ದೇಶದಲ್ಲಿ ಪಂಚರಾಜ್ಯ ಚುನಾವಣೆಯ ಕಾವು ಜೋರಾಗಿದೆ. ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳು ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಾಗಲೇ ತಮ್ಮ ರಣತಂತ್ರಗಾರಿಕೆಯ ಆಟಗಳನ್ನು ಶುರುಹಚ್ಚಿಕೊಂಡಿದ್ದಾರೆ. ಇದಕ್ಕೆ ಗೋವಾ ರಾಜಕಾರಣ ಹೊಸ ಸೇರ್ಪಡೆಯಾಗಿದೆ.
ಗೋವಾ ವಿಧಾನಸಭೆ ಚುನಾವಣೆಗೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಮೈತ್ರಿ ವಿಚಾರ ಮತ್ತು ಸರಣಿ ಸಭೆಗಳನ್ನು ಆಯೋಜಿಸಲು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾ ಅವರು ಶುಕ್ರವಾರ ಕಡಲ ರಾಜ್ಯ ಗೋವಾಕ್ಕೆ ಭೇಟಿ ಸಂದರ್ಭದಲ್ಲೇ ಕಾಂಗ್ರೆಸ್ ನ ಗುಂಪೊಂದು ರಾಜೀನಾಮೆ ನೀಡಿದೆ. ಪೊರ್ವೊರಿಮ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕರ ಗುಂಪು ಶುಕ್ರವಾರ ಬೆಳಗ್ಗೆ ರಾಜೀನಾಮೆ ಸಲ್ಲಿಸಿರುವ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಪಕ್ಷೇತರ ಶಾಸಕ ರೋಹನ್ ಖೌಂಟೆ ಮುಂಬರುವ ವಿಧಾನಸಭೆ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಪೊರ್ವೊರಿಮ್ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಗುಪೇಶ್ ನಾಯ್ಕ್ ʻʻಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪರ್ಧಿಸಲು ಹೆಚ್ಚಾಗಿ ಆಸಕ್ತಿ ತೋರುತ್ತಿಲ್ಲ. ಕೆಲವು ನಾಯಕರ ವರ್ತನೆಯಿಂದ ಈ ರಾಜೀನಾಮೆ ಪರ್ವ ಆರಂಭವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಗೋವಾ ಕಾಂಗ್ರೆಸ್ ಗೆ ಮತ್ತೊಂದು ಆಘಾತವಾಗಿದೆ. ದಕ್ಷಿಣ ಗೋವಾದ ಹಿರಿಯ ಕಾಂಗ್ರೆಸ್ ನಾಯಕ ಮೊರೆನೊ ರೆಬೆಲೊ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದಾರೆ.
![](https://pratidhvani.com/wp-content/uploads/2021/12/WhatsApp-Image-2021-12-10-at-12.55.24-PM-2.jpeg)
ಈ ಬಗ್ಗೆ ರಾಜೀನಾಮೆ ಪತ್ರದಲ್ಲಿ ಕಾರಣ ತಿಳಿಸಿರುವ ರೆಬೆಲೊ, ಕರ್ಟೋರಿಮ್ ಕ್ಷೇತ್ರದ ಹಾಲಿ ಶಾಸಕ ಅಲೆಕ್ಸೊ ರೆಜಿನಾಲ್ಡೊ ಲೌರೆಂಕೊರವರು ಪಕ್ಷ ವಿರೋಧಿ ಕೆಲಸ ಮಾಡಿದ್ದರೂ ಸಹ ಅವರ ವಿರುದ್ದ ಯಾವುದೇ ಕ್ರಮ ಜರುಗಿಸದೆ ಅವರನ್ನು ಕರ್ಟೋರಿಮ್ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಿಸಿರುವುದು ಸರಿಯಲ್ಲ ಎಂದಿದ್ದಾರೆ. ಈ ಹಿಂದೆ ರೆಬೆಲೊ ಕರ್ಟೋರಿಮ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ನಾಲ್ಕು ವರ್ಷಗಳಿಂದ ಪಕ್ಷದ ಯಾವುದೇ ಕಾರ್ಯಕ್ರಮ, ಸಭೆಗಳಲ್ಲಿ ಭಾಗಿಯಾಗದೆ ಪಕ್ಷದ ವಿರುದ್ದ ಮಾತನಾಡುತ್ತ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದರು ಎನ್ನುವ ಆರೋಪಗಳು ರೆಬೆಲೊ ಮೇಲಿವೆ.
ಈ ಹಿಂದೆ ಗೋವಾ ಉಸ್ತುವಾರಿ ಪಿ. ಚಿದಂಬರಂ ವಿಧಾನಸಭಾ ಚುನಾವಣೆಗೆ ಗೋವಾ ಫಾರ್ವರ್ಡ್ ಪಕ್ಷದ ಜೊತೆಗೆ ಚುನವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಘೋಷಿಸಿದ್ದರು. ಈ ಘೋಷಣೆ ಬೆನ್ನಲ್ಲೇ ಪಕ್ಷದೊಳಗೆ ಅಸಮಾಧಾನದ ಬೇಗುದಿ ಹೊಗೆಯಾಡಲು ಶುರುವಾಗಿದ್ದು, ಚುನಾವಣಾ ಫಲಿತಾಂಶದ ಮೇಲೆ ಹೇಗೆಲ್ಲಾ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.