ಉತ್ತರ ಪ್ರದೇಶದಲ್ಲಿ ಓರ್ವ ಮಹಿಳೆ ಹಾಗೂ ಆಕೆಯ ಅಪ್ರಾಪ್ತ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಅಖಿಲೇಶ್ ನೇತೃತ್ವದ ಸರ್ಕಾರದಲ್ಲಿದ್ದ ಮಾಜಿ ಸಚಿವ ಗಾಯತ್ರಿ ಪ್ರಜಾಪತಿ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಪ್ರಜಾಪತಿ ಅವರೊಂದಿಗೆ ಇನ್ನೂ ಇಬ್ಬರು ಅಪರಾಧಿಗಳಿಗೂ ಜೀವಾವಧಿ ಶಿಕ್ಷೆ ಪ್ರಕಟಿಸಿದ ವಿಶೇಷ ನ್ಯಾಯಾಲಯವು, ಅಪರಾಧಿಗಳಿಗೆ ತಲಾ ಎರಡು ಲಕ್ಷ ದಂಡವನ್ನೂ ವಿಧಿಸಿದೆ.
ಶಿಕ್ಷೆ ಪ್ರಕಟಿಸುವ ಸಮಯದಲ್ಲಿ ಗಾಯತ್ರಿ ಪ್ರಜಾಪತಿ, ಇನ್ನಿಬ್ಬರು ಅಪರಾಧಿಗಳಾದ ಅಶೋಕ್ ತಿವಾರಿ ಮತ್ತು ಆಶೀಶ್ ಶುಕ್ಲಾ ಅವರು ನ್ಯಾಯಾಲಯದಲ್ಲಿ ಖುದ್ದು ಹಾಜರಿದ್ದರು. ಬುಧವಾರದಂದು ಪ್ರಕರಣದ ತೀರ್ಪನ್ನು ಜಸ್ಟೀಸ್ ಪಿ ಕೆ ರೈ ಅವರು ಪ್ರಕಟಿಸಿದ್ದರು. ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮಾಜಿ ಸಚಿವ ಸೇರಿದಂತೆ ಇನ್ನಿಬ್ಬರ ಪಾತ್ರ ಇರುವುದರ ಕುರಿತು ಪೊಲೀಸರು ಒದಗಿಸಿದ ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ನ್ಯಾಯಾಲಯ ಮೂವರನ್ನು ದೋಷಿ ಎಂದು ಘೋಷಿಸಿತ್ತು. ಪ್ರಕರಣದಲ್ಲಿ ಆರೋಪಿಗಳಾಗಿದ್ದ ವಿಕಾಸ್ ವರ್ಮಾ, ರೂಪೇಶ್ವರ್, ಅಮರೇಂದ್ರ ಸಿಂಗ್ ಅಲಿಯಾಸ್ ಪಿಂಟು ಹಾಗೂ ಚಂದ್ರಪಾಲ್ ನಾಲ್ವರನ್ನು ನಿರ್ದೋಷಿಗಳೆಂದು ಕೋರ್ಟ್ ಹೇಳಿತ್ತು.
ತೀರ್ಪು ನೀಡಲು ಯಾವುದೇ ಸಂಶಯವೇ ಇಲ್ಲದಂತ ಸಾಕ್ಷ್ಯಾಧಾರಗಳನ್ನು ಪ್ರಾಸಿಕ್ಯೂಶನ್ ಒದಗಿಸಿದೆ ಎಂದು ಕೋರ್ಟ್ ಹೇಳಿತ್ತು. ಸಾಮೂಹಿಕ ಅತ್ಯಾಚಾರವೆಸಗಿದ್ದಕ್ಕೆ IPC ಸೆಕ್ಷನ್ 376 (D) ಹಾಗೂ ಅಪ್ರಾಪ್ತೆಯ ಮೇಲೆ ನಿಷೇಧಿತ ಲೈಂಗಿಕ ಕ್ರೀಯೆ ನಡೆಸಿದ್ದಕ್ಕೆ ಪೋಕ್ಸೊ ಕಾಯ್ದೆಯ ಸೆಕ್ಷನ್ 5 (g) ಹಾಗೂ ಸೆಕ್ಷನ್ 6ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ.

ಪೋಕ್ಸೊ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಹತ್ತು ವರ್ಷಗಳ ಕಠಿಣ ಅಜೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿದೆ.
ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಸರ್ಕಾರವಿದ್ದಾಗ, ಗಾಯತ್ರಿ ಪ್ರಜಾಪತಿ ಅವರು ಸಾರಿಗೆ ಮತ್ತು ಗಣಿ ಸಚಿವರಾಗಿದ್ದರು. ಗ್ಯಾಂಗ್ ರೇಪ್ ಪ್ರಕರಣದಲ್ಲಿ 2017ರ ಮಾರ್ಚ್ ತಿಂಗಳಲ್ಲಿ ಅವರನ್ನು ಬಂಧಿಸಲಾಗಿತ್ತು. ಅಂದಿನಿಂದ ಅವರು ಜೈಲಿನಲ್ಲಿಯೇ ಇದ್ದಾರೆ.
