ಮೋದಿ ಅಧಿಕಾರದ ಅವಧಿಯಲ್ಲಿ ಏನೇನೆಲ್ಲ ಅದ್ಭುತಗಳು ನಡೆದಿವೆ. ಅವರು ಅಧಿಕಾರಕ್ಕೆ ಬಂದಾಗ ಹೆಚ್ಚುಕಮ್ಮಿ ಅಗ್ರಸ್ಥಾನದಲ್ಲಿದ್ದ ಭಾರತ್ ಸಂಚಾರ ನಿಗಮ ನಿಯಮಿತ (ಬಿಎಸ್ಎನ್ಎಲ್) ಮತ್ತು ಮಹಾನಗರ ಟೆಲಿಫೋನ್ ನಿಗಮ ನಿಯಮಿತ(ಎಂಟಿಎನ್ಎಲ್) ಈಗ ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಈ ಸಂಸ್ಥೆಗಳ ಲಕ್ಷದಷ್ಟೂ ಕಾರ್ಮಿಕರಿಗೆ ಸ್ವಯಂ ನಿವೃತ್ತಿ ಯೋಜನೆ ಹೇರಿ ಮನೆಗೆ ಕಳುಹಿಸಲಾಗಿದೆ. ಇದೇ ವೇಳೆ ಮೋದಿ ಆಪ್ತ ಮಿತ್ರರಾದ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಜಿಯೋ ಮೂರೇ ವರ್ಷಗಳಲ್ಲಿ ಮೊಬೈಲ್ ಸೇವಾ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೆ ಏರಿದೆ.
ಇತ್ತೀಚಿನ ಅದ್ಭುತ ಎಂದರೆ, ಮೋದಿ ಪರಮಾಪ್ತರಾದ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ ಅವರು ಒಂದೇ ವರ್ಷದಲ್ಲಿ 49 ಬಿಲಿಯನ್ ಡಾಲರ್ (3,67,500 ಕೋಟಿ ರೂಪಾಯಿಗಳು)ಗಳಷ್ಟು ಸಂಪತ್ತನ್ನು ವೃದ್ಧಿಸಿಕೊಂಡಿದ್ದಾರೆ.
ಅವರ ಸಂಪತ್ತಿನ ಪ್ರಭಾವ ಎಷ್ಟಿದೆಯೆಂದರೆ ಜಗತ್ತಿನ ಅಗ್ರ ಶ್ರೀಮಂತರಾದ ಎಲೋನ್ ಮಸ್ಕ್, ಜೆಫ್ ಬಿಜೋಸ್ ಮತ್ತು ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿದ್ದಾರೆ.
ಇದೀಗ ಬಿಡುಗಡೆ ಆಗಿರುವ 2022ರ ಎಂ3ಎಂ ಜಾಗತಿಕ ಶ್ರೀಮಂತರ ಪಟ್ಟಿ ( ‘2022 M3M Hurun Global Rich List ‘ )ಯಲ್ಲಿ ಈ ಮಾಹಿತಿ ನೀಡಲಾಗಿದೆ. ಭಾರತದ ಶ್ರೀಮಂತರ ಪಟ್ಟಿಯನ್ನು ಪ್ರತ್ಯೇಕವಾಗಿ ಪ್ರಕಟಿಸಲಾಗಿದ್ದು, ಅಂಬಾನಿ ಮತ್ತು ಅದಾನಿ ಮೊದಲೆರಡು ಅಗ್ರಸ್ಥಾನದಲ್ಲಿದ್ದಾರೆ.
2022ರ ಎಂ3ಎಂ ಜಾಗತಿಕ ಶ್ರೀಮಂತರ ಪಟ್ಟಿ ಅಂಕಿ ಅಂಶಗಳ ಪ್ರಕಾರ, ಒಂದೇ ವರ್ಷದಲ್ಲಿ ಅದಾನಿ ಸಂಪತ್ತು ಶೇ.151ರಷ್ಟು ಏರಿಕೆಯಾಗಿದೆ. ಮೋದಿ ಅವರ ಪರಮಾಪ್ತ ಗೌತಮ್ ಅದಾನಿ ಅವರ ಸಂಪತ್ತು ಈಗ ಒಟ್ಟು 81 ಬಿಲಿಯನ್ ಡಾಲರ್ (6,07,500 ಕೋಟಿ ರೂಪಾಯಿ) ಗಳಿಗೇರಿದೆ.

