
ಮಡಿಕೇರಿ: ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಮಿತಿಗಳು ರೂ. ೧೦೦ ಮೌಲ್ಯದ ಬಾಂಡ್ ಪೇಪರ್ನಲ್ಲಿ ಮುಚ್ಚಳಿಕೆ ಸಲ್ಲಿಸಬೇಕು ಎಂಬ ನಿರ್ಧಾರವನ್ನು ವಿರೋಧಿಸಿ ಹಾಗೂ ಪರಿಸರ ಮಾಲಿನ್ಯ ನೆಪದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಸರಕಾರ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಮಡಿಕೇರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಯಿತು.
ಇಲ್ಲಿನ ನಗರಸಭೆ ಕಚೇರಿ ಎದುರು ಮಳೆಯನ್ನು ಲೆಕ್ಕಿಸದೆ ಜಮಾಯಿಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು,ವಿವಿಧ ಗಣೇಶೋತ್ಸವ ಸಮಿತಿ ಸದಸ್ಯರು ಸರಕಾರ ಹಾಗೂ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಮಾಲಿನ್ಯ ತಡೆ ಹೆಸರಿನಲ್ಲಿ ಬಿಗಿ ನಿಯಮ, ಧ್ವನಿವರ್ಧಕ ಬಳಕೆಗೆ ಅಡ್ಡಿ, ಗಣೇಶ ಪ್ರತಿಷ್ಠಾಪನೆಗೆ ಬಾಂಡ್ ಸಲ್ಲಿಸಬೇಕು ಸೇರಿದಂತೆ ವಿವಿಧ ನೀತಿಗಳನ್ನು ಖಂಡಿಸಿದ ಪ್ರತಿಭಟನಾ ನಿರತರು, ವರ್ಷಕ್ಕೆ ಒಮ್ಮೆ ಆಚರಣೆ ಮಾಡುವ ಗಣೇಶೋತ್ಸವಕ್ಕೆ ನೀತಿಗಳನ್ನು ಸಡಿಲಗೊಳಿಸಿ ಮುಕ್ತ ಆಚರಣೆಗೆ ಅವಕಾಶ ನೀಡುವಂತೆ ಆಗ್ರಹಿಸಿದರು.
ಹಿಂದೂ ಜಾಗರಣಾ ವೇದಿಕೆ ಪ್ರಾಂತ ಸಂಘಟಕ ಕೆ.ಟಿ. ಉಲ್ಲಾಸ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿ, ಬ್ರಿಟಿಷರ ವಿರುದ್ಧ ಸ್ವಾತಂತ್ರö್ಯ ಹೋರಾಟದ ಉದ್ದೇಶಕ್ಕೆ ಬಾಲಗಂಗಾಧರ ತಿಲಕರು ಗಣೇಶ ಹಬ್ಬವನ್ನು ಸಾರ್ವಜನಿಕವಾಗಿ ಆಚರಣೆ ಆರಂಭಿಸಿದರು. ಇಂದು ಗಣೇಶ ಪ್ರತಿಷ್ಠಾಪನೆಗೆ ಹತ್ತಾರು ನಿಬಂಧನೆ ಹಾಕಿ ಆಚರಣೆಯನ್ನು ನಿಲ್ಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ಆರಂಭವಾಗಿವೆ.
ಬ್ರಿಟಿಷರು ಕೂಡ ಇಷ್ಟೊಂದು ನಿಯಮ, ಷರತ್ತು ವಿಧಿಸಿರಲಿಲ್ಲ. ಪರಿಸರ, ಶಬ್ದ ಮಾಲಿನ್ಯ, ಟ್ರಾಫಿಕ್ ಸಮಸ್ಯೆ ಆಗುತ್ತದೆ ಎಂದು ನೆಪವೊಡ್ಡಿ ಗಣೇಶ ಹಬ್ಬಕ್ಕೆ ಅಡ್ಡಿ ಮಾಡಲಾಗುತ್ತದೆ. ಮೂರ್ತಿ ಪ್ರತಿಷ್ಠಾಪಿಸುವ ಸಮಿತಿಗಳಿಂದ ರೂ. ೧೦೦ ಮೌಲ್ಯದ ಬಾಂಡ್ ಪೇಪರ್ನಲ್ಲಿ ಮುಚ್ಚಳಿಕೆ ಬರೆಸಿಕೊಳ್ಳುವ ನಿಯಮವನ್ನು ನಗರಸಭಾ ಪೌರಾಯುಕ್ತ ಮಡಿಕೇರಿಯಲ್ಲಿ ಮಾತ್ರ ಅನ್ವಯಿಸಿ ಜಾರಿ ಮಾಡಿರುವುದು ಖಂಡನೀಯ ಎಂದರು.
ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್, ಸಹ ಸಂಯೋಜಕರುಗಳಾದ ಚೇತನ್, ಯೋಗೇಶ್, ಬೋಜೇಗೌಡ, ಪ್ರಾಂತ ಸಮಿತಿಯ ಸುಭಾಶ್ ತಿಮ್ಮಯ್ಯ, ಪ್ರಮುಖರಾದ ಕುಮಾರ್, ಸುನಿಲ್, ತಿಮ್ಮಯ್ಯ, ದುರ್ಗೇಶ್, ಪುದಿಯೊಕ್ಕಡ ರಮೇಶ್, ನವೀನ್ ಪೂಜಾರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಉಪಾಧ್ಯಕ್ಷ ಅರುಣ್ ಶೆಟ್ಟಿ, ಮನು ಮಂಜುನಾಥ್, ಖಜಾಂಚಿ ಕನ್ನಂಡ ಸಂಪತ್, ವಕ್ತಾರ ಬಿ.ಕೆ. ಅರುಣ್ ಕುಮಾರ್, ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಕವನ್ ಕಾವೇರಪ್ಪ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ನಗರಸಭಾ ಸದಸ್ಯರುಗಳಾದ ಕೆ.ಎಸ್.ರಮೇಶ್, ಎಸ್.ಸಿ. ಸತೀಶ್, ಕಾಳಚಂಡ ಅಪ್ಪಣ್ಣ, ಶ್ವೇತಾ ಪ್ರಶಾಂತ್, ಸಬಿತಾ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ ಸೇರಿದಂತೆ ವಿವಿಧ ಗಣೇಶೋತ್ಸವ ಸಮಿತಿಗಳ ಪ್ರಮುಖರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಹಾಜರಿದ್ದರು.