ಈ ವರ್ಷದ ಜಿ 20 ಶೃಂಗಸಭೆಯು ಹವಾಮಾನ ಬಿಕ್ಕಟ್ಟು, ಸೂಕ್ಷ್ಮತೆ ಮತ್ತು ಸಂಘರ್ಷದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡಬಲ್ಲದು ಎಂಬುದನ್ನು ಸಾಬೀತುಪಡಿಸಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಟ್ವೀಟ್ ಮಾಡಿರುವ ಅವರು, ಜಾಗತಿಕ ಆರ್ಥಿಕತೆಯು ಹವಾಮಾನ ಬಿಕ್ಕಟ್ಟು, ಸೂಕ್ಷ್ಮತೆ ಮತ್ತು ಸಂಘರ್ಷದ ಅತಿಕ್ರಮಿಸುವ ಆಘಾತಗಳಿಂದ ಬಳಲುತ್ತಿರುವ ಕ್ಷಣದಲ್ಲಿ, ಈ ವರ್ಷದ ಜಿ20 ಶೃಂಗಸಭೆಯು ಇನ್ನೂ ನಮ್ಮ ಅತೀ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತದೆ ಎಂದು ಸಾಬೀತುಪಡಿಸಿದೆ ಎಂದು ಹೇಳಿದ್ದಾರೆ.
ಈ ವರ್ಷದ ಶೃಂಗಸಭೆಯಲ್ಲಿ ದೆಹಲಿ ಘೋಷಣೆಯನ್ನು ಅಂಗೀಕರಿಸಲಾಯಿತು. ಪ್ರಾದೇಶಿಕ ಸಮಗ್ರತೆ, ಅಂತಾರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ಬಹುಪಕ್ಷೀಯ ವ್ಯವಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯಲು ರಾಷ್ಟ್ರಗಳಿಗೆ ಕರೆ ನೀಡಲಾಯಿತು,
ಈ ಘೋಷಣೆಯು ಸುಸ್ಥಿರ ಭವಿಷ್ಯಕ್ಕಾಗಿ ಹಸಿರು ಅಭಿವೃದ್ಧಿ ಒಪ್ಪಂದವನ್ನು ಕಲ್ಪಿಸುತ್ತದೆ, ಇದು ಸುಸ್ಥಿರ ಅಭಿವೃದ್ಧಿಗಾಗಿ ಜೀವನಶೈಲಿಯ ಮೇಲಿನ ಉನ್ನತ ಮಟ್ಟದ ತತ್ವಗಳು, ಹೈಡ್ರೋಜನ್ನ ಸ್ವಯಂಪ್ರೇರಿತ ತತ್ವಗಳು, ಸುಸ್ಥಿರ ಸ್ಥಿತಿಸ್ಥಾಪಕ ನೀಲಿ ಆರ್ಥಿಕತೆಗಾಗಿ ಚೆನ್ನೈ ತತ್ವಗಳು ಮತ್ತು ಆಹಾರ ಭದ್ರತೆ ಮತ್ತು ಪೋಷಣೆಯ ಮೇಲಿನ ತತ್ವಗಳನ್ನು ಅನುಮೋದಿಸುತ್ತದೆ.
ಚೀನಾ ಮತ್ತು ರಷ್ಯಾ ಒಪ್ಪಂದದ ಜೊತೆಗೆ 100 ಪ್ರತಿಶತ ಒಮ್ಮತದೊಂದಿಗೆ ಘೋಷಣೆಯ ಎಲ್ಲಾ 83 ಪ್ಯಾರಾಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.
ವಿಯೆಟ್ನಾಂ ಪ್ರವಾಸ
ಭಾರತದಲ್ಲಿ ನಡೆದ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾನುವಾರ (ಸೆಪ್ಟೆಂಬರ್ 10) ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾರೆ.
ಭಾನುವಾರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಬೈಡನ್ ಹಾಗೂ ಇತರೆ ಜಿ 20 ನಾಯಕರು ರಾಜ್ಘಾಟ್ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರಿಗೆ ಗೌರವ ನಮನ ಸಲ್ಲಿಸಿದರು.
ಶುಕ್ರವಾರದಂದು ಬೈಡನ್ ರಾಷ್ಟ್ರ ರಾಜಧಾನಿಗೆ ಬಂದಿಳಿದರು. ಅಮೆರಿಕ ಅಧ್ಯಕ್ಷರಾದ ಬಳಿಕ ಜೋ ಬೈಡನ್ ಭಾರತಕ್ಕೆ ನೀಡಿದ ಮೊದಲ ಭೇಟಿ ಇದಾಗಿತ್ತು. ಬಳಿಕ ಪ್ರಧಾನಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಶನಿವಾರ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಿದ್ದ ಬೈಡನ್, ರಾತ್ರಿ ರಾಷ್ಟ್ರಪತಿ ದೌಪರ್ದಿ ಮುರ್ಮು ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದರು.