ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಉಪ ಚುನಾವಣೆಗಳಿಗೆ ಇಂದು ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಆದರೂ ಆಡಳಿತ ಮತ್ತು ಪ್ರತಿಪಕ್ಷಗಳ ಪಾಳೆಯದಲ್ಲಿ ಇನ್ನೂ ಅಭ್ಯರ್ಥಿಗಳು ಪಟ್ಟಿ ಅಂತಿಮದ ಕಸರತ್ತು ಮುಗಿದಿಲ್ಲ.
ನಾಮಪತ್ರ ಸಲ್ಲಿಕೆಗೆ ಇನ್ನು ಕೇವಲ ಏಳು ದಿನಗಳು ಮಾತ್ರ ಉಳಿದಿದ್ದರೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಗೆ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ವಿಷಯದಲ್ಲಿ ಆಡಳಿತರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಗೌಪ್ಯತೆ ಕಾಯ್ದುಕೊಂಡಿವೆ. ಸದ್ಯ ಅಧಿಕೃತ ಅಧಿಸೂಚನೆ ಹೊರಬೀಳ್ಳುತ್ತಲೇ ಎರಡೂ ಪಕ್ಷಗಳು ತಮ್ಮು ಅಧಿಕೃತ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಬಹುದು ಎಂಬ ನಿರೀಕ್ಷೆಗಳಿದ್ದರೂ, ವಾಸ್ತವವಾಗಿ ಎರಡೂ ಪಕ್ಷದಲ್ಲಿ ಅಭ್ಯರ್ಥಿ ಘೋಷಣೆಯ ವಿಷಯದಲ್ಲಿ ಸಾಕಷ್ಟು ಗೊಂದಲಗಳು ತಲೆದೋರಿವೆ. ಹಾಗಾಗಿ, ಅವರು ಅಭ್ಯರ್ಥಿ ಘೋಷಿಸಲಿ ಎಂದು ಇವರು, ಇವರು ಘೋಷಿಸಲಿ ಎಂದು ಅವರು ಕಾದಿರುವಂತಿದೆ.

ಪ್ರತಿಧ್ವನಿಗೆ ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಹಾಗೆ ನೋಡಿದರೆ ಬೆಳಗಾವಿ ಉಪ ಚುನಾವಣೆ ಘೋಷಣೆಗೆ ಮುನ್ನ, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಸಿಡಿ ಹೊರಬೀಳುವ ಮುನ್ನ ಆಡಳಿತ ಬಿಜೆಪಿಯಲ್ಲಿ ಬಹುತೇಕ ಎಲ್ಲವೂ ನಿಚ್ಛಳವಾಗಿತ್ತು. ಸಣ್ಣ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನೇ ಕಣಕ್ಕಿಳಿಸಲು ಪಕ್ಷದ ವರಿಷ್ಠರು ನಿರ್ಧರಿಸಿದ್ದರು. ಅದೇ ಉಮೇದಿನಲ್ಲಿಯೇ ರಮೇಶ್, ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರು ಅತಿ ಹೆಚ್ಚು ಸಂಖ್ಯೆಯಲ್ಲಿ ಗೆಲುವು ಪಡೆಯುವಂತೆ ಸಾಕಷ್ಟು ಕೆಲಸ ಮಾಡಿದ್ದರು. ಜೊತೆಗೆ ಬಿಜೆಪಿ ಕೂಡ ಬೆಳಗಾವಿ ಉಪ ಚುನಾವಣೆಯನ್ನೇ ಗುರಿಯಾಗಿಟ್ಟುಕೊಂಡು ಅಲ್ಲಿನ ಕಣದಲ್ಲಿ ನಿರ್ಣಾಯಕರಾಗಿರುವ ಮರಾಠ ಸಮುದಾಯವನ್ನು ಓಲೈಸುವ ನಿಟ್ಟಿನಲ್ಲಿ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪಿಸಿ ಅದಕ್ಕೆ 500 ಕೋಟಿ ರೂ ಅನುದಾನವನ್ನೂ ಘೋಷಿಸಿತ್ತು. ಹಾಗೇ ಕ್ಷೇತ್ರದ ಮತ್ತೊಂದು ಪ್ರಬಲ ಸಮುದಾಯ ಲಿಂಗಾಯತರಿಗೂ ಪ್ರತ್ಯೇಕ ಮಂಡಳಿ ಸ್ಥಾಪಿಸಿ ಅವರಿಗೂ 500 ಕೋಟಿ ಹಣ ಘೋಷಿಸಿತ್ತು. ಹಾಗಾಗಿ, ರಮೇಶ್ ಜಾರಕಿಹೊಳಿಯ ಪ್ರಭಾವ ಮತ್ತು ಬಿಜೆಪಿಯ ಭರಪೂರ ಕೊಡುಗೆಗಳ ಮೇಲೆ ಚುನಾವಣೆ ನಡೆಸುವ ಲೆಕ್ಕಾಚಾರ ಬಿಜೆಪಿಯದ್ದಾಗಿತ್ತು.
ಆದರೆ, ಸಿಡಿ ಪ್ರಕರಣ ಸಿಡಿಯುತ್ತಲೇ ಎಲ್ಲವೂ ಬದಲಾಗಿದೆ. ಲೆಕ್ಕಾಚಾರಗಳು ಉಲ್ಟಾ ಆಗಿವೆ. ಹಾಗಾಗಿ, ರಮೇಶ್ ಜಾರಕಿಹೊಳಿ ಕಣದಿಂದ ಹಿಂದೆ ಸರಿದಿದ್ದಾರೆ. ಅವರ ಬದಲಿಗೆ ಹಲವು ನಾಯಕರು ನಾಮುಂದೆ, ತಾಮುಂದೆ ಎಂದು ಪೈಪೋಟಿಯ ಮೇಲೆ ಪಕ್ಷದ ಟಿಕೆಟ್ ಗೆ ಲಾಬಿ ನಡೆಸಿದ್ದಾರೆ. ಆ ಪೈಕಿ ಅಕಾಲಿಕ ನಿಧನಹೊಂದಿದ ಮಾಜಿ ಸಂಸದ ಸುರೇಶ್ ಅಂಗಡಿ ಅವರ ಸೊಸೆ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಮಗಳು ಶ್ರದ್ಧಾ ಶೆಟ್ಟರ್, ಸ್ವತಃ ಜಗದೀಶ್ ಶೆಟ್ಟರ್, ಕೆ ಎಲ್ ಇ ಸಂಸ್ಥೆಯ ಡಾ ಪ್ರಭಾಕರ ಕೋರೆ, ವಿಧಾನ ಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ ಮತ್ತಿತರ ಹೆಸರುಗಳು ಚಾಲ್ತಿಯಲ್ಲಿವೆ. ಆದರೆ, ಅಂಗಡಿಯವರ ನಿಧನದಿಂದಾಗಿ ತೆರವಾಗಿರುವ ಕ್ಷೇತ್ರಕ್ಕೆ ಅವರ ಕುಟುಂಬದವರಿಗೇ ಅವಕಾಶ ನೀಡಿದಲ್ಲಿ ಅನುಕಂಪ ಮತ್ತು ಕುಟುಂಬದ ಪಕ್ಷನಿಷ್ಠೆಗಳು ಒಟ್ಟಿಗೇ ಕೆಲಸ ಮಾಡುವುದರಿಂದ ಚುನಾವಣೆಯಲ್ಲಿ ಗೆಲುವು ಸಲೀಸಲಾಗಲಿದೆ ಎಂಬ ಅಭಿಪ್ರಾಯ ಬಿಜೆಪಿಯ ವರಿಷ್ಠರದ್ದು. ಹಾಗಾಗಿ ಶ್ರದ್ಧಾ ಹೆಸರನ್ನೇ ಅಂತಿಮಗೊಳಿಸಿ ಕೇಂದ್ರಕ್ಕೆ ಕಳಿಸಲಾಗಿದೆ ಎನ್ನಲಾಗಿದೆ.
ಈ ನಡುವೆ, ಕಾಂಗ್ರೆಸ್ ಪಾಳೆಯದಲ್ಲಿ ಕೂಡ ಆರಂಭದಲ್ಲಿ ಸತೀಶ್ ಜಾರಕಿಹೊಳಿ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಬಿಜೆಪಿಯಿಂದ ರಮೇಶ್ ಜಾರಕಿಹೊಳಿ ಕಣಕ್ಕಿಳಿದರೆ, ಕಾಂಗ್ರೆಸ್ ನಿಂದ ಅವರ ಸಹೋದರ ಸತೀಶ್ ಜಾರಕಿಹೊಳಿ ಕಣಕ್ಕಿಳಿಯಲಿದ್ದಾರೆ. ಹಾಗಾಗಿ ಈ ಬಾರಿಯ ಉಪಚುನಾವಣೆ ಸಹೋದರರ ಸವಾಲ್ ಆಗಿ ಬದಲಾಗಲಿದೆ ಎಂದೇ ಊಹಿಸಲಾಗಿತ್ತು. ಆದರೆ, ಸಿಡಿ ಪ್ರಕರಣ ತಂದ ತಿರುವು ಎಲ್ಲವನ್ನೂ ಬದಲಾಯಿಸಿದೆ. ಆದರೂ, ಕಾಂಗ್ರೆಸ್ ನಿಂದ ಸತೀಶ್ ಅವರೇ ಕಣಕ್ಕಿಳಿಯುವುದು ಬಹುತೇಕ ಖಚಿತ. ಪಕ್ಷದ ವರಿಷ್ಠರ ಸಮಿತಿ ಕೂಡ ಸತೀಶ್ ಒಬ್ಬರ ಹೆಸರನ್ನೇ ಸರ್ವಾನುಮತದಿಂದ ಅಂತಿಮಗೊಳಿಸಿ ಹೈಕಮಾಂಡ್ ಅನುಮೋದನೆಗೆ ಕಳಿಸಲಾಗಿದೆ ಎಂದು ಪಕ್ಷದ ಮೂಲಗಳು ಹೇಳಿವೆ. ಆದರೆ, ಈ ನಡುವೆ, ರಮೇಶ್ ಜಾರಕಿಹೊಳಿ ಕಣದಿಂದ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳೆಯದಲ್ಲೂ ಕಣಕ್ಕಿಳಿಯಲು ಪೈಪೋಟಿ ಆರಂಭವಾಗಿದೆ. ಪ್ರಮುಖವಾಗಿ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಪ್ರಮುಖವಾಗಿ ಟಿಕೆಟ್ ಗಾಗಿ ಕೋರಿದ್ದಾರೆ. ಆದರೆ, ಪಕ್ಷದ ರಾಜ್ಯ ಪ್ರಮುಖರು ಸತೀಶ್ ಪರ ಒಮ್ಮತದ ನಿರ್ಧಾರಕ್ಕೆ ಬಂದಿರುವುದು ತಿಳಿಯುತ್ತಲೇ ಅವರು ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗುತ್ತಿದೆ.
