‘ಸಂಕಷ್ಟಕರ ಗಣಪತಿ’ ‘ಫ್ಯಾಮಿಲಿ ಪ್ಯಾಕ್’ ‘ಅಬ್ಬಬ್ಬ!’ ಖ್ಯಾತಿಯ ಲಿಖಿತ್ ಶೆಟ್ಟಿ (Likith Shetty) ಅಭಿನಯದ ‘ಫುಲ್ ಮೀಲ್ಸ್’ ಚಿತ್ರ ನವೆಂಬರ್ 21 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ನಾಯಕ ನಟ ಲಿಖಿತ್ ಶೆಟ್ಟಿ ಹುಟ್ಟು ಹಬ್ಬದ ಅಂಗವಾಗಿ ಚಿತ್ರತಂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.

ಒಂದು ಸಮಯದಲ್ಲಿ ಉದಯ ಮ್ಯೂಸಿಕ್ ನಲ್ಲಿ ಜನಪ್ರಿಯ ನಿರೂಪಕರಾಗಿದ್ದ ಲಿಖಿತ್ ಶೆಟ್ಟಿ ಈ ಹಿಂದೆ ಸಂಕಷ್ಟಕರ ಗಣಪತಿ, ಪುನೀತ್ ರಾಜ್ ಕುಮಾರ್ ಅವರ ಪಿ. ಆರ್. ಕೆ ಪ್ರೊಡಕ್ಷನ್ ನಲ್ಲಿ ಮೂಡಿಬಂದ ‘ಫ್ಯಾಮಿಲಿ ಪ್ಯಾಕ್’ ಚಿತ್ರಗಳ ಮೂಲಕ ನಾಯಕ ನಟರಾಗಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಕಳೆದ ವರ್ಷ ತೆರೆಕಂಡ ಕೆ. ಎಮ್. ಚೈತನ್ಯ ನಿರ್ದೇಶನದ ಅಬ್ಬಬ್ಬ ಚಿತ್ರದಲ್ಲಿ ಕೂಡ ನಾಯಕನಾಗಿ ಗಮನ ಸೆಳೆದಿದ್ದರು. ‘ಫುಲ್ ಮೀಲ್ಸ್’ ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕನಾಗಿ ತೊಡಗಿಸಿಕೊಂಡಿರುವ ಲಿಖಿತ್ ಶೆಟ್ಟಿ ತಮ್ಮ ಹಿಂದಿನ ಸಿನೆಮಾಗಳಿಗಿಂತ ಹೆಚ್ಚಿನ ಯಶಸ್ಸನ್ನು ಕಾಣುವ ನಿರೀಕ್ಷೆಯಲ್ಲಿದ್ದಾರೆ.
ಸಿನೆಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಂಪೂರ್ಣವಾಗಿ ಮುಗಿದಿದ್ದು, ಸಿನೆಮಾ ಚೆನ್ನಾಗಿ ಮೂಡಿ ಬಂದಿದೆ ಎಂಬ ಖುಷಿಯಲ್ಲಿ ಚಿತ್ರತಂಡವಿದೆ, ಚಿತ್ರದ ಪ್ರಚಾರ ಕಾರ್ಯದ ಮೊದಲ ಹಂತವಾಗಿ, ನಾಯಕ ಲಿಖಿತ್ ಶೆಟ್ಟಿ ಹುಟ್ಟು ಹಬ್ಬದ ದಿನ ಪೋಸ್ಟರ್ ಜೊತೆ, ಸಿನೆಮಾ ಬಿಡುಗಡೆ ದಿನಾಂಕವನ್ನು ಹಂಚಿಕೊಂಡಿದ್ದಾರೆ. ಮುಂದಿನ ಹಂತಗಳಲ್ಲಿ ಚಿತ್ರದ ಹಾಡು ಮತ್ತು ಟ್ರೈಲರ್ ಬಿಡುಗಡೆಯೊಂದಿಗೆ ಮತ್ತಷ್ಟು ಪ್ರಚಾರ ಮಾಡುತ್ತಾ ನವೆಂಬರ್ ಇಪ್ಪತ್ತೊಂದಕ್ಕೆ ‘ಫುಲ್ ಮೀಲ್ಸ್’ ಸವಿಯಲು ಜನರನ್ನು ಚಿತ್ರಮಂದಿರದತ್ತ ಬರುವಂತೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ.

ಫುಲ್ಸ್ ಮೀಲ್ಸ್ ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ರೊಮ್ಯಾಂಟಿಕ್ ಕಾಮಿಡಿ ಸಿನೆಮಾ. ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ. ಲಿಖಿತ್ ಶೆಟ್ಟಿಗೆ ನಾಯಕಿಯರಾಗಿ ‘ದಿಯಾ’ ಖ್ಯಾತಿಯ ಖುಷಿ ರವಿ ಮತ್ತು ತೇಜಸ್ವಿನಿ ಶರ್ಮ ಅಭಿನಯಿಸಿದ್ದಾರೆ. ಚಿತ್ರದುರ್ಗದ ಪ್ರತಿಭೆ ಎನ್. ವಿನಾಯಕ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಗುರು ಕಿರಣ್ ಸಂಗೀತ ನಿರ್ದೇಶನ, ದೀಪು ಎಸ್ ಕುಮಾರ್ ಸಂಕಲನ, , ಮನೋಹರ್ ಜೋಷಿ ಛಾಯಾಗ್ರಹಣ, ಹರೀಶ್ ಗೌಡ ಸಂಭಾಷಣೆ, ವಿಶ್ವಾಸ್ ಕಶ್ಯಪ್ ಕಲಾ ನಿರ್ದೇಶನ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ಕವಿರಾಜ್ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ಚಿತ್ರಕ್ಕಿದೆ.

ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ಸೂರಜ್ ಲೋಕ್ರೆ, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ಗಣೇಶ್ ರಾವ್, ಕೋಟೆ ಪ್ರಭಾಕರ್, ಚೇತನ್ ದುರ್ಗಾ, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಇದೆ.