ಬೆಂಗಳೂರು: ಗ್ಯಾಸ್ ಗೀಸರ್‌ನಿಂದ ವಿಷಾನಿಲ ಸೋರಿಕೆಯಾಗಿ ತಾಯಿ ಮಗು ಸಾವನ್ನಪ್ಪಿರುವ ಘಟನೆ ಗೋವಿಂದರಾಜನಗರದ ಪಂಚಶೀಲನಗರದ ಮನೆಯಲ್ಲಿ ನಿನ್ನೆ ಸಂಜೆ ನಡೆದಿದೆ.

ಮನೆಯಲ್ಲಿ ವಾಸ ಮಾಡುತ್ತಿದ್ದ ತಾಯಿ ಚಾಂದಿನಿ(26), ಮಗ ಕಿರಣ್(4) ಮೃತ ದುರ್ದೈವಿಗಳಾಗಿದ್ದಾರೆ. ನಿನ್ನೆ ಮನೆಯಲ್ಲಿ ಗ್ಯಾಸ್ ಗೀಸರ್ ಬಳಸಿ ಅಮ್ಮ ಮಗ ಸ್ನಾನ ಮಾಡುತ್ತಿದ್ದಾಗ ಇಬ್ಬರು ಅಸ್ವಸ್ಥರಾಗಿ ಬಿದ್ದಿದ್ದರು. ಈ ವೇಳೆ ಮತ್ತೊಂದು ಮಗುವನ್ನು ಶಾಲೆಯಿಂದ ಕರೆದುಕೊಂಡು ಬಂದಿದ್ದ ಚಾಂದಿನಿ ಪತಿ ಮನೆ ಬಾಗಿಲು ಬಡಿದಿದ್ರು. ಆದರೆ ಬಾಗಿಲು ತೆರೆಯದಿದ್ದಾಗ ಬಾಗಿಲು ಹೊಡೆದು ಒಳಗ ಹೋಗಿ ನೋಡಿದಾಗ ತಾಯಿ, ಮಗು ಅಸ್ವಸ್ಥರಾಗಿ ಬಿದ್ದಿರೋದು ಗೊತ್ತಾಗಿದೆ. ತಕ್ಷಣ ಇಬ್ಬರನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು.ಆದರೆ ಆಸ್ಪತ್ರೆ ತಲುಪುವ ಮುನ್ನವೇ ಇಬ್ಬರು ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಸದ್ಯ ಘಟನೆ ಬಗ್ಗೆ ಗೋವಿಂದರಾಜ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.













