ್ತಿಯ ಬಳಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲ್ಪೂರ್, ಪ್ರಮುಖರಾದ ಬಸವರಾಜ ಪಾಟೀಲ್ ಹಾರೋಗೇರಿ, ಶಾಮರಾವ್ ಭೀಮರಾವ್, ರೋಲ್ಯಾಕ್ಸ್ ನಾರಾಯಣ್, ಅಶೋಕ್ ರೇಜಂತಲ್, ಸಾಯಿ ಶಿಕ್ಷಣ ಸಂಸ್ಥೆಯ ಆವರಣದ ಗಣಪತಿ ಮೂರ್ತಿಯ ಬಳಿ ರಾಜಶೇಖರ್ ಜವಳೆ, ಸಿಂದೋಲ್ ನಾಗು, ಅಭಿಷೇಕ ಪಾಟೀಲ್, ನಾಗು ಜಾಬ್ ಶೆಟ್ಟಿ, ವೀರೇಶ್, ಅಜಯ್, ಭೀರಪ್ಪ, ಅಮಿತ್ ಪುಲೇಕರ್, ಸಾಗರ್ ಪಟಕ್ ಸೇರಿದಂತೆ ಅನೇಕರಿದ್ದರು. ಇದೇ ಸಂದರ್ಭದಲ್ಲಿ ಬಂಡೆಪ್ಪ ಖಾಶೆಂಪುರ್ ರವರು, ಜನರಿಗೆ ಪ್ರಸಾದ ವಿತರಣೆ ಮಾಡಿ, ಪ್ರಸಾದ ಸ್ವೀಕರಿಸಿದರು.










