ರಾಜ್ಯ ಕಾಂಗ್ರೆಸ್ ಪಾಳಯದಲ್ಲಿ ಗೊಂದಲ ಮನೆಮಾಡಿದ್ದು, ತಮ್ಮದೇ ಪಕ್ಷದ ಶಾಸಕರ ಹೆಸರುಗಳನ್ನು ಉಲ್ಲೇಖಿಸಿ 100 ಕೋಟಿ ಆಫರ್ ಬಗ್ಗೆ ಪ್ರಸ್ತಾಪಿಸಿದ ಮಂಡ್ಯದ ಕಾಂಗ್ರೆಸ್ ಶಾಸಕ ಗಣಿಗ ರವಿ ಹೇಳಿಕೆಯನ್ನು ಸ್ವಪಕ್ಷೀಯರೇ ತಳ್ಳಿ ಹಾಕಿದ್ದು, ಸರ್ಕಾರಕ್ಕೆ ಮುಜುಗರ ಎದುರಾಗಿದೆ.
ಕಾಂಗ್ರೆಸ್ ತೊರೆದು BJP ಸೇರುವುದಕ್ಕೆ ನಮ್ಮ ಶಾಸಕರಿಗೆ ₹100 ಕೋಟಿ ಆಫರ್ ನೀಡಲಾಗುತ್ತಿದೆ ಎಂಬ ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ಆರೋಪವನ್ನು ಕಾಂಗ್ರೆಸ್ ಶಾಸಕರಾದ ಬಾಬಾ ಸಾಹೇಬ್ ಪಾಟೀಲ್ ಹಾಗೂ ತಮ್ಮಯ್ಯ ಸಂಪೂರ್ಣ ತಳ್ಳಿಹಾಕಿದ್ದಾರೆ.
ಬಿಜೆಪಿಯಿಂದ ಯಾವುದೇ ನಾಯಕರು ತಮ್ಮನ್ನು ಸಂಪರ್ಕಿಸಿಲ್ಲ ಎಂದು ಕಿತ್ತೂರು ಕಾಂಗ್ರೆಸ್ MLA ಬಾಬಾಸಾಹೇಬ್ ಪಾಟೀಲ್ ಮತ್ತು ಚಿಕ್ಕಮಗಳೂರಿನ ಕಾಂಗ್ರೆಸ್ ಶಾಸಕ HD ತಮ್ಮಯ್ಯ ಸ್ಪಷ್ಟಪಡಿಸಿದ್ದಾರೆ. ತಮಗೆ ಯಾವುದೇ ದುಡ್ಡಿನ ಆಫರ್ ಬಂದಿಲ್ಲ. ಗಣಿಗ ನೀಡಿರುವ ಹೇಳಿಕೆ ಸುಳ್ಳು. ಅವರು ಯಾಕೆ ಹೀಗೆ ಹೇಳಿದ್ದಾರೆ ಎಂಬುದಾಗಿ ಅವರನ್ನೇ ಕೇಳಿ ಎಂದಿದ್ದಾರೆ.
ಆದ್ರೆ ಇತ್ತ ಬಿಜೆಪಿ ನಾಯಕರು ತಮ್ಮ ಪಕ್ಷದ ಶಾಸಕರನ್ನು ಸಂಪರ್ಕಿಸಿರುವ ಬಗ್ಗೆ ತಮ್ಮ ಬಳಿ ದಾಖಲೆಗಳಿದ್ದು ಸದ್ಯದಲ್ಲೆ ಬಿಡುಗಡೆ ಮಾಡುವುದಾಗಿ ಗಣಿಗ ರವಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.