ಮೋದಿ ಅವರ ಆಪ್ತ ರಿಲಯನ್ಸ್ ಸಮೂಹದ ಮುಖೇಶ್ ಅಂಬಾನಿ ಅವರ ಸಂಪತ್ತು ಒಂದು ವರ್ಷದಲ್ಲಿ ಶೇ.24ರಷ್ಟು ಏರಿಕೆಯಾಗಿದೆ. 103 ಬಿಲಿಯನ್ ಡಾಲರ್ (7,72,500 ಕೋಟಿ ರೂಪಾಯಿ) ಸಂಪತ್ತು ಹೊಂದಿರುವ ಮುಖೇಶ್ ಅಂಬಾನಿ ಅವರು ಭಾರತದ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಜಾಗತಿಕ ಮಟ್ಟದಲ್ಲಿ ಅವರ ಸ್ಥಾನಮತ್ತಷ್ಟು ಮೇಲೇರಿದೆ.
ಕಳೆದ ಹತ್ತು ವರ್ಷಗಳಲ್ಲಿ ಮುಖೇಶ್ ಅಂಬಾನಿ ಅವರ ಸಂಪತ್ತು ಶೇ.400ರಷ್ಟು ವೃದ್ಧಿಸಿದ್ದರೆ, ಗೌತಮ್ ಅದಾನಿ ಅವರ ಸಂಪತ್ತು ಶೇ.1830ರಷ್ಟು ಜಿಗಿದಿದೆ. ಈ ಪೈಕಿ ಕಳೆದ ಏಳೂವರೆ ವರ್ಷಗಳಲ್ಲೇ ಅಂದರೆ ಮೋದಿ ಅವರ ಆಡಳಿತದಲ್ಲಿ ಗೌತಮ್ ಅದಾನಿ ಸಂಪತ್ತು ಅತಿ ಹೆಚ್ಚು ವೃದ್ಧಿಸಿದೆ.
ಎಚ್ಸಿಎಲ್ ಕಂಪನಿಯ ಶಿವನಾಡರ್ ಅವರು 28 ಬಿಲಿಯನ್ ಡಾಲರ್ (2,10,000 ಕೋಟಿ ರೂಪಾಯಿ)ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಕೋವಿಡ್ ಬಂದ ನಂತರ ಪ್ರವರ್ಧಮಾನಕ್ಕೆ ಬಂದ ಸೀರಮ್ ಇನ್ಸ್ಟಿಟ್ಯೂಟ್ ಕಂಪನಿಯ ಸೈರಸ್ ಪೂನಾವಾಲ 26 ಬಿಲಿಯನ್ ಡಾಲರ್ (1,95,000 ಕೋಟಿ ರೂಪಾಯಿ) ಮತ್ತು ಉಕ್ಕು ಉದ್ಯಮಿ ಲಕ್ಷ್ಮಿನಾರಾಯಣ ಮಿತ್ತಲ್ 25 ಬಿಲಿಯನ್ ಡಾಲರ್ (1,87,500ಕೋಟಿ ರೂಪಾಯಿ)ನೊಂದಿಗೆ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ.
“59 ವರ್ಷದ ಗೌತಮ್ ಅದಾನಿ ಅವರು ಎಂ3ಎಂ ಹುರುನ್ ಜಾಗತಿಕ ಶ್ರೀಮಂತರ ಪಟ್ಟಿ2022 ರಲ್ಲಿ ಅತಿ ಹೆಚ್ಚು ಲಾಭ ಗಳಿಸಿದ್ದಾರೆ ಮತ್ತು ಕಳೆದ ಒಂದೇ ವರ್ಷದಲ್ಲಿ ಅವರ ಸಂಪತ್ತು 49 ಬಿಲಿಯನ್ ಡಾಲರ್ ಗಳಷ್ಟುವೃದ್ಧಿಸಿದೆ” ಎಂದು ಎಂ3ಎಂ ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯು ತಿಳಿಸಿದೆ. ಅವರ ನಿವ್ವಳ ಸಂಪತ್ತಿನ ಸೇರ್ಪಡೆಯು “ಎಲೋನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಬರ್ನಾರ್ಡ್ ಅರ್ನಾಲ್ಟ್ ಅವರಂತಹ ಅಗ್ರ ಮೂರು ಜಾಗತಿಕ ಬಿಲಿಯನೇರ್‌ಗಳಿಗಿಂತ ಹೆಚ್ಚು” ಎಂದೂ ಹೇಳಿದೆ. ನವೀಕರಿಸಬಹುದಾದ ಇಂಧನ ಕಂಪನಿಯಾದ ‘ಅದಾನಿ ಗ್ರೀನ್’ನ ಷೇರುಪೇಟೆಯಲ್ಲಿ ಲಿಸ್ಟಾದ ನಂತರ ಅವರ ಸಂಪತ್ತು ಐದು ಪಟ್ಟು ಹೆಚ್ಚಿದೆ. 2020 ರಲ್ಲಿ 17ಬಿಲಿಯನ್ ಡಾಲರ್ ಇದ್ದದ್ದು ಈಗ 81 ಬಿಲಿಯನ್ ಡಾಲರ್ ಗಳಿಗೆ ಜಿಗಿದಿದೆ.

