CBI ಕೇವಲ ಸಂಸತ್ತಿಗೆ ಉತ್ತರದಾಯಿತ್ವ ಹೊಂದಿರುವ ಸ್ವಾಯತ್ತ (autonomous) ಸಂಸ್ಥೆಯಾಗಿರಬೇಕೆಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಮಹತ್ತರವಾದ ಆದೇಶ ನೀಡಿದೆ. ಕೇಂದ್ರ ಸರ್ಕಾರದ ಆಧೀನದಲ್ಲಿರುವ ಸಿಬಿಐ ಅನ್ನು ಸ್ವತಂತ್ರ ಸಂಸ್ಥೆಯಾಗಿ ಪರಿವರ್ತಿಸುವ ಕುರಿತು ಪ್ರಮುಖವಾದ ಹೆಜ್ಜೆ ಇಟ್ಟಿರುವ ಮದ್ರಾಸ್ ಹೈಕೋರ್ಟ್, ಈ ಆದೇಶ ‘ಪಂಜರದ ಗಿಣಿ’ಯನ್ನು ಸ್ವತಂತ್ರವಾಗಿಸುವ ಯತ್ನ ಎಂದು ಹೇಳಿದೆ.
ಈಗಾಗಲೇ ಭಾರತದಲ್ಲಿ ಅಸ್ಥಿತ್ವದಲ್ಲಿ ಇರುವ ಎನ್.ಡಿ.ಎ. ಮೈತ್ರಿಕೂಟದಲ್ಲಿ ಇಲ್ಲದೇ ಇರುವಂತಹ ಪಕ್ಷಗಳು, ಸಿಬಿಐ ಅನ್ನು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಟೀಕಿಸಿವೆ. ಪ್ರಧಾನಿ ನರೇಂದ್ರ ಮೋದಿಯವರು ಆಡಳಿತಕ್ಕೆ ಬಂದ ಬಳಿಕ ತಮ್ಮ ರಾಜಕೀಯ ಕುತಂತ್ರಕ್ಕಾಗಿ ಸರ್ಕಾರಿ ಸಂಸ್ಥೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಕುರಿತು ಆರೋಪಗಳು ಕೇಳಿ ಬಂದಿದ್ದವು. ಸಿಬಿಐ, ಇಡಿ, ತೆರಿಗೆ ಇಲಾಖೆ ಹೀಗೆ ಹಲವು ಇಲಾಖೆ/ಸಂಸ್ಥೆಗಳ ಹೆಸರಿನ ಮೇಲೆ ಕಳಂಕ ಎದ್ದಿತ್ತು. ಈ ಕಳಂಕವನ್ನು ತೊಡೆದುಹಾಕುವತ್ತ ಮದ್ರಾಸ್ ಹೈಕೋರ್ಟ್ ಇಟ್ಟಿರುವ ಹೆಜ್ಜೆ ನಿಜಕ್ಕೂ ಮಹತ್ವವಾದದ್ದು.
2013ರಲ್ಲಿ ಕಲ್ಲಿದ್ದಲು ಪ್ರದೇಶ ಹಂಚಿಕೆ ಪ್ರಕರಣದ ವಿಚಾರಣೆ ನಡೆಸುವಾಗ ಸುಪ್ರಿಂಕೋರ್ಟ್ ಸಿಬಿಐ ಅನ್ನು ‘ಪಂಜರದ ಗಿಣಿ’ ಎಂದು ಸಂಬೋಧಿಸಿತ್ತು. ಆ ಸಂದರ್ಭದಲ್ಲಿ ವಿರೋಧ ಪಕ್ಷ ಸ್ಥಾನದಲ್ಲಿದ್ದ ಬಿಜೆಪಿಯು, ಸಿಬಿಐ ಮೇಲೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಹಿಡಿತವನ್ನು ಟೀಕಿಸಿತ್ತು. ಇದಾಗಿ ಹಲವು ವರ್ಷಗಳ ಬಳಿಕವೂ ಸರ್ಕಾರದ ಕೈಗೊಂಬೆ ಎಂಬ ಸಿಬಿಐ ಪಟ್ಟ ಇನ್ನೂ ತೊಲಗಲಿಲ್ಲ. ಯಾವುದೇ ಸರ್ಕಾರ ಬಂದರೂ, ಆಯಾ ಸರ್ಕಾರದ ಆಧೀನದಲ್ಲಿಯೇ ಕೆಲಸ ನಿರ್ವಹಿಸಬೇಕಾದ ಅನಿವಾರ್ಯತೆ ಸಿಬಿಐಗೆ ಇದೆ.
