ಮಹಾತ್ಮ ಗಾಂಧೀಜಿಯನ್ನು ಕೊಂದವರು ನನ್ನನ್ನು ಬಿಡ್ತಾರಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಸತ್ಯ ಹೇಳಿದರೆ ಕೋಪ ಯಾಕೆ. ಸತ್ಯ ಹೇಳುವುದೇ ತಪ್ಪಾಗಿದೆ ಎಂದರು.
ನಾನು ಕೊಡಗಿಗೆ ಭೇಟಿ ನೀಡಿದ್ದು ಮಳೆ ಹಾನಿ ಪೀಡಿತ ಪ್ರದೇಶ ವೀಕ್ಷಿಸಲು. ನಾನು ಏನು ತಪ್ಪು ಮಾತನಾಡಿದೆ ಅಂತ ಪ್ರತಿಭಟನೆ ಮಾಡುತ್ತಿದ್ದಾರೆ. ಸಾವರ್ಕರ್ ಕ್ಷಮಾಪಣೆ ಬರೆದುಕೊಟ್ಟು ಜೈಲಿನಿಂದ ಬಿಡುಗಡೆ ಆಗಿದ್ದಾರೆ ಎಂದು ಹೇಳಿದ್ದೆ ಅದು ತಪ್ಪಾ? ಶಿವಮೊಗ್ಗದಲ್ಲಿ ಸೆನ್ಸೆಟಿವ್ ಸ್ಥಳದಲ್ಲಿ ಸಾವರ್ಕರ್ ಫೋಟೊ ಹಾಕಬೇಡಿ ಎಂದು ಹೇಳಿದ್ದೆ. ಅದು ತಪ್ಪಾ ಎಂದು ಪ್ರಶ್ನಿಸಿದರು.

ಬಿಜೆಪಿಯವರು ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ಕಾರಣಕ್ಕೆ. ನಾವು ರಾಜಕೀಯ ಮಾಡುತ್ತೇವೆ. ರಾಜಕೀಯಕ್ಕೆ ರಾಜಕೀಯವಾಗಿಯೇ ಉತ್ತರ ಕೊಡುತ್ತೇವೆ. ನಾವು ಬಿಜೆಪಿ- ಆರ್ ಎಸ್ ಎಸ್ ಗೆ ಹೆದರುವ ಪ್ರಶ್ನೆಯೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ಸರಕಾರ ಎಲ್ಲದಕ್ಕೂ ನೀಚ ಮಟ್ಟಕ್ಕೆ ಇಳಿದಿದೆ. ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಅವರು ಹೇಳಿದರು.