ಇತ್ತೀಚೆಗೆ ವೈರಲ್ ಆಗಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಾಪಕ ಚರ್ಚೆ ಗರಿಗೆದರಿದೆ. ಒಂದು ಕಡೆ ಈಗಾಗಲೇ ಸರ್ಕಾರ ಈ ಪ್ರಕರಣವನ್ನು ಎಸ್.ಐ.ಟಿ ತನಿಖೆಗೆ ವಹಿಸಿದ್ದು, ಮತ್ತೊಂದು ಕಡೆ ಪ್ರಜ್ವಲ್ ರೇವಣ್ಣ ತಲೆ ದಂಡ ಆಗ್ಬೇಕು ಎಂಬ ಆಗ್ರಹವೂ ಜೋರಾಗಿದೆ.
ಇದೀಗ ಅವರದ್ದೇ ಪಕ್ಷದ ಶಾಸಕರೊಬ್ಬರು ಜೆಡಿಎಸ್ ವರಿಷ್ಠ ದೇವೇಗೌಡರಿಗೆ ಪತ್ರ ಬರೆದಿದ್ದಾರೆ. ಆ ಮೂಲಕ ಪ್ರಜ್ವಲ್ ರೇವಣ್ಣರನ್ನ ಪಕ್ಷದಿಂದ ವಜಾ ಮಾಡುವಂತೆ ಮನವಿ ಮಾಡಿದ್ದಾರೆ.
ಜೆಡಿಎಸ್ ಪಕ್ಷದ ಶಾಸಕ ಶರಣ ಗೌಡ ಕಂದಕೂರ ಇಂಥದ್ದೊಂದು ಆಗ್ರಹ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಪ್ರಕರಣದಿಂದ ಜೆಡಿಎಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿದ್ದು, ಕೂಡಲೇ ಈ ಬಗ್ಗೆ ಕ್ರಮ ಕೈಗೊಂಡು, ಪ್ರಜ್ವಲ್ ರೇವಣ್ಣರನ್ನ ಪಕ್ಷದಿಂದ ವಜಾಗೊಳಿಸಬೇಕೆಂದು ಪತ್ರ ಬರೆಯುವ ಮುಖೇನ ಆಗ್ರಹಿಸಿದ್ದಾರೆ.
ಒಂದ್ಕಡೆ ಬಿಜೆಪಿ ಈ ಪ್ರಕರಣದಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿದ್ದು, ಮತ್ತೊಂದು ಕಡೆ ಕಾಂಗ್ರೆಸ್ ಪಕ್ಷ ಇದನ್ನು ಅಸ್ತ್ರವನ್ನಾಗಿ ಬಳಸಿಕೊಳ್ತಿದೆ. ಈ ಎಲ್ಲದರ ಮಧ್ಯೆ ಖುದ್ದು ಜೆಡಿಎಸ್ ಪಕ್ಷದ ಶಾಸಕರೇ ಇಂಥ ಆಗ್ರಹ ಮಾಡಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.