ಮಮತಾ ಬ್ಯಾನರ್ಜಿ ಅವರಂತೂ ಸಿಬಿಐ ಅನ್ನು ಟೀಕಿಸುವಾಗ, ‘PM’s Conspiracy Bureau of Investigation’ (ಪ್ರಧಾನ ಮಂತ್ರಿಗಳ ಷಡ್ಯಂತ್ರ ತನಿಖೆ ಸಂಸ್ಥೆ) ಎಂದು ಹೇಳಿದ್ದರು. ಪ್ರತಿ ರಾಜ್ಯದಲ್ಲಿಯೂ ಚುನಾವಣಾ ಸಂದರ್ಭದಲ್ಲಿ ವಿರೋಧ ಪಕ್ಷಗಳ ನಾಯಕರ ಮೇಲೆ ಸಿಬಿಐ, ಇಡಿ ಹಾಗೂ ತೆರಿಗೆ ಇಲಾಖೆಯ ದಾಳಿ ಸಾಮಾನ್ಯವೆಂಬಂತೆ ಆಗಿಬಿಟ್ಟಿದೆ.
ಈ ಕಳಂಕವನ್ನು ತೆಗೆಯಲು, ಸಿಬಿಐಗೆ ಶಾಸನಬದ್ದ ಸ್ಥಾನಮಾನ ನೀಡಲೇಬೇಕಾದ ಅನಿವಾರ್ಯತೆ ಇದೆ ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ. “ಶೀಘ್ರದಲ್ಲಿಯೇ ಸಿಬಿಐಗೆ ಶಾಸನಬದ್ದ ಸ್ಥಾನಮಾನ ನೀಡಿ, ಅದರ ಶಕ್ತಿ ಮತ್ತು ಕೆಲಸದ ಪರಿಧಿಯನ್ನು ವಿಸ್ತರಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲಾಗುತ್ತದೆ. ಕೇಂದ್ರ ಸರ್ಕಾರದ ಆಡಳಿತ ಹಸ್ತಕ್ಷೇಪವಿಲ್ಲದೇ, ಸಿಬಿಐ ಅನ್ನು ಸ್ವತಂತ್ರ ಸಂಸ್ಥೆಯಾಗಿ ಕೇಂದ್ರ ಸರ್ಕಾರ ಪರಿವರ್ತಿಸಬೇಕು,” ಎಂದು ಮದ್ರಾಸ್ ಹೈಕೋರ್ಟ್ ಹೇಳಿದೆ.
1941ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿರುವ ಸಿಬ್ಬಂದಿ ಹಾಗೂ ತರಬೇತಿ (DoPT) ಇಲಾಖೆಯ ಆಧೀನದಲ್ಲಿದೆ. ಸಿಬಿಐ ನಿರ್ದೇಶಕರನ್ನು ಪ್ರಧಾನ ಮಂತ್ರಿ, ಸಿ ಜೆ ಐ ಹಾಗೂ ವಿಪಕ್ಷ ನಾಯಕರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯು ಆಯ್ಕೆ ಮಾಡುತ್ತದೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿರುವ ಸಿಬ್ಬಂದಿ ಹಾಗೂ ತರಬೇತಿ ಇಲಾಖೆಯ ಅಧೀನದಲ್ಲಿ ಸಿಬಿಐ ಕಾರ್ಯಾಚರಿಸುವುದನ್ನು ವಿರೋಧಿಸಿರುವ ಮದ್ರಾಸ್ ಹೈಕೋರ್ಟ್, ಸಿಬಿಐ ನಿರ್ದೇಶಕರಿಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ನೀಡಿರುವ ಅಧಿಕಾರವನ್ನು ನೀಡಬೇಕು. ಅವರು DoPT ಮುಖಾಂತರ ಸರ್ಕಾರವನ್ನು ಸಂಪರ್ಕಿಸದೇ, ನೇರವಾಗಿ ಮಂತ್ರಿ ಅಥವಾ ಪ್ರಧಾನ ಮಂತ್ರಿಗಳಿಗೆ ವರದಿ ಸಲ್ಲಿಸುವಂತಿರಬೇಕು, ಎಂದು ಜಸ್ಟೀಸ್ ಎನ್ ಕಿರುಬಾಕರಣ್ ಹಾಗೂ ಜಸ್ಟೀಸ್ ಬಿ ಪುಗಳೇಂಧಿ ಅವರಿಗೆ ದ್ವಸದಸ್ಯ ಪೀಠವು ಹೇಳಿದೆ.
