ಬೆಂಗಳೂರು: ನಗರದ ಗವಿಪುರದಲ್ಲಿರುವ ಪುರಾತನ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಮಕರ ಸಂಕ್ರಾಂತಿ ದಿನವಾದ ಇಂದು ಸಂಜೆ ಅಪರೂಪದ ಖಗೋಳ–ಧಾರ್ಮಿಕ ವೈಶಿಷ್ಟ್ಯಕ್ಕೆ ಸಾಕ್ಷಿಯಾಗಲಿದೆ. ನೆಲಮಟ್ಟಕ್ಕಿಂತ ಸುಮಾರು 120 ಅಡಿ ಆಳದಲ್ಲಿರುವ ಗವಿಗಂಗಾಧರೇಶ್ವರನ ಗರ್ಭಗುಡಿಗೆ ಸೂರ್ಯರಶ್ಮಿಗಳು ಪ್ರವೇಶಿಸುವ ಅಪೂರ್ವ ದೃಶ್ಯ ಸಂಜೆ 5:02ರಿಂದ 5:05ರ ನಡುವೆ ಕಾಣಿಸಿಕೊಳ್ಳಲಿದೆ.

ಮಕರ ಸಂಕ್ರಾಂತಿಯ ವಿಶೇಷತೆಯಾಗಿ, ಸೂರ್ಯನ ಕಿರಣಗಳು ದೇಗುಲದ ಮುಂಭಾಗದಲ್ಲಿರುವ ನಂದಿಯ ತಲೆಯ ಮಧ್ಯಭಾಗದ ಮೂಲಕ ಹಾದು, ಗುಹೆಯೊಳಗಿನ ಶಿವಲಿಂಗದ ತಳಭಾಗವನ್ನು ಮೊದಲು ಸ್ಪರ್ಶಿಸಿ, ನಂತರ ನಿಧಾನವಾಗಿ ಮೇಲ್ಮುಖವಾಗಿ ಸಾಗುತ್ತವೆ. ಈ ಕ್ರಮವಾಗಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗಂಗಾಧರೇಶ್ವರ ಸ್ವಾಮಿಗೆ ಸೂರ್ಯಾಭಿಷೇಕ ನಡೆಯುವಂತೆ ಕಾಣಿಸುತ್ತದೆ. ಈ ವೈಶಿಷ್ಟ್ಯವನ್ನು ಪ್ರಾಚೀನ ವಾಸ್ತುಶಿಲ್ಪ ಹಾಗೂ ಖಗೋಳಜ್ಞಾನಗಳ ಅದ್ಭುತ ಸಂಯೋಜನೆ ಎಂದು ಇತಿಹಾಸಕಾರರು ವಿವರಿಸುತ್ತಾರೆ.

ಈ ಅಪೂರ್ವ ಸಂದರ್ಭದ ಹಿನ್ನೆಲೆ ದೇಗುಲದಲ್ಲಿ ಈಗಾಗಲೇ ವಿಶೇಷ ಪೂಜೆಗಳು ಆರಂಭಗೊಂಡಿವೆ. ಶಿವಲಿಂಗಕ್ಕೆ ಹಾಲು, ಎಳನೀರು ಸೇರಿದಂತೆ ವಿವಿಧ ದ್ರವ್ಯಗಳಿಂದ ಅಭಿಷೇಕ, ರುದ್ರಾಭಿಷೇಕ, ಮಂತ್ರೋಚ್ಚಾರಣೆಗಳು ನೆರವೇರಲಿದ್ದು, ಭಕ್ತ ಸಾಗರವೇ ಹರಿದು ಬರುತ್ತಿದೆ.

ಮಕರ ಸಂಕ್ರಾಂತಿಯಂದು ಲಕ್ಷಾಂತರ ಭಕ್ತರು ಈ ಅಪರೂಪದ ಸೂರ್ಯಾಭಿಷೇಕದ ದರ್ಶನಕ್ಕಾಗಿ ದೇಗುಲಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ದೇಗುಲ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆಗಳಿಂದ ಭದ್ರತಾ ಕ್ರಮಗಳು, ಸರದಿ ಸಾಲು ವ್ಯವಸ್ಥೆ, ಸಂಚಾರ ನಿಯಂತ್ರಣ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಉತ್ತರಾಯಣದ ಪ್ರಾರಂಭದ ಸಂಕೇತವಾಗಿರುವ ಮಕರ ಸಂಕ್ರಾಂತಿಯಂದು ಗವಿಗಂಗಾಧರೇಶ್ವರನಿಗೆ ನಡೆಯುವ ಈ ಸೂರ್ಯಾಭಿಷೇಕವು ಧಾರ್ಮಿಕ ನಂಬಿಕೆ ಮಾತ್ರವಲ್ಲದೆ, ಪ್ರಾಚೀನ ಭಾರತದ ಚಿಂತನೆಯ ಜೀವಂತ ಸಾಕ್ಷಿ ಎನ್ನುವುದು ಭಕ್ತರ ಅಭಿಪ್ರಾಯವಾಗಿದೆ.












