ನವದೆಹಲಿ:ಏ.೦೮: ಭಾರತದ ಮೊದಲ ಗವರ್ನರ್ ಜನರಲ್ ಸಿ.ರಾಜಗೋಪಾಲಾಚಾರಿ ಅವರ ಮೊಮ್ಮಗ, ಕಾಂಗ್ರೆಸ್ನ ಮಾಜಿ ಮುಖಂಡ ಸಿಆರ್ ಕೇಶವನ್ ಇಂದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ನವದೆಹಲಿಯಲ್ಲಿ ಬಿಜೆಪಿ ಮುಖ್ಯ ಕಚೇರಿಯಲ್ಲಿ ಕೇಂದ್ರ ಸಚಿವ ಜನರಲ್ ವಿಕೆ ಸಿಂಗ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರಿದರು.
3 ದಿನದಲ್ಲಿ ಬಿಜೆಪಿ ಸೇರಿದ 3ನೇ ಮಾಜಿ ಕಾಂಗ್ರೆಸ್ಸಿಗ:

ಕೇಶವನ್ ಸೇರ್ಪಡೆಯೊಂದಿಗೆ ಕಳೆದ ಮೂರು ದಿನಗಳಲ್ಲಿ ಮಾಜಿ ಕಾಂಗ್ರೆಸ್ ಮುಖಂಡರು ಆಡಳಿತಾರೂಡ ಬಿಜೆಪಿಗೆ ತೆಕ್ಕೆ ಜಾರಿದಂತಾಗಿದೆ. ಗುರುವಾರ ಕೇಂದ್ರದ ಮಾಜಿ ಸಚಿವ ಎಕೆ ಆ್ಯಂಟನಿ ಅವರ ಪುತ್ರ ಅನಿಲ್ ಆ್ಯಂಟನಿ ಕಮಲ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಶುಕ್ರವಾರ ಆಂಧ್ರ ಪ್ರದೇಶದ ಮಾಜಿ ಸಿಎಂ ಕಿರಣ್ಕುಮಾರ್ ರೆಡ್ಡಿ ಕೇಸರಿ ಪಾಳಯ ಸೇರಿದ್ದರು. ಇಂದು ಬಿಜೆಪಿ ಸೇರಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಶವನ್, “ಪ್ರಧಾನಿ ತಮಿಳುನಾಡಿಗೆ ಭೇಟಿ ನೀಡುವ ದಿನದಂದು ನನ್ನನ್ನು ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷಕ್ಕೆ ಸೇರಿಸಿಕೊಂಡಿರುವುದಕ್ಕಾಗಿ ಬಿಜೆಪಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ತಿಳಿಸಿದರು.

“ಪ್ರಧಾನಿ ಮೋದಿಯವರ ಜನಕೇಂದ್ರಿತ ನೀತಿಗಳು, ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಸುಧಾರಣೆಯು ಅಂತರ್ಗತ ಅಭಿವೃದ್ಧಿ ಕಾರ್ಯಸೂಚಿಯಾಗಿದೆ. ಭಾರತವನ್ನು ದುರ್ಬಲ ಆರ್ಥಿಕತೆಯಿಂದ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಗೆ ಪರಿವರ್ತಿಸುತ್ತಿದೆ” ಎಂದು ಕೇಶವನ್ ತಿಳಿಸಿದರು. ಮುಂದುವರೆದು, ”ಪ್ರಧಾನಿ ಮೋದಿಯವರ ಪರಿವರ್ತನಾಶೀಲ ನಾಯಕತ್ವ ದೇಶದ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡಿದೆ. ಈಗ ನೀವು ಎಲ್ಲೆಡೆ ಪ್ರಗತಿಯನ್ನು ಕಾಣುತ್ತೀರಿ. ನಮಗೆ ಮೋದಿಯವರ ನಾಯಕತ್ವದಲ್ಲಿ ನಂಬಿಕೆ ಇದೆ. ಅವರು ನಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಾರೆ” ಎಂದೂ ಅಭಿಪ್ರಾಯಪಟ್ಟರು.