ಏಪ್ರಿಲ್ 17ರಂದು ಮತದಾನ ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳಿವೆ. ಆ ಪೈಕಿ ಸದ್ಯ ಆರು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಎರಡು ಕಡೆ ಕಾಂಗ್ರೆಸ್ ಶಾಸಕರಿದ್ದಾರೆ. ಬೆಳಗಾವಿ ಉತ್ತರ, ಬೆಳಗಾವಿ ದಕ್ಷಿಣ, ಗೋಕಾಕ, ಅರಭಾವಿ, ರಾಮದುರ್ಗ, ಸವದತ್ತಿ ಎಲ್ಲಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಇದ್ದರೆ, ಬೆಳಗಾವಿ ಗ್ರಾಮಾಂತರ ಮತ್ತು ಬೈಲಹೊಂಗಲ ಕ್ಷೇತ್ರಗಳು ಕಾಂಗ್ರೆಸ್ ಶಾಸಕರ ಅಧಿಕಾರದಲ್ಲಿವೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಆಹಾರ ಸಚಿವ ಉಮೇಶ್ ಕತ್ತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೋಲ್ಲೆ, ಜವಳಿ ಸಚಿವ ಶ್ರೀಮಂತ ಪಾಟೀಲ್ ಸೇರಿದಂತೆ ಹಾಲಿ ನಾಲ್ವರು ಸಚಿವರು ಈ ಜಿಲ್ಲೆಯವರು. ಜೊತೆಗೆ ಸಚಿವ ಸ್ಥಾನ ಕಳೆದುಕೊಂಡರೂ, ಜಿಲ್ಲೆಯ ಮೇಲೆ ಸಾಕಷ್ಟು ರಾಜಕೀಯ ಹಿಡಿತ ಹೊಂದಿರುವ ರಮೇಶ್ ಜಾರಕಿಹೊಳಿ ಕೂಡ ಸ್ವತಃ ಕಣಕ್ಕಿಳಿಯದಿದ್ದರೂ, ಇಡೀ ಚುನಾವಣೆಯ ಹೊಣೆ ಅವರೇ ಹೊತ್ತುಕೊಳ್ಳುವ ಸಾಧ್ಯತೆ ಇದ್ದೇ ಇದೆ.
ಹಾಗಾಗಿ, ಸದ್ಯದ ರಾಜಕೀಯ ಬಲಾಬಲದ ವಿಷಯದಲ್ಲಿ ಬಿಜೆಪಿ, ಪ್ರತಿ ಪಕ್ಷ ಕಾಂಗ್ರೆಸ್ಸಿಗಿಂತ ಸಾಕಷ್ಟು ಮುಂದಿದೆ ಎನಿಸುತ್ತದೆ. ಆದರೆ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ಸತೀಶ್ ಜಾರಕಿಹೊಳಿ ಸ್ವತಃ ಕಣಕ್ಕಿಳಿದರೆ, ಅವರೊಂದಿಗೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಂಥ ಪ್ರಭಾವಿ ನಾಯಕಿಯೂ ಚುನಾವಣಾ ಹೋರಾಟದ ನಾಯಕತ್ವ ವಹಿಸುವುದರಿಂದ ಉಪ ಚುನಾವಣಾ ಕಣ ಭರ್ಜರಿ ಪೈಪೋಟಿ ಕಾಣಲಿದೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿಯಲ್ಲಿ ಅಧಿಕಾರ ಹಿಡಿಯುವುದು ಉಭಯ ಪಕ್ಷಗಳ ಪಾಲಿಗೆ ಪ್ರತಿಷ್ಠೆಯ ಸಂಗತಿಯಾಗಿರುವುದರಿಂದ ಸಾಕಷ್ಟು ರಂಗೇರಲಿದೆ. ಅಧಿಕೃತ ಅಧಿಸೂಚನೆ ಹೊರಬಿದ್ದ ಕೆಲವೇ ಕ್ಷಣಗಳಲ್ಲಿ ಉಭಯ ಪಕ್ಷಗಳ ಅಧಿಕೃತ ಅಭ್ಯರ್ಥಿಗಳ ಹೆಸರೂ ಘೋಷಣೆಯಾಗುವುದರಿಂದ, ಕಣದ ಚಿತ್ರಣ ಸ್ಪಷ್ಟವಾಗಲು ಹೆಚ್ಚು ಸಮಯ ಕಾಯಬೇಕಿಲ್ಲ.