ಯಾವುದೇ ಅರಣ್ಯ ಪರಿಸರದ ಅರೋಗ್ಯಸೂಚಕ ಜೀವಿಗಳು ಎಂದು ಗುರುತಿಸಿರುವ ಪ್ರಾಣಿಗಳಲ್ಲಿ ಕಪ್ಪೆ ಕೂಡ ಒಂದು. ಅದರಲ್ಲೂ ಮಲೆನಾಡಿನ ಮಳೆಕಾಡುಗಳ ಸಮೃದ್ಧಿಗೆ ಅಲ್ಲಿನ ಕಪ್ಪೆ ಪ್ರಭೇಧಗಳ ವೈವಿಧ್ಯತೆಯೇ ಸಜೀವ ಉದಾಹರಣೆ ಎನ್ನಲಾಗುತ್ತಿದೆ.
ಆದರೆ ಜಗತ್ತಿನ ಜೀವವೈವಿಧ್ಯದ ತೊಟ್ಡಿಲು ಎಂದೇ ಪರಿಗಣಿಸಲಾಗುವ ಪಶ್ಚಿಮಘಟ್ಟದ ಮಲೆನಾಡು ಸೇರಿದಂತೆ ಎಲ್ಲೆಡೆ ಜೀವಪರಿಸರದ ಸಮೃದ್ಧಿಯ ಸೂಚಕ ಕಪ್ಪೆಗಳೂ ಸೇರಿದಂತೆ ವನ್ಯಜೀವಿಗಳ ಸಂತತಿ ಅವಸಾನದ ಹಾದಿಯಲ್ಲಿವೆ. ಕರಗುತ್ತಿರುವ ಕಾಡು, ಹವಾಮಾನ ವೈಪರೀತ್ಯ, ಅಕಾಲಿಕ ಋತುಮಾನಗಳ ಕಾರಣಕ್ಕೆ ಇಡೀ ಪಶ್ಚಿಮಘಟ್ಟದ ಜೀವಪರಿಸರ ಅಪಾಯದಲ್ಲಿದೆ.
ಅಂತಹ ಅಪಾಯಕರ ಪರಿಸ್ಥಿತಿ ಮತ್ತು ಆತಂಕದ ಪರಿಸ್ಥಿತಿಯಿಂದ ಅವಸಾನದ ಅಂಚಿನಲ್ಲಿರುವ ಜೀವಿಗಳ ಸಂರಕ್ಷಣೆ ಮತ್ತು ಅಂತಹ ಅಪರೂಪದ ಜೀವಿಗಳ ಜೀವ ವೈವಿಧ್ಯದ ಮಹತ್ವದ ಕುರಿತು ಜನಜಾಗೃತಿಯ ಪ್ರಯತ್ನಗಳು ಇದೀಗ ಅಲ್ಲಲ್ಲಿ ಚುರುಕುಗೊಂಡಿವೆ ಅದು ದಾಂಡೇಲಿಯ ಹಾರ್ನ್ ಬಿಲ್ ಉತ್ಸವವಿರಬಹುದು, ಮಂಗಳೂರಿನ ಹಕ್ಕಿ ಹಬ್ಬವಿರಬಹುದು, ಕುದುರೆಮುಖದ ಶೊಲಾ ಕಾಡು ಉತ್ಸವವಿರಬಹುದು,.. ಎಲ್ಲವೂ ಜೀವ ಪರಿಸರದ ನಾಳೆಯ ಆತಂಕ ನಿವಾರಣೆಯ ನಿಟ್ಟಿನಲ್ಲಿ ಇರುವುದೊಂದೇ ಭೂಮಿ ಮತ್ತು ಅದನ್ನು ಜತನ ಮಾಡುವುದು ಮನುಷ್ಯನ ಭವಿಷ್ಯದ ದೃಷ್ಟಿಯಿಂದಲೂ ಅನಿವಾರ್ಯ ಎಂಬುದನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡುವ ಮಹತ್ತರ ಉದ್ದೇಶದ ಕಾರ್ಯಗಳೇ ಆಗಿವೆ.
