ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಈ ವೇಳೆಗೆ ಸೌದಿ ಅರೆಬಿಯಾ ಅರಾಮ್ಕೊ ಕಂಪನಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ ದೊಡ್ಡ ಪಾಲುದಾರಿಕೆ ಪಡೆಯಬೇಕಿತ್ತು. ಜಗತ್ತಿನ ಅತಿದೊಡ್ಡ ತೈಲ ಉತ್ಪಾದನಾ ಕಂಪನಿಯಾಗಿರುವ ಆರಾಮ್ಕೊ ರಿಲಯನ್ಸ್ ಇಂಡಸ್ಟ್ರೀಸ್ ನಲ್ಲಿ 15 ಬಿಲಿಯನ್ ಡಾಲರ್ (112,500 ಕೋಟಿ ರೂಪಾಯಿ) ಹೂಡಿಕೆ ಮಾಡಬೇಕಿತ್ತು. ಆರಂಭಿಕ ಹಂತದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆದ ಮಾತುಕತೆಗಳು ಕೊನೆ ಕ್ಷಣದಲ್ಲಿ ರದ್ದಾದವು. ಆದರೆ, ಸೌದಿ ಅರೆಬಿಯಾ ಭಾರತದಲ್ಲಿ ತನ್ನ ಹೂಡಿಕೆ ಮಾಡುವ ಉದ್ದೇಶವನ್ನು ಅಷ್ಟಕ್ಕೆ ಕೈಬಿಟ್ಟಿಲ್ಲ. ರಿಲಯನ್ಸ್ ಅಲ್ಲದಿದ್ದರೆ, ರಿಲಯನ್ಸ್ ಗೆ ಸರಿಸಮಾನರಾದವರ ಜತೆ ಪಾಲುದಾರಿಕೆ ಮಾಡಿಕೊಳ್ಳಲು ಮುಕ್ತಮನಸ್ಸಿನಿಂದಿದೆ. ಮುಖೇಶ್ ಅಂಬಾನಿ ಅವರೊಂದಿಗೆ ಮಾತುಕತೆ ಮುರಿದು ಬಿದ್ದಾಗಲೇ ಸೌದಿ ಅರೆಬಿಯಾ ಭಾರತದಲ್ಲಿ ಹೂಡಿಕೆ ಮಾಡುವ ಇರಾದೆಯನ್ನು ವ್ಯಕ್ತ ಪಡಿಸಿತ್ತು.
ಇದೀಗ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಖೇಶ್ ಅಂಬಾನಿ ಅವರು ಕೈಚೆಲ್ಲಿದ ಅರಾಮ್ಕೊ ಜತೆಗೆ ಅದಾನಿ ಸಮೂಹದ ಗೌತಮ್ ಅದಾನಿ ಕೈ ಜೋಡಿಸಲಿದ್ದಾರಂತೆ. ಬ್ಲೂಮ್ ಬರ್ಗ್ ವರದಿ ಪ್ರಕಾರ, ಅದಾನಿ ಗ್ರೂಪ್ ಸೌದಿ ಅರೇಬಿಯಾದಲ್ಲಿ ಸಂಭಾವ್ಯ ಪಾಲುದಾರಿಕೆಗಳನ್ನು ಅನ್ವೇಷಿಸುತ್ತಿದೆ, ಇದರಲ್ಲಿ ವಿಶ್ವದ ಅತಿದೊಡ್ಡ ತೈಲ ರಫ್ತುದಾರರಲ್ಲಿ ಪಾಲನ್ನು ಖರೀದಿಸುವ ಸಾಧ್ಯತೆಯೂ ಇದೆ.
ಗೌತಮ್ ಅದಾನಿ ನೇತೃತ್ವದ ಗುಂಪು, ಸೌದಿ ಅರಾಮ್ಕೊ ಮತ್ತು ಸೌದಿಯ ಪಬ್ಲಿಕ್ ಇನ್ವೆಸ್ಟ್ಮೆಂಟ್ ಫಂಡ್ (ಪಿಐಎಫ್)ನಲ್ಲಿ ಸಂಭಾವ್ಯ ಸಹಕಾರ ಮತ್ತು ಜಂಟಿ ಹೂಡಿಕೆ ಅವಕಾಶಗಳ ಕುರಿತು ಪ್ರಾಥಮಿಕ ಮಾತುಕತೆಗಳನ್ನು ನಡೆಸಿದೆ. ಅರಾಮ್ಕೊದಲ್ಲಿ ಪಿಐಎಫ್‌ನ ಪಾಲನ್ನು ಖರೀದಿಸುವ ಕುರಿತಾಗಿಯೂ ಚರ್ಚಿಸಲಾಗಿದೆ ಎಂದು ಉನ್ನತಮೂಲಗಳನ್ನು ಉಲ್ಲೇಖಿಸಿ ಬ್ಲೂಮ್ ಬರ್ಗ್ ವರದಿ ಮಾಡಿದೆ.
