ಬೆಂಗಳೂರಿನ ಪೊಲೀಸರ ಬಲೆಗೆ ಬಿದ್ದಿದ್ದಾನೆ ಖತರ್ನಾಕ್ ಅಂತರಾಜ್ಯ ಮನೆ ಕಳ್ಳ. ಮನೆ ಕಳ್ಳತನ ಮಾಡಿ ಮೂರು ಕೋಟಿ ಮನೆ ಖರೀದಿ ಮಾಡಿ, ಬಾಲಿವುಡ್ ಸಿನಿಮಾ ನಟಿಗೆ ಗಿಫ್ಟ್ ಮಾಡಿದ್ದಾನೆ ಅನ್ನೋ ವಿಚಾರ ಹೊರಬಿದ್ದಿದೆ. ಬಾಲಿವುಡ್ ಸಿನಿಮಾ ನಟಿಯರ ಜೊತೆ ಸಲುಗೆ ಬೆಳೆಸಲು ಐಷಾರಾಮಿ ಮನೆಗಳ ಕಳ್ಳತನ ಮಾಡ್ತಿದ್ದ ಆರೋಪಿ, ಗರ್ಲ್ ಫ್ರೆಂಡ್ಗೆ 3 ಕೋಟಿ ಮೌಲ್ಯದ ಮನೆ ಕಟ್ಟಿಸಿಕೊಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಡಿವಾಳ ಪೊಲೀಸರು ಕುಖ್ಯಾತ ಮನೆಗಳ್ಳನ ಬಂಧನ ಮಾಡಿದ್ದು, ಸೊಲ್ಲಾಪುರ ಮೂಲದ ಪಂಚಾಕ್ಷರಿ ಸ್ವಾಮಿ (37) ಬಂಧಿತ ಆರೋಪಿ ಆಗಿದ್ದಾರೆರ. 2003 ರಲ್ಲಿ ಅಪ್ರಾಪ್ತನಾಗಿದ್ದಾಗಲೇ ಕಳ್ಳತನ ಶುರು ಮಾಡಿದ್ದ ಆರೋಪಿ, 2009 ರಿಂದ ಪ್ರೊಫೆಷನಲ್ ಕಳ್ಳನಾಗಿ ಕಾಯಕ ಶುರು ಮಾಡಿದ್ದ. ಪಂಚಾಕ್ಷರಿ ಸ್ವಾಮಿ ಬಂಧನದ ಬಳಿಕ ವಿಚಾರಣೆ ವೇಳೆ 180 ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ.
ಜನವರಿ 9 ರಂದು ಮಡಿವಾಳದಲ್ಲಿ ಮನೆಕಳ್ಳತನ ಮಾಡಿದ್ದ ಆರೋಪಿ ಪಂಚಾಕ್ಷರಿ ಸ್ವಾಮಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನಿಂದ ಚಿನ್ನಾಭರಣ, ಚಿನ್ನ ಕರಗಿಸಲು ಬಳಸುವ ಫೈರ್ ಗನ್, ಚಿನ್ನದ ಒಡವೆ ಇಟ್ಟು ಕರಗಿಸುವ ಯಂತ್ರವನ್ನು ವಶಕ್ಕೆ ಪಡೆಯಲಾಗಿದೆ.
ಪಂಚಾಕ್ಷರಿ ಸ್ವಾಮಿ ತಂದೆ ರೈಲ್ವೇ ಕೆಲಸದಲ್ಲಿದ್ದು, ತಂದೆ ಸಾವಿನ ಬಳಿಕ ತಾಯಿಗೆ ಕೆಲಸ ಸಿಕ್ಕಿತ್ತು. 2014-15 ರಲ್ಲಿ ಖ್ಯಾತ ನಟಿಯ ಜೊತೆಗೆ ಸಂಪರ್ಕದಲ್ಲಿರೋದಾಗಿ ಆರೋಪಿ ಹೇಳಿಕೊಂಡಿದ್ದಾನೆ. 2016 ರಲ್ಲಿ ಕೊಲ್ಕತ್ತದಲ್ಲಿ ಗರ್ಲ್ ಫ್ರೆಂಡ್ ಗೆ 3 ಕೋಟಿ ಮನೆ ಕಟ್ಟಿಸಿಕೊಟ್ಟಿದ್ದ. ಅಲ್ಲದೇ ಬರ್ತ್ ಡೇ ದಿನ 22 ಲಕ್ಷ ಮೌಲ್ಯದ ಅಕ್ವೇರಿಯಂ ಗಿಫ್ಟ್ ಕೊಟ್ಟಿದ್ದನಂತೆ.
2016 ರಲ್ಲಿ ಗುಜರಾತ್ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ರು. 6 ವರ್ಷ ಗುಜರಾತ್ನ ಸಬರಮತಿ ಜೈಲಿನಲ್ಲಿದ್ದ ಆರೋಪಿ, ಹೊರಬಂದ ಬಳಿಕ ಮತ್ತೆ ಕಳ್ಳತನ ಮುಂದುವರೆಸಿ ಮತ್ತೆ ಮಹಾರಾಷ್ಟ್ರ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ. ಜೈಲಿನಿಂದ ಬಿಡುಗಡೆಯಾಗಿ 2024 ರಲ್ಲಿ ಮತ್ತೆ ಬೆಂಗಳೂರಿನಲ್ಲಿ ಕಳ್ಳತನ ಶುರು ಮಾಡಿದ್ದ.
ಆರೋಪಿ ಪಂಚಾಕ್ಷರಿ ಸ್ವಾಮಿ ಸಣ್ಣದೊಂದು ಫೈರ್ ಗನ್ ಇಟ್ಟುಕೊಂಡಿದ್ದು, ಅದನ್ನ ಬಳಸಿ ಕಳವು ಮಾಡಿದ ಚಿನ್ನ ಕರಗಿಸುತ್ತಿದ್ದ. ತಾನು ಮಾತ್ರ ಚಿಕ್ಕ ಮನೆಯಲ್ಲಿ ವಾಸವಾಗಿದ್ದು, ಅದಕ್ಕೆ ಬ್ಯಾಂಕ್ ಲೋನ್ ಕಟ್ಟದೆ ನೋಟಿಸ್ ಕೂಡ ಬಂದಿದೆ.. ಸದ್ಯ ಹರಾಜಿಗೆ ಬಂದಿದೆ ವಾಸದ ಮನೆ.. ಮದುವೆಯಾಗಿ ಮಗು ಇದ್ದರು ಪ್ರಿಯತಮೆಗಾಗಿ ಮನೆ ಕಟ್ಟಿಸಿ ಕೊಟ್ಟಿದ್ದನು..
ಬೀಗ ಹಾಕಿದ ಮನೆಗಳನ್ನ ರೆಕ್ಕಿ ಮಾಡಿ, ಕಳ್ಳತನ ಮಾಡಿದ ಬಳಿಕ ರಸ್ತೆಯಲ್ಲಿ ಬಟ್ಟೆ ಬದಲಿಸುತ್ತಿದ್ದ.. ಕರಾಟೆಯಲ್ಲಿ ಬ್ಲಾಕ್ ಬೆಲ್ಟ್ ಪಡೆದಿರುವ ಪಂಚಾಕ್ಷರಿ ಸ್ವಾಮಿಯನ್ನು ಸದ್ಯ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಮಡಿವಾಳ ಪೊಲೀಸರು. ಆದರೆ ಈತ ಹುಡುಗೀರ ಶೋಕಿಗೆ ಕಳ್ಳತನ ಮಾಡ್ತಿದ್ದ ಅನ್ನೋ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.