ಇಂತಹ ಮಹತ್ತರ ಆಶಯದ ಮತ್ತೊಂದು ಪ್ರಯತ್ನವಾಗಿ ಇದೀಗ ಶಿವಮೊಗ್ಗ ಜಿಲ್ಲೆಯ ಶರಾವತಿ ಕಣಿವೆಯ ಮುಪ್ಪಾನೆ ನಿಸರ್ಗಧಾಮದಲ್ಲಿ ಕಪ್ಪೆ ಹಬ್ಬ ಆಯೋಜಿಸಲಾಗಿದೆ. ಕರ್ನಾಟಕ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಆಯೋಜಿಸಲಾಗಿರುವ ಈ ಹಬ್ಬದಲ್ಲಿ ಕಪ್ಪೆಗಳ ಜೀವಪರಿಸರ ಮಹತ್ವ, ಅವುಗಳ ಜೀವನಕ್ರಮ, ಚಟುವಟಿಕೆ, ಕೃಷಿಯಂತಹ ಮಾನವ ಚಟುವಟಿಕೆಗಳಿಗೆ ಉಭಯವಾಸಿಗಳ ಕೊಡುಗೆ ಏನು ಎಂಬ ವಿಷಯಗಳ ಕುರಿತ ವಿಚಾರ ಗೋಷ್ಠಿ, ಸಂವಾದ, ಅಲ್ಲದೆ, ಕಪ್ಪೆಗಳ ಕುರಿತ ಛಾಯಾಚಿತ್ರ ಪ್ರದರ್ಶನ, ಕಿರುಚಿತ್ರ ಪ್ರದರ್ಶನ, ಕಪ್ಪೆ ಪತ್ತೆ ಮಾಡುವ ಚಾರಣ ಮುಂತಾದ ವೈವಿಧ್ಯಮಯ ಚಟುವಟಿಕೆಗಳು ಇರುತ್ತವೆ.

ರಾಜ್ಯದಲ್ಲೇ ಮೊಟ್ಟಮೊದಲ ಕಪ್ಪೆ ಹಬ್ಬ ಇದಾಗಿದ್ದು, ಅಂತಾರಾಷ್ಟ್ರೀಯ ಮಟ್ಟದ ಕಪ್ಪೆ ಸಂಶೋಧಕ ವಿಜ್ಞಾನಿ ಡಾ ಕೆ ವಿ ಗುರುರಾಜ್, ಉಭಯವಾಸಿ ಸಂರಕ್ಷಣಾ ತಜ್ಞ ಓಂಕಾರ್ ಪೈ ಮತ್ತಿತರ ತಜ್ಞರು ಉಭಯವಾಸಿಗಳ ಕುರಿತು ವಿವಿಧ ಚಟುವಟಿಕೆಗಳನ್ನು ನಡೆಸಿಕೊಡಲಿದ್ದಾರೆ.
