ಭಾರತವು ಆರ್ಥಿಕ ಸ್ಥಿತಿಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಕಾಣುತ್ತಿದ್ದು ಸ್ವಾತಂತ್ರ್ಯ ದಿನಾಚರಣೆಯ ಶತಮಾನೋತ್ಸವ ಆಚರಿಸುವ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ಹೊರಹೊಮ್ಮುವ ಸಂಕಲ್ಪವನ್ನು ನಾವು ತೊಡಬೇಕಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಬಿಹಾರದ ರೋಹ್ತಾಸ್ ಜಿಲ್ಲೆಯಲ್ಲಿ ಖಾಸಗಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ದೇಶದ ಸಾಂಸ್ಕೃತಿಕ ಬೇರುಗಳ ಬಗ್ಗೆ ಹೆಚ್ಚಿನ ಮೆಚ್ಚುಗೆ ವ್ಯಕ್ತವಾಗುತ್ತಿದೆ ಮತ್ತು ವಿದೇಶಿಗರು ಇಂಡಿಯಾ ಎಂದು ಹೇಳುವ ಬದಲಿಗೆ ಭಾರತ ಎಂಬ ಪದವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ ಎಂದು ಹೇಳಿದರು.
2014 ರಲ್ಲಿ, ಭಾರತವು ವಿಶ್ವದ ಟಾಪ್ 10 ಆರ್ಥಿಕತೆಗಳ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು ಆದರೆ ನಂತರದ ಅಲ್ಪಾವಧಿಯಲ್ಲಿ, ದೇಶವು ಈಗ ಅಗ್ರ ಐದರಲ್ಲಿದೆ ಎಂದು ನರೇಂದ್ರ ಮೋದಿ ಸರ್ಕಾರದ ಅವಧಿಯನ್ನು ಉಲ್ಲೇಖಿಸಿ ರಾಜನಾಥ್ ಸಿಂಗ್ ಹೇಳಿದರು.
ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಹಾಗೂ ಹಣಕಾಸು ಕಂಪನಿಯಾದ ಮೋರ್ಗಾನ್ ಸ್ಟಾನ್ಲಿಯ ಇತ್ತೀಚಿನ ವರದಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, 2027ರ ವೇಳೆಗೆ ನಾವು ಟಾಪ್ 3 ಆರ್ಥಿಕತೆಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದ್ದೇವೆ ಎಂದು ಹೇಳಿದರು. ಅಲ್ಲದೇ 2047ರಲ್ಲಿ ಭಾರತವು 100ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದ್ದು ಈ ವೇಳೆಗೆ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ನೀವೆಲ್ಲ ಶ್ರಮಿಸಬೇಕು ಎಂದಿದ್ದಾರೆ.