ಅದಾನಿಯು ಅರಾಮ್ಕೊ ಪಾಲು ಪಡೆಯಲು ಬಿಲಿಯನ್‌ಗಟ್ಟಲೆ ಡಾಲರ್‌ಗಳನ್ನು ನಗದು ರೂಪದಲ್ಲಿ ಪಾವತಿಸುವ ಸ್ಥಿತಿಯಲ್ಲಿ ಇಲ್ಲ. ಆದರೆ, ಅಲ್ಪಾವಧಿಯಲ್ಲಿ, ವಿಶಾಲವಾದ ಪಾಲುದಾರಿಕೆ ಒಡಂಬಡಿಕೆ ಅಥವಾ ಆಸ್ತಿ ವಿನಿಮಯ ಒಪ್ಪಂದ ಮಾಡಿಕೊಳ್ಳಬಹುದು. ಅಂದರೆ, ಅದಾನಿ ಕಂಪನಿಗಳ ಕೆಲವು ಷೇರುಗಳನ್ನು ನೀಡಿ, ಪಿಎಫ್ಐ ಷೇರುಗಳನ್ನು ಪಡೆಯಬಹುದು.
ನವೀಕರಿಸಬಹುದಾದ ಇಂಧನ, ಆಹಾರ ಧಾನ್ಯ, ಖಾದ್ಯತೈಲ ಅಥವಾ ರಾಸಾಯನಿಕಗಳಂತಹ ಕ್ಷೇತ್ರಗಳಲ್ಲಿ ಅದಾನಿ ಸಮೂಹವು ಅರಾಮ್ಕೊ ಅಥವಾ ಸಬಿಕ್‌ನಂತಹ ಅಂಗಸಂಸ್ಥೆಗಳೊಂದಿಗೆ ಕೈಜೋಡಿಸಬಹುದು.
ಸೌದಿ ಅರೇಬಿಯಾದ ಸಾವರಿನ್ ವೆಲ್ತ್ ಫಂಡ್ ಆಗಿರುವ ಪಿಐಎಫ್ ಭಾರತದಲ್ಲಿ ಮೂಲಸೌಕರ್ಯದಲ್ಲಿ ಹೂಡಿಕೆ ಮಾಡುವ ಅವಕಾಶವನ್ನು ಅದಾನಿ ಸಮೂಹ ನೀಡಬಹುದು. ಸಮಾಲೋಚನೆಗಳು ಆರಂಭಿಕ ಹಂತದಲ್ಲಿವೆ ಮತ್ತು ಯಾವುದೇ ಸಂಭಾವ್ಯ ಸಹಕಾರವನ್ನು ಯಾವ ರೂಪದಲ್ಲಿ ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ಅದಾನಿ ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ.
ಕಳೆದ ತಿಂಗಳು, ಸೌದಿ ಸರ್ಕಾರವು ಪಿಐಎಫ್ ಗೆ ಶೇ.4ರಷ್ಟು ಪಾಲನ್ನು ವರ್ಗಾಯಿಸಿತು. ರಿಯಾದ್‌ನಲ್ಲಿ ಅರಾಮ್ಕೊದ ಗುರುವಾರದ ವಹಿವಾಟು ಮುಕ್ತಾಯದ ವೇಳೆ ಇದ್ದ ಷೇರು ಮುಖಬೆಲೆ ಆಧರಿಸಿದರೆ ಅದು 89 ಬಿಲಿಯನ್ ಡಾಲರ್ ಗಳಷ್ಟಾಗುತ್ತದೆ.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಸೂಚ್ಯಂಕದ ಪ್ರಕಾರ ಗೌತಮ್ ಅದಾನಿ ಸುಮಾರು 90.5 ಬಿಲಿಯನ್ ಡಾಲರ್ (6,78,750 ಕೋಟಿ ರೂಪಾಯಿ) ಸಂಪತ್ತಿನೊಂದಿಗೆ ಏಷ್ಯಾದ ಎರಡನೇ ಅತಿ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ಬಂದರುಗಳು, ವಿದ್ಯುತ್, ನವೀಕರಿಸಬಹುದಾದ ಇಂಧನ, ವಿಮಾನ ನಿಲ್ದಾಣಗಳು, ಕಲ್ಲಿದ್ದಲು ವ್ಯಾಪಾರ ಮತ್ತು ದತ್ತಾಂಶ ಕೇಂದ್ರಗಳನ್ನು ಒಳಗೊಂಡ ವ್ಯಾಪಾರಗಳ ಬಹುವಿಸ್ತಾರ ವ್ಯಾಪ್ತಿಯನ್ನು ಅದಾನಿ ಸಮೂಹವು ಹೊಂದಿದೆ.