“ಕಪ್ಪೆಗಳು ಜೀವಪರಿಸರದ ಮಹತ್ವದ ಜೀವಸಂತತಿ. ಅದರಲ್ಲೂ ಶರಾವತಿ ಅಭಯಾರಣ್ಯ ಕಣಿವೆ ಜಗತ್ತಿನ ಅತಿ ಅಪರೂಪದ ಕಪ್ಪೆಗಳ ಅವಾಸಸ್ಥಾನ. ಆದರೆ ಇಲ್ಲಿನ ಪರಿಸರದಲ್ಲಿ ಹೆಚ್ಚುತ್ತಿರುವ ರಾಸಾಯನಿಕ ಬಳಕೆ, ಕಾಡಿನಲ್ಲಿ ಹೆಚ್ಚುತ್ತಿರುವ ಮಾನವ ಹಸ್ತಕ್ಷೇಪ, ಮಳೆ ಮತ್ತು ವಾತಾವರಣದ ವೈಪರೀತ್ಯಗಳ ಕಾರಣದಿಂದಾಗಿ ಉಭಯವಾಸಿಗಳ ಸಂತತಿ ಕೂಡ ಇತರೆಲ್ಲಾ ವನ್ಯಜೀವಿಗಳಂತೆ ಅಪಾಯದಲ್ಲಿವೆ. ಆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ವನ್ಯಜೀವಿ ವಲಯ ಶರಾವತಿ ಸಿಂಗಳೀಕ ಅಭಯಾರಣ್ಯದ ವಲಯದ ಮುಪ್ಪಾನೆಯಲ್ಲಿ ಕಪ್ಪೆ ಹಬ್ಬ ಆಯೋಜಿಸಿದೆ. ಆ ಮೂಲಕ ಜನಸಾಮಾನ್ಯರಲ್ಲಿ ಉಭಯವಾಸಿಗಳ ಬಗ್ಗೆ ಕುತೂಹಲ ಬೆಳೆಸುವುದು, ಅವುಗಳ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ” ಎಂದು ಶಿವಮೊಗ್ಗ ವನ್ಯಜೀವಿ ವಲಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಐ ಎಂ ನಾಗರಾಜ್ ಹಬ್ಬದ ಮಹತ್ವ ಮತ್ತು ಉದ್ದೇಶ ವಿವರಿಸಿದರು.

ಶರಾವತಿ ಮತ್ತು ಆಗುಂಬೆಯ ಮಳೆಕಾಡಿನ ಅಪರೂಪದ ಮಲಬಾರ್ ಟ್ರೀ ಟಾಡ್ ಕಪ್ಪೆಯನ್ನು ರಾಜ್ಯ ಕಪ್ಪೆ ಎಂದು ಘೋಷಿಸುವ ಬಗ್ಗೆ ಈಗಾಗಲೇ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಪ್ಪೆಗಳ ಮಹತ್ವದ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಕಪ್ಪೆ ಘೋಷಣೆ ಒಂದು ಹೆಜ್ಜೆಯಾದರೆ ಕಪ್ಪೆ ಹಬ್ಬ ಮತ್ತೊಂದು ಹೊಸ ಸಂಪ್ರದಾಯ ಹುಟ್ಟುಹಾಕುವ ಮಹತ್ವದ ಕ್ರಮ.
ಇಂತಹದ್ದೊಂದು ಮಹತ್ವದ ಕ್ರಮಕ್ಕೆ ರಾಜ್ಯ ಅರಣ್ಯ ಇಲಾಖೆಯ ಮುಖ್ಯಸ್ಥರಾದ ಪಿಸಿಸಿಎಫ್ ಸಂಜಯ್ ಮೋಹನ್ ಮತ್ತು ಇತರೆ ಅಧಿಕಾರಿಗಳ ಆಸಕ್ತಿ ಪ್ರಮುಖ ಪ್ರೇರಣೆ ಎಂಬುದು ಡಿಎಫ್ ಒ ಅವರ ಅಭಿಪ್ರಾಯ.
ಇದೇ ಡಿ.18, 19 ಎರಡು ದಿನಗಳ ಕಾಲ ಮುಪ್ಪಾನೆಯ ನೇಚರ್ ಕ್ಯಾಂಪಿನಲ್ಲಿ ಕಪ್ಪೆ ಹಬ್ಬ ನಡೆಯಲಿದ್ದು, ವಿವಿಧ ಪರಿಸರ, ಅರಣ್ಯ ಸಂಬಂಧಿ ಅಧ್ಯಯನಾಸಕ್ತರು, ಮಲೆನಾಡಿನ ಪರಿಸರಾಸಕ್ತರು ಮತ್ತು ಯುವ ಸಂಶೋಧಕರು, ಇಲಾಖೆಯ ಉನ್ನತಾಧಿಕಾರಿಗಳು ಭಾಗಿಯಾಗಲಿದ್ದಾರೆ.