ನವದೆಹಲಿ : ಜನಪ್ರಿಯ ಹಿಂದಿ ವೆಬ್ ಸೀರೀಸ್ ‘ಫರ್ಜಿ’ (Farzi)ಯಿಂದ ಪ್ರೇರಿತರಾಗಿ ಐದು ರಾಜ್ಯಗಳಲ್ಲಿ ನಕಲಿ 500 (Fake 500) ರೂಪಾಯಿ ಮುಖಬೆಲೆಯ ನೋಟುಗಳನ್ನು ಮುದ್ರಿಸಿ ಚಲಾವಣೆ ಮಾಡುತ್ತಿದ್ದ ಅಂತರರಾಜ್ಯ ಜಾಲವೊಂದನ್ನು ರಾಜಸ್ಥಾನ ಪೊಲೀಸರು ಭೇದಿಸಿದ್ದಾರೆ. ‘ಆಪರೇಷನ್ ನೋಟ್ಫ್ಲಿಕ್ಸ್’ ಹೆಸರಿನಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ದುಂಗರ್ಪುರ ಪೊಲೀಸರು, ರಾಜಸ್ಥಾನ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ಹರಡಿಕೊಂಡಿದ್ದ ಈ ದಂಧೆಯ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧನದ ಬೆನ್ನುಹತ್ತಿದಾಗ ಬಯಲಾಯ್ತು ಅಂತರರಾಜ್ಯ ದಂಧೆ
ಸೆಪ್ಟೆಂಬರ್ 29ರಂದು ರಾಜಸ್ಥಾನದ ದುಂಗರ್ಪುರ ವ್ಯಾಪ್ತಿಯ ಮಾಡಾ ಶಾಲಾ ಮೈದಾನದ ಬಳಿ ಭಾವೇಶ್ ಖತಿಕ್ ಮತ್ತು ನಯನ್ ಜೋಶಿ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಾಗ ಈ ಜಾಲದ ಮೊದಲ ಸುಳಿವು ಸಿಕ್ಕಿತ್ತು. ಇವರಿಂದ ಬರೋಬ್ಬರಿ 4,95,500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಬಳಿಕ ಇವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಈ ದಂಧೆಯ ಬೇರುಗಳು ಹಲವು ರಾಜ್ಯಗಳಿಗೆ ಹರಡಿರುವುದು ಬೆಳಕಿಗೆ ಬಂದಿದೆ.

ಫರ್ಜಿ ಸೀರೀಸ್, ಯೂಟ್ಯೂಬ್ ಮತ್ತು ಫೋಟೋಶಾಪ್ ಬಳಕೆ
ದುಂಗರ್ಪುರ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕುಮಾರ್ ನೀಡಿದ ಮಾಹಿತಿ ಪ್ರಕಾರ, ಹರಿಯಾಣದ ಅಂಬಾಲಾ ಮೂಲದ ಆನಂದ್ ರಜಪೂತ್ ಎಂಬಾತ ‘ಫರ್ಜಿ’ ವೆಬ್ ಸೀರೀಸ್ ನೋಡಿ ನಕಲಿ ನೋಟು ಮುದ್ರಿಸುವ ಯೋಜನೆ ರೂಪಿಸಿದ್ದನು. ನೋಟುಗಳ ವಿನ್ಯಾಸ ಸಿದ್ಧಪಡಿಸಲು ಫೋಟೋಶಾಪ್ ತಂತ್ರಾಂಶ ಮತ್ತು ಯೂಟ್ಯೂಬ್ ವಿಡಿಯೋಗಳ ಸಹಾಯ ಪಡೆದುಕೊಂಡಿದ್ದರು. ಪ್ರಕರಣದ ಪ್ರಮುಖ ಆರೋಪಿ ರವಿ ಕುಮಾರ್ ಪೊಲೀಸರ ಕಾರ್ಯಾಚರಣೆಯ ಸುಳಿವು ಸಿಗುತ್ತಿದ್ದಂತೆ ಪದೇ ಪದೇ ಮೊಬೈಲ್ ಸಂಖ್ಯೆ ಮತ್ತು ಸ್ಥಳ ಬದಲಾಯಿಸುತ್ತಾ ತಲೆಮರೆಸಿಕೊಂಡಿದ್ದನು. ಕೊನೆಗೆ ಪೊಲೀಸರು ದುಂಗರ್ಪುರದಿಂದ ಸುಮಾರು 1,300 ಕಿಲೋಮೀಟರ್ ದೂರದ ಪಂಜಾಬ್ನ ಲುಧಿಯಾನ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ.
ಟೆಲಿಗ್ರಾಂ ಮೂಲಕ ಕಾಗದ, ಆನ್ಲೈನ್ ಮೂಲಕ ಡಿಜಿಟಲ್ ಫೈಲ್ ಸಂಗ್ರಹ
ನಕಲಿ ನೋಟು ಮುದ್ರಣಕ್ಕೆ ಬೇಕಾದ ಅತ್ಯಾಧುನಿಕ ಗುಣಮಟ್ಟದ ಕಾಗದವನ್ನು ಉತ್ತರ ಪ್ರದೇಶದ ಕಾನ್ಪುರ ಮೂಲದ ಮೊಹಮ್ಮದ್ ಆರಿಫ್ ಎಂಬಾತ ಒದಗಿಸುತ್ತಿದ್ದನು. ಇದಕ್ಕಾಗಿ ಆತ ಟೆಲಿಗ್ರಾಂನಲ್ಲಿ ಕಾರ್ಯಾಚರಿಸುತ್ತಿದ್ದ ‘ಅಂಕಿತ್ ಪೇಪರ್ ಸೆಲ್ಲರ್’ ಎಂಬ ಚಾನೆಲ್ ಅನ್ನು ಬಳಸಿಕೊಂಡಿದ್ದನು. ಇನ್ನೊಬ್ಬ ಆರೋಪಿ ಛತ್ತೀಸ್ಗಢದ ದುರ್ಗ್ ಮೂಲದ ತರುಣ್ ಮಲೇಕರ್ ಎಂಬಾತ 500 ರೂಪಾಯಿ ನೋಟಿನ ನಕಲು ತಯಾರಿಕೆಗೆ ಅಗತ್ಯವಿದ್ದ ಡಿಜಿಟಲ್ ಫೈಲ್ ಅನ್ನು ಪೂರೈಸಿದ್ದನು.
ಐದು ರಾಜ್ಯಗಳ 6 ಆರೋಪಿಗಳು ಪೊಲೀಸ್ ವಶಕ್ಕೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಪ್ರತಾಪ್ಗಢದ ರವಿ ಕುಮಾರ್, ಹರಿಯಾಣದ ಆನಂದ್ ರಜಪೂತ್, ಉತ್ತರ ಪ್ರದೇಶದ ಮೊಹಮ್ಮದ್ ಆರಿಫ್, ಛತ್ತೀಸ್ಗಢದ ತರುಣ್ ಮಲೇಕರ್ ಹಾಗೂ ರಾಜಸ್ಥಾನದ ದುಂಗರ್ಪುರದ ಭಾವೇಶ್ ಖತಿಕ್ ಮತ್ತು ನಯನ್ ಜೋಶಿ ಸೇರಿದಂತೆ ಒಟ್ಟು ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಇದುವರೆಗೆ ಎಷ್ಟು ಪ್ರಮಾಣದ ನಕಲಿ ಕರೆನ್ಸಿಯನ್ನು ಮಾರುಕಟ್ಟೆಗೆ ಬಿಟ್ಟಿದೆ ಮತ್ತು ಈ ಜಾಲದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸವದತ್ತಿ ಯಲ್ಲಮ್ಮನ ಸನ್ನಿಧಿಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ವಿಶೇಷ ಪೂಜೆ : ನಾಡಿನ ಸುಖ-ಶಾಂತಿಗೆ ಪ್ರಾರ್ಥನೆ