ಪ್ರಜಾಪತಿ ಹಾಗೂ ಇತರ ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸುವ ಮೊದಲು, ಇವರ ಪರ ವಕೀಲರು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಸಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
“ತಮ್ಮ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರವೆಸಗುವ ಸಂದರ್ಭದಲ್ಲಿ ಪ್ರಜಾಪತಿ ಸರ್ಕಾರದಲ್ಲಿ ಜವಾಬ್ದಾರಿಯುತ ಮಂತ್ರಿ ಸ್ಥಾನವನ್ನು ಹೊಂದಿದ್ದರು. ಜವಾಬ್ದಾರಿ ಹೊಂದಿರಬೇಕಾದ ವ್ಯಕ್ತಿ ತನ್ನ ಅಧಿಕಾರದ ದುರ್ಬಳಕೆ ಮಾಡಿಕೊಂಡು ಅತ್ಯಾಚಾರದಂತಹ ಹೀನಾಯ ಕೃತ್ಯವೆಸಗಿದ ಕಾರಣಕ್ಕೆ ಅವರಿಗೆ ಕಠಿಣ ಸಜೆ ನೀಡಬೇಕು. ಇದು ಸಮಾಜಕ್ಕೊಂದು ಉದಾಹರಣೆಯಾಗಿರಬೇಕು,” ಎಂದು ಸರ್ಕಾರಿ ವಕೀಲರು ವಾದಿಸಿದ್ದರು.

ಸರ್ಕಾರಿ ವಕೀಲರು ಪ್ರಕರಣಕ್ಕೆ ಸಂಬಂಧಿಸಿ 17 ಜನ ಸಾಕ್ಷಿಗಳನ್ನು ಕೋರ್ಟಿನ ಮುಂದೆ ಹಾಜರುಪಡಿಸಿದ್ದರು.
ಪ್ರಕರಣದ ಎಫ್ಐಆರ್ ದಾಖಲಿಸುವ ಸಂದರ್ಭದಲ್ಲಿ ಅತ್ಯಾಚಾರ ಸಂತ್ರಸ್ಥೆಯು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಕುರಿತು ಹೇಳಿಕೆ ನೀಡಿದ್ದರು. ಕೋರ್ಟಿನಲ್ಲಿ ವಿಚಾರಣೆ ನಡೆಸುವ ವೇಳೆ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದು. ಆದರೆ, ಕೋರ್ಟ್ ಸಂತ್ರಸ್ಥೆಯು ಮೊದಲು ನೀಡಿದ ಹೇಳಿಕೆಯನ್ನೇ ಆಧಾರವಾಗಿಟ್ಟುಕೊಂಡು ತೀರ್ಪು ನೀಡಿದೆ.
ಸಂತ್ರಸ್ಥೆಯು ದೂರು ನೀಡಿದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕಾಗಿ ಮಹಿಳೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣಕ್ಕೆ ಸಂಬಂಧಿಸಿ ಶೀಘ್ರವೇ ಎಫ್ಐಆರ್ ದಾಖಲಿಸುವಂತೆ ಸುಪ್ರಿಂ ಆದೇಶ ನೀಡಿತ್ತು. ಇದಾದ ಬಳಿಕ ಫೆಬ್ರುವರಿ 18, 2017ರಂದು ಮಾಜಿ ಸಚಿವ ಪ್ರಜಾಪತಿ ಮೇಲೆ ಗೌತಮಪಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಸಂತ್ರಸ್ಥೆಯ ಮೇಲೆ ಸಚಿವ ಪ್ರಜಾಪತಿ ಹಾಗೂ ಆತನ ಆಪ್ತರು 2014ರ ಅಕ್ಟೋಬರ್ ತಿಂಗಳಿಂದ ನಿರಂತರ ಅತ್ಯಾಚಾರವೆಸಗುತ್ತಿದ್ದರು. 2016ರ ಜುಲೈನಲ್ಲಿ ಅತ್ಯಾಚಾರಿಗಳು ಅಪ್ರಾಪ್ತ ಮಗಳ ಮೇಲೂ ದೌರ್ಜನ್ಯವೆಸಗಿದಾಗ ದೂರು ನೀಡಲು ನಿರ್ಧರಿಸಿದೆ ಎಂದು ಸಂತ್ರಸ್ಥೆ ಹೇಳಿಕೊಂಡಿದ್ದರು.