
ಕಂಬಳ ಎಂಬುದು ಒಂದು ಗ್ರಾಮೀಣ ಕ್ರೀಡೆಯಲ್ಲ; ಕಂಬಳ ಎಂಬುದು ತುಳುನಾಡಿನ ಅಸ್ಮಿತೆ. ಜಾನಪದ ಕ್ರೀಡೆ ಎನಿಸಿದ ಕಂಬಳವು ರಾಜ್ಯದ ಯಾವುದೇ ಭಾಗದಲ್ಲಿ ನಡೆದರೂ ಅದಕ್ಕೆ ಧನಸಹಾಯವನ್ನು ಸರಕಾರ ನೀಡಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಆಗ್ರಹಿಸಿದ್ದಾರೆ.

ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಕರಾವಳಿಯಲ್ಲಿ ಎಲ್ಲೇ ಕಂಬಳ ನಡೆದರೂ 5 ಲಕ್ಷ ಸಹಾಯಧನ ಕೊಡುವ ಪುಣ್ಯದ ಕೆಲಸ ಮಾಡಿದ್ದರು. ಕರಾವಳಿ ಬಗ್ಗೆ ಅವರಿಗೆ ವಿಶೇಷ ಮಮತೆ ಇತ್ತು ಎಂದು ತಿಳಿಸಿದರು. ಇವತ್ತಿನ ರಾಜಕೀಯ ವ್ಯವಸ್ಥೆಯಡಿ ಕಂಬಳಕ್ಕೆ ಕೂಡ ರಾಜಕೀಯವನ್ನು ಥಳಕು ಹಾಕುತ್ತಿರುವುದು ದುರ್ದೈವ ಎಂದು ಹೇಳಿದರು.

ಕಾಪುವಿನಲ್ಲೂ ಮಾಜಿ ಪ್ರಧಾನಿ, ದೇಶ ಕಂಡ ಹೆಮ್ಮೆಯ ನಾಯಕ, ಅಪ್ಪಟ ದೇಶಪ್ರೇಮಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಸ್ಮರಣಾರ್ಥ ಕಾರ್ಯಕ್ರಮ ಆಯೋಜಿಸಲಾಗಿದೆ. ಅಲ್ಲಿಗೆ ತೆರಳುವ ಕುರಿತು ತಿಳಿಸಿದ ಅವರು, ಕಂಬಳಕ್ಕೆ ಪ್ರೀತಿಯಿಂದ ಕರೆದು ಪ್ರಕಾಶ್ ಶೆಟ್ಟಿ, ಬ್ರಿಜೇಶ್ ಚೌಟ ಅವರು, ಶಾಸಕ ಮಿತ್ರರು ನನಗೂ ನಾಲ್ಕು ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಕಂಬಳದ ಪ್ರಾಯೋಜಕರಿಗೆ ಧನ್ಯವಾದಗಳು ಮತ್ತು ಅಭಿನಂದನೆ ತಿಳಿಸುವುದಾಗಿ ಹೇಳಿದರು.

ಕರಾವಳಿ ಭಾಗದ ಎಲ್ಲ ತಂದೆ, ತಾಯಂದಿರು, ಯುವ ಮಿತ್ರರಿಗೆ ಶುಭಾಶಯ ಕೋರಿದರು. ಕಂಬಳವನ್ನು ತಾವೆಲ್ಲರೂ ಸಂತೋಷದಿಂದ ನೋಡಿ ಆನಂದಿಸಿ ಎಂದು ತಿಳಿಸಿದರು. ಸಾಧಕರನ್ನು ಕರೆಸಿ ಅವರಿಗೆ ಸನ್ಮಾನ ಮಾಡಿದ ಕುರಿತು ಸಂತಸ ವ್ಯಕ್ತಪಡಿಸಿದರು. ಜನ್ಮ ನೀಡಿದ ತುಳುನಾಡಿಗೆ ವಾಪಸ್ ಅವರು ಕೊಡುಗೆ ನೀಡಬೇಕೆಂಬ ಸದುದ್ದೇಶ ಇದರ ಹಿಂದಿದೆ ಎಂದು ಅಭಿಪ್ರಾಯಪಟ್ಟರು.




