ತರಗತಿಯಲ್ಲಿ ಬೈದ ಕಾರಣಕ್ಕೆ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕನ ಮೇಲೆಯೇ ಗುಂಡು ಹಾರಿಸಿರುವ ಘಟನೆ ಘಾಜಿಯಾಬಾದ್‌ನ ಮುರಾದನಗರ್ ಪ್ರದೇಶದಲ್ಲಿ ನಡೆದಿದೆ. ಆರೋಪಿಯನ್ನು ಕೃಷ್ಣ ವಿದ್ಯಾ ನಿಕೇತನ್ ಸಂಸ್ಥೆಯ ವಿದ್ಯಾರ್ಥಿಯೆಂದು ಗುರುತಿಸಲಾಗಿದೆ. ಅದೇ ಸಂಸ್ಥೆಯ ಅಧ್ಯಾಪಕ ಸಚಿನ್ ತ್ಯಾಗಿ ಗುಂಡೇಟಿಗೆ ಒಳಗಾದವರು.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಗುಂಡೇಟಿಗೆ ಒಳಗಾದ ಸಂತ್ರಸ್ತ ಶಿಕ್ಷಕ ಕಳೆದ ಕೆಲವು ವರ್ಷಗಳಿಂದ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಬೋಧಕರಾಗಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ, ಆರೋಪಿ ವಿದ್ಯಾರ್ಥಿ ಉಳಿದ ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ತೋರುತ್ತಿರುವ ಹಿನ್ನೆಲೆಯಲ್ಲಿ ತರಗತಿಯ ಎಲ್ಲರೆದುರು ಬೈದು ತರಗತಿಯಿಂದ ಹೊರಕ್ಕೆ ಕಳಿಸಿದ್ದಾರೆ. ಇದರಿಂದ ಕುಪಿತಗೊಂಡ ವಿದ್ಯಾರ್ಥಿ ಶಾಲೆಯ ಮುಖ್ಯದ್ವಾರದಿಂದ 100 ಮೀಟರ್ ಅಂತರದಲ್ಲಿ ತರಗತಿ ಮುಗಿದು ಶಿಕ್ಷಕ ಬರಲು ತನ್ನ ಗೆಳೆಯರೊಂದಿಗೆ ಕಾದು ನಿಂತಿದ್ದಾನೆ.

ತರಗತಿ ಮುಗಿಸಿ ತನ್ನ ಮೋಟಾರ್ ಬೈಕಿನಲ್ಲಿ ಮನೆಗೆ ಮರಳುತ್ತಿದ್ದ ಶಿಕ್ಷಕನನ್ನು ಮುಖ್ಯ ಆರೋಪಿಯ ಸಂಗಡಿಗರು ತಡೆದು ನಿಲ್ಲಿಸಿದ್ದಾರೆ. ಈ ವೇಳೆ, ಮೊದಲೇ ಹೊಂಚು ಹಾಕಿ ಕುಳಿತಿದ್ದ ಆರೋಪಿ ಗುಂಡಿನ ದಾಳಿ ನಡೆಸಿದ್ದಾನೆ ಎಂದು ಘಾಜಿಯಾಬಾದ್ ಎಸ್‌ಪಿ ಡಾ. ಇರಾಝ್ ರಾಜಾ ತಿಳಿಸಿದ್ದಾರೆ.
ನಾವು ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಆರೋಪಿ ಬಂದೂಕು ಹಿಡಿದು ಶಿಕ್ಷಕನ ಕಡೆಗೆ ಗುಂಡು ಹಾರಿಸುವುದು ವಿಡಿಯೊದಲ್ಲಿ ಕಂಡುಬಂದಿದೆ. ಗುಂಡು ಹಾರಿಸಿದ ಬಳಿಕ ಆರೋಪಿಗಳೆಲ್ಲರೂ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಕುತೂಹಲಕಾರಿಯೆಂಬಂತೆ, ಸಿಸಿಟಿವಿ ದೃಶ್ಯಾವಳಿಯನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಪೊಲೀಸರಿಗೆ ಗುಂಡು ಶಿಕ್ಷಕನಿಗೆ ತಗುಲಿರುವುದು ಕಂಡು ಬಂದಿಲ್ಲ. ಹಾಗೂ ಗುಂಡೇಟಿನಿಂದ ಶಿಕ್ಷಕನಿಗೆ ಯಾವುದೇ ರೀತಿಯ ಗಾಯಗಳಾಗಿರುವುದು ಕಂಡುಬಂದಿಲ್ಲ ಎಂದು ಎಸ್‌ಪಿ ಹೇಳಿದ್ದಾರೆ.
ಆದರೆ ಘಟನೆಯ ಒಂದು ಗಂಟೆಯ ನಂತರ, ಶಿಕ್ಷಕನು ಗುಂಡಿನ ಗಾಯದ ಗುರುತುಗಳೊಂದಿಗೆ ಪೊಲೀಸ್ ಠಾಣೆಗೆ ತಲುಪಿ ವಿದ್ಯಾರ್ಥಿಯ ವಿರುದ್ಧ ದೂರು ನೀಡಿದ್ದಾರೆ. ಸದ್ಯ, ಶಿಕ್ಷಕ ನೀಡಿದ ದೂರಿನ ಮೇರೆಗೆ ಐಪಿಸಿಯ ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಮೂವರು ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಪರಾಧದ ಸ್ಥಳದಲ್ಲಿ ಬಳಸಿದ ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲೇ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಲಿದ್ದಾರೆ. ನಾವು ಶಿಕ್ಷಕರ ಮೇಲಾದ ಗಾಯದ ಗುರುತಿನ ಹಿನ್ನೆಲೆಯನ್ನೂ ನಾವು ಪರಿಶೀಲಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.












