‘ಕೃಷ್ಣಮಣಿ’
ಕರ್ನಾಟಕದಿಂದ ಆಯ್ಕೆಯಾಗಿ ದೆಹಲಿಗೆ ಹೋಗುವ ಬಿಜೆಪಿ ಸಂಸದರು ಪ್ರಧಾನಿ ನರೇಂದ್ರ ಮೋದಿ ಎದುರು ಮಾತನಾಡಲು ಹೆದರುತ್ತಾರೆ ಎನ್ನುವುದು ಸಿಎಂ ಸಿದ್ದರಾಮಯ್ಯ ಆರೋಪ. ಇದು ಸತ್ಯವೂ ಇರಬಹುದು ಅಥವಾ ರಾಜಕೀಯಕ್ಕಾಗಿ ಸಿಎಂ ಸಿದ್ದರಾಮಯ್ಯ ಆರೋಪ ಮಾಡುತ್ತಿರುವುದೂ ಇರಬಹುದು. ಆದರೆ ಕರ್ನಾಟಕವನ್ನು ಬಿಜೆಪಿ ಹೈಕಮಾಂಡ್ ಅಷ್ಟೊಂದು ಪ್ರೀತಿಯಿಂದ ನೋಡುತ್ತಿಲ್ಲ ಎನ್ನುವುದು ಮಾತ್ರ ಸತ್ಯ. ಕೇವಲ ಚುನಾವಣಾ ರಾಜಕಾರಣಕ್ಕಾಗಿ ಬರ್ತಾರೆ, ಜನರೂ ಮತ ನೀಡ್ತಾರೆ. ಆ ಬಳಿಕ ಕರ್ನಾಟಕ ಕಂಡರೆ ಕೇಸರಿ ನಾಯಕರಿಗೆ ಅಷ್ಟಕ್ಕಷ್ಟೆ ಎನ್ನಬಹುದು. ಹೀಗೆ ನಾವು ಮಾಡುತ್ತಿರುವ ಆರೋಪಕ್ಕೆ ಕಾರಣ ಬರ ಪರಿಹಾರ ನೀಡಿಲ್ಲ ಎನ್ನುವುದು ಮಾತ್ರ ಅಲ್ಲ.

ಹೌದು, ಕರ್ನಾಟಕ ಸರ್ಕಾರ ಬರ ಪರಿಹಾರಕ್ಕಾಗಿ ದೆಹಲಿಗೂ ಬೆಂಗಳೂರಿಗೂ ಅಲೆದು ಅಲೆದು ಸುಸ್ತಾಗಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದಾರೆ. ಕರ್ನಾಟಕದ ಜನರ ಪರವಾಗಿ ನರೇಂದ್ರ ಮೋದಿ ಅಥವಾ ಅಮಿತ್ ಷಾ ಅವರಿಗೆ ಕಾಳಜಿ ಇದ್ದಿದ್ದರೆ ಕೂಡಲೇ ಬರ ಪರಿಹಾರದ ಹಣವನ್ನೂ ಬಿಡುಗಡೆ ಮಾಡಬೇಕಿತ್ತು ಎನ್ನುವುದು ಸತ್ಯವೇ ಸರಿ. ಆದರೂ ಇಂದಲ್ಲ ನಾಳೆ ಬರ ಪರಿಹಾರದ ಹಣ ಬಿಡುಗಡೆ ಆಗಲಿದೆ. ಅಂತಿಮವಾಗಿ ಸುಪ್ರೀಂಕೋರ್ಟ್ ಸೂಚನೆಯಂತೆ ಆದರೂ ಬರಪರಿಹಾರದ ಹಣವನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡಲೇ ಬೇಕು. ಯಾಕಂದ್ರೆ NDRF ಹಾಗು SDRF ಕಾಯ್ದೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ. ಯಾವುದೇ ರಾಜ್ಯದಲ್ಲಿ ಬರ ಬಂದಾಗ ಅರ್ಧದಷ್ಟು ಪಾಲನ್ನು ಕೇಂದ್ರ ಸರ್ಕಾರ ತುಂಬಿಕೊಡಬೇಕು.

ಲೋಕಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷ ಜನರ ಬಳಿ ಮತ ಕೇಳುವಾಗ ತಮ್ಮ ಪಕ್ಷದ ಉದ್ದೇಶ ಏನು..? ಯಾವ ಯೋಜನೆಯನ್ನು ಜಾರಿ ಮಾಡುತ್ತೇವೆ..? ಯಾವ ಉದ್ದೇಶ ನಮ್ಮ ಮುಂದಿದೆ. ಜನರ ಆಶೋತ್ತರಗಳು ಏನು..? ಜನರಿಗೆ ಏನು ಅನಿವಾರ್ಯವಾಗಿದೆ. ಬದುಕಿನ ಕಷ್ಟಗಳು ಯಾವ ರೀತಿಯಲ್ಲಿವೆ ಎನ್ನುವುದನ್ನು ಮನಗಂಡು ಪ್ರಣಾಳಿಕೆ ಸಿದ್ಧಪಡಿಸಲಾಗುತ್ತದೆ. ಆ ಪ್ರಣಾಳಿಕೆ ಸಿದ್ಧ ಮಾಡಲು ಪಕ್ಷದಲ್ಲೇ ಕೆಲವಾರು ನಾಯಕರನ್ನು ಸೇರಿಸಿಕೊಂಡು ಒಂದು ಸಮಿತಿ ಮಾಡಲಾಗುತ್ತದೆ. ಆ ಸಮಿತಿಯಲ್ಲಿ ಪ್ರಾದೇಶಿಕ ಸಮಾನತೆ ಕಾಯ್ದುಕೊಳ್ಳುವುದು ಮುಖ್ಯ. ಯಾಕಂದ್ರೆ ಕರ್ನಾಟಕದ ಸಮಸ್ಯೆ ತಮಿಳುನಾಡಿನ ಸಮಸ್ಯೆ ಹಾಗು ಜನರ ಭಾವನೆ ಒಂದೇ ರೀತಿ ಇರಲು ಸಾಧ್ಯವಿಲ್ಲ. ಆದರೆ ಕರ್ನಾಟಕದ ವಿಚಾರದಲ್ಲಿ ಬಿಜೆಪಿ ನಾಯಕತ್ವ ನಿರ್ಲಕ್ಷ್ಯತನ ಮೆರೆದಿದೆ.

ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಎನ್ನುವ ಒಂದೇ ಒಂದು ಕಾರಣಕ್ಕೆ ರಾಜೀವ್ ಚಂದ್ರಶೇಖರ್ ಅವರನ್ನು ಕರ್ನಾಟಕದಿಂದ ಪ್ರಣಾಳಿಕ ಸಮಿತಿಗೆ ಆಯ್ಕೆ ಮಾಡಿಕೊಂಡಿದ್ದಾರೆ. ಕೇವಲ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ ಎನ್ನುವುದಾಗಿದ್ದರೆ, ಇರಲಿ ಎನ್ನಬಹುದಿತ್ತು. ಆದರೆ ರಾಜೀವ್ ಚಂದ್ರಶೇಖರ್ ಈ ಬಾರಿ ಕೇರಳದ ತಿರುವನಂತಪುರ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಸ್ಪರ್ಧೆಗೆ ಇಳಿದಿದ್ದಾರೆ. ಅಂದರೆ ರಾಜೀವ್ ಚಂದ್ರಶೇಖರ್ ಅವರ ಆಸಕ್ತಿ ಸಹಜವಾಗಿಯೇ ಕೇರಳದ ಕಡೆಗೆ ಇರುತ್ತದೆ. ಆದರೆ ಕರ್ನಾಟಕದಿಂದ ಪ್ರಣಾಳಿಕಾ ಸಮಿತಿಗೆ ನೇಮಕ ಮಾಡಿರುವುದು ನಾಚಿಕೆಗೇಡು. ಒಂದು ಇಲ್ಲಿ ಪ್ರಣಾಳಿಕಾ ಸಮಿತಿಗೆ ಹೋಗುವಂತಹ ನಾಯಕರು ಇಲ್ಲ, ಅಥವಾ ಪ್ರಣಾಳಿಕಾ ಸಮಿತಿಗೆ ನೇಮಕ ಮಾಡಿದ್ದನ್ನು ಪ್ರಶ್ನಿಸುವ ತಾಕತ್ತು ಬಿಜೆಪಿ ನಾಯಕರಿಗೆ ಇಲ್ಲ. ಬಿಜೆಪಿ ಹೈಕಮಾಂಡ್ ನಿರ್ಲಕ್ಷ್ಯಕ್ಕೆ ಕೊನೆಯೇ ಇಲ್ಲ ಎನ್ನುವಂತಾಗಿದೆ..