ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಕುರಿತಾದ ಪ್ರಕರಣವನ್ನು ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ.
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡುವ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರ ನಡುವೆ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿದೆ. ಹೀಗಾಗಿ ಈ ಪ್ರಕರಣವನ್ನು ಮೂವರು ಸದಸ್ಯರ ಪೀಠಕ್ಕೆ ವರ್ಗಾಯಿಸಲಾಗಿದೆ.

ಸುಪ್ರೀಂಕೋರ್ಟ್‌ನ ನೂತನ ಮುಖ್ಯ ನ್ಯಾಯಮೂರ್ತಿ ಯುಯು ಲಲಿತ್ ಅವರು ತ್ರಿಸದಸ್ಯ ಪೀಠವನ್ನು ರಚಿಸಿದ್ದಾರೆ. ನ್ಯಾ. ಇಂದಿರಾ ಬ್ಯಾನರ್ಜಿ, ನ್ಯಾ. ಎಎಸ್ ಓಕಾ ಮತ್ತು ನ್ಯಾ. ಎಂಎಂ ಸುಂದರೇಶ್ ಅವರನ್ನು ಒಳಗೊಂಡ ನ್ಯಾಯಪೀಠವು ಈದ್ಗಾ ಮೈದಾನ ವಿಚಾರದ ವಾದ- ವಿವಾದ ಆಲಿಸಲಿದೆ.