ಜನವರಿಯಲ್ಲಿ ಅದಾನಿ ಸಮೂಹವು ದಕ್ಷಿಣ ಕೊರಿಯಾದ ಪೋಸ್ಕೋದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಗುಜರಾತ್‌ನಲ್ಲಿ ಹಸಿರು ಉಕ್ಕಿನ ಗಣಿಯನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಉದ್ಯಮಗಳ ವಿಸ್ತರಣೆಯನ್ನು ಈ ಒಪ್ಪಂದ ಒಳಗೊಂಡಿದೆ. ಒಪ್ಪಂದದನ್ವಯ ದಕ್ಷಿಣ ಕೋರಿಯಾ ಮುಂಬರುವ ವರ್ಷಗಳಲ್ಲಿ 5 ಬಿಲಿಯನ್ ಡಾಲರ್ (37,500 ಕೋಟಿ ರೂಪಾಯಿ) ಹೂಡಿಕೆ ಮಾಡುವ ಸಾಧ್ಯತೆ ಇದೆ.
ಸೌದಿ ಅರೇಬಿಯಾ ಹಲವಾರು ವರ್ಷಗಳಿಂದ ಭಾರತದೊಂದಿಗೆ ವ್ಯವಹಾರಿಕ ಬಾಂಧವ್ಯವನ್ನು ಹೆಚ್ಚಿಸಲು ಬಯಸುತ್ತಿದೆ. 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಬಂದಿದ್ದ ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಭಾರತದಲ್ಲಿ $ 100 ಬಿಲಿಯನ್ ಹೂಡಿಕೆ ಮಾಡುವುದಾಗಿ ಹೇಳಿದ್ದರು. ಪಿಐಎಫ್ ಈಗಾಗಲೇ ಭಾರತದಲ್ಲಿ ಹಲವಾರು ವ್ಯವಹಾರ ಒಪ್ಪಂದ ಮಾಡಿಕೊಂಡಿದೆ, ರಿಲಯನ್ಸ್‌ನ ರಿಟೇಲ್ಸ್ ಮತ್ತು ವೈರ್‌ಲೆಸ್ ಮತ್ತು ಫೈಬರ್-ಆಪ್ಟಿಕ್ ನೆಟ್‌ವರ್ಕ್ ವಿಭಾಗದಲ್ಲಿ ಷೇರುಗಳನ್ನು ಖರೀದಿಸಿದೆ. ಅಷ್ಟೇ ಅಲ್ಲ ಅರಾಮ್ಕೊದ ಅಧ್ಯಕ್ಷ ಮತ್ತು ಪಿಐಎಫ್ ನ ಗವರ್ನರ್ ಆಗಿರುವ ಯಾಸಿರ್ ಅಲ್-ರುಮಯ್ಯನ್ ಅವರು ರಿಲಯನ್ಸ್ ಕಂಪನಿ ಮಂಡಳಿ ಸದಸ್ಯರಾಗಿದ್ದಾರೆ. ಮುಂಬರುವ ದಿನಗಳಲ್ಲಿ ರಿಲಯನ್ಸ್ ಟೆಲಿಕಾಂಮ್, ರಿಟೇಲ್ ಮತ್ತಿತರ ವ್ಯವಹಾರಗಳನ್ನು ಇಬ್ಬಾಗಿಸಿ ಪ್ರತ್ಯೇಕ ಕಂಪನಿಗಳಾಗಿ ರೂಪಿಸಲಿದೆ. ಈಗಾಗಲೇ ಹೂಡಿಕೆ ಮಾಡಿರುವ ಸೌದಿಯ ಪಿಐಎಫ್ ಗೆ ಇದರಿಂದ ಭಾರಿ ಪ್ರಮಾಣದ ಲಾಭವಾಗಲಿದೆ.