ಇದರೊಂದಿಗೆ, ಸಿಬಿಐಗೆ ನೀಡಿರುವ ಸವಲತ್ತುಗಳನ್ನು ಇನ್ನಷ್ಟು ಅಭಿವೃದ್ದಿಪಡಿಸಬೇಕು. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿರುವ ಎಫ್ ಬಿ ಐ ಹಾಗೂ ಯುಕೆಯ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರಂತೆ ಭಾರತದ ಸಿಬಿಐ ಕೂಡಾ ಬೆಳೆಯಬೇಕು. ಬಜೆಟ್’ನಲ್ಲಿ ಇದಕ್ಕೆ ಪ್ರತ್ಯೇಕ ಅನುದಾನವನ್ನು ಮೀಸಲಿರಿಸಬೇಕು, ಎಂದು ಮದ್ರಾಸ್ ಹೈಕೊರ್ಟ್ ಹೇಳಿದೆ.
ದೇಶದಲ್ಲಿ ಸಿಬಿಐ ಮೇಲಿರುವ ವಿಶ್ವಾಸವನ್ನು ಜನರು ಕಳೆದುಕೊಳ್ಳುತ್ತಿರುವ ಜನರಲ್ಲಿ ಮತ್ತೆ ವಿಶ್ವಾಸವನ್ನು ಪುನರ್ ಸ್ಥಾಪಿಸುವಲ್ಲಿ ಮದ್ರಾಸ್ ಹೈಕೋರ್ಟ್ ನೀಡಿರುವ ನಿರ್ದೇಶನಗಳು ಮಹತ್ವ ಪಡೆದಿವೆ. ಈ ಹಿಂದೆ ಎನ್ ಡಿ ಎ ಭಾಗವಾಗಿ ಇದ್ದಂತಹ ಶೀವಸೇನೆಯು ಕೂಡಾ ಸಿಬಿಐ ವಿಶ್ವಾಸಾರ್ಹತೆ ಕುರಿತು ಪ್ರಶ್ನಿಸಿದ್ದು, ಬಿಜೆಪಿಯು ವಿಪಕ್ಷ ನಾಯಕರ ಬೆನ್ನ ಹಿಂದಿನಿಂದ ದಾಳಿ ನಡೆಸುವ ಸಲುವಾಗಿ ಸಿಬಿಐ ಅನ್ನು ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಶಿವಸೇನೆಯ ಸಂಸದರಾಗಿರುವ ಸಂಜಯ್ ರಾವತ್ ಅವರು ಕಳೆದ ಜುಲೈ ತಿಂಗಳಲ್ಲಿ ಸಿಬಿಐ ಹಾಗೂ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದಿದ್ದರು.
“ನಿರಂತರವಾಗಿ ಸಿಬಿಐ ದಾಳಿ ನಡೆಸುವ ಕುರಿತು ಧಮ್ಕಿ ಹಾಕಲಾಗುತ್ತಿದೆ. ಈ ರೀತಿಯ ರಾಜಕಾರಣ ಒಳ್ಳೆಯದಲ್ಲ. ವಿಪಕ್ಷ ನಾಯಕರ ಬೆನ್ನ ಹಿಂದಿನಿಂದ ದಾಳಿ ನಡೆಸುವ ಸಲುವಾಗಿ ಕೇಂದ್ರ ಸರ್ಕಾರ ಸಿಬಿಐ, ಇಡಿಯನ್ನು ಬಳಸಿಕೊಳ್ಳುತ್ತಿದೆ,” ಎಂದು ಆರೋಪಿಸಿದ್ದರು.
ಇದೇ ವರ್ಷ ಮೇ ತಿಂಗಳಲ್ಲಿ ಸಿಬಿಐ ಅಧಿಕಾರಿಗಳು ಟಿಎಂಸಿ ನಾಯಕರನ್ನು ಬಂಧಿಸುವಾಗಲೂ ಇದೇ ರೀತಿಯ ಆರೋಪಗಳು ಕೇಳಿ ಬಂದಿದ್ದವು. ನಾರದ ಸ್ಟಿಂಗ್ ಆಪರೇಷನ್ ಪ್ರಕರಣದಲ್ಲಿ ಟಿಎಂಸಿ ನಾಯಕರನ್ನು ಮಾತ್ರ ಗುರಿಯಾಗಿಸಲಾಗಿತ್ತು. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಬಿಜೆಪಿ ನಾಯಕರ ಕುರಿತು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇದು ಕೂಡಾ ಸಿಬಿಐ ವಿರುದ್ದ ಪಶ್ಚಿಮ ಬಂಗಾಳದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು.
ಚುನಾವಣೆಯಲ್ಲಿ ಹೀನಾಯ ಸೋಲುಂಡದ್ದನ್ನು ಅರಗಿಸಿಕೊಳ್ಳಲಾಗಿದೆ, ಕಳ್ಳ ದಾರಿಯಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಟಿಎಂಸಿ ಕೇಂದ್ರ ಹಾಗೂ ಸಿಬಿಐ ವಿರುದ್ದ ಕಿಡಿಕಾರಿತ್ತು.