ಬೇರೆ ರಾಜ್ಯ ಹಾಗೂ ವಿದೇಶಗಳಲ್ಲಿ ಹೊಸ ಕೋವಿಡ್ ತಳಿ ಹೆಚ್ಚಳ ಆಗ್ತಿರೋದ್ರಿಂದ ಆರೋಗ್ಯ ಸಚಿವ ಕೆ.ಸುಧಾಕರ್ ಇಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿದರು. ಬಳಿಕ ಮಾತನಾಡಿದ ಅವರು ಎಂಟು ದೇಶಗಳಲ್ಲಿ ಕೋವಿಡ್ ನಾಲ್ಕನೇ ಅಲೆ ಆರಂಭವಾಗಿದ್ದು ಕೋವಿಡ್ ಹೊಸ ಪ್ರಬೇಧ XE ಹಾಗೂ ME ಪತ್ತೆಯಾಗ್ತಿದೆ. ನಮ್ಮ ದೇಶದ ದೆಹಲಿ ಹಾಗೂ ಹರಿಯಾಣದಲ್ಲೂ ಹೆಚ್ಚಾಗುತ್ತಿದೆ. ಹೀಗಾಗಿ ತುರ್ತು ಸಭೆ ನಡೆಸಲಾಗಿದೆ ಎಂದರು. ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾವಹಿಸಲು, ಟೆಲಿಮಾನಿಟರಿಂಗ್ ವ್ಯವಸ್ಥೆ ಆರಂಭಿಸಲಾಗುವುದು. ಲಸಿಕೆ ಹಾಕದ ಮಕ್ಕಳಿಗೆ ಸುಮಾರು 5 ಸಾವಿರ ಜನಕ್ಕೆ ರಾಜ್ಯದಾದ್ಯಂತ ಕೋವಿಡ್ ಟೆಸ್ಟ್ ಮಾಡಿಸಲು ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ ಎಂದರು.
ಜೂನ್ ಜುಲೈನಲ್ಲಿ ನಾಲ್ಕನೇ ಅಲೆ : ಸಚಿವ ಸುಧಾಕರ್ !
ಈ ವರ್ಷ ಜೂನ್ ಜುಲೈ ತಿಂಗಳಲ್ಲಿ ಕೋವಿಡ್ ನಾಲ್ಕನೇ ಅಲೆ ಆರಂಭವಾಗಬಹುದೆಂದು ಐಐಟಿ ಕಾನ್ಪುರ ಈಗಾಗಲೇ ಅಭಿಪ್ರಾಯ ನೀಡಿದೆ. ಹೀಗಾಗಿ ಮಾಸ್ಕ್ ನಿಯಮ ಮತ್ತೆ ಕಟ್ಟುನಿಟ್ಟಾಗಿ ಪಾಲಿಸಬೇಕಾಗುವ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.
60 ವರ್ಷ ಮೇಲ್ಪಟ್ಟವರಿಂದ ಲಸಿಕೆ ನಿರ್ಲಕ್ಷ್ಯ ಬೇಡ !
60 ವರ್ಷ ಮೇಲ್ಪಟ್ಟವರು ಹೆಚ್ಚಿನವರು ಮೂರನೇ ಡೋಸ್ ಪಡೆದಿಲ್ಲ. 51% ಜನ ಬಾಕಿ ಇದ್ದಾರೆ. ಎರಡನೇ ಡೋಸ್ ಲಸಿಕೆಯನ್ನೂ 2% ಜನ ಹಾಕಿಕೊಂಡಿಲ್ಲ. 98% ಮಾತ್ರ ಎರಡನೇ ಡೋಸ್ ಆಗಿದೆ. ಮೊದಲನೇ ಡೋಸ್ 4,97,00,000 ಜನ ಪಡೆದಿದ್ದಾರೆ 2 ನೇ ಡೋಸ್ 4,77,00, 000 ಮಾತ್ರ ಆಗಿದೆ. 32 ಲಕ್ಷ ಡೋಸ್ ಎರಡನೇ ಲಸಿಕೆಯನ್ನೇ ಪಡೆದಿಲ್ಲ. ಯಾಕೆ ಈ ಉದಾಸೀನತೆ, ನಾಲ್ಕನೇ ಅಲೆ ಗಂಭೀರವಾದರೆ ಸರ್ಕಾರವನ್ನು ಹೊಣೆ ಮಾಡುತ್ತೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಮಕ್ಕಳಲ್ಲೂ 15 ರಿಂದ 17 ವರ್ಷದವರು, 79% ಮಾತ್ರ ಆಗಿದೆ. 20 ಲಕ್ಷ ಮಕ್ಕಳು ಮೊದಲ ಡೋಸ್ ಲಸಿಕೆಯೇ ಪಡೆದಿಲ್ಲ. ಎರಡನೇ ಡೋಸ್ 65% ಮಾತ್ರ ಆಗಿದೆ ಎಂದರು. 12 ರಿಂದ 14 ವರ್ಷದ ಮಕ್ಕಳು 20 ಲಕ್ಷದ ಪೈಕಿ, 13,9600 ಅಂದರೆ 61% ಮಾತ್ರ ಆಗಿದ್ದು, ಆದಷ್ಟು ಬೇಗ ಎಲ್ಲರೂ ಹಾಕಿಸಬೇಕು ಎಂದು ಮನವಿ ಮಾಡಿಕೊಂಡರು.
ಕೊರೋನಾ ಹೊಸ ಪ್ರಬೇಧದ ಪತ್ತೆ ಹೇಗೆ.?
ಕೋವಿಡ್ ಹೊಸ ಪ್ರಬೇಧ ದಕ್ಷಿಣ ಕೊರಿಯಾ, ಹಾಂಕಾಂಗ್, ಕೊರಿಯಾ, ಜರ್ಮನಿ, ಚೀನಾ ಸೇರಿದಂತೆ ಎಂಟು ದೇಶಗಳಲ್ಲಿ ಹೆಚ್ಚಾಗುತ್ತಿದೆ. ಇಲ್ಲಿಂದ ಬರುವವರಿಗೆ ಮಾರ್ಗಸೂಚಿ ಹೊರಡಿಸುತ್ತೇವೆ. ರಾಜ್ಯದಲ್ಲಿ ಪ್ರತಿದಿನ 50 ಪ್ರಕರಣ ಮಾತ್ರ ಕಂಡುಬರುತ್ತಿದ್ದು, ಕೆಲವು 10-12 ಪ್ರಕರಣದ ಜೀನೋಮ್ ಸೀಕ್ವೆನ್ಸ್ ನಡೆಸಲಾಗ್ತಿದೆ. ಈ ಮೂಲಕ ಹೊಸ ಪ್ರಬೇಧ ಪತ್ತೆ ಬಗ್ಗೆ ಗಮನಿಸಲಾಗುವುದು ಎಂದರು.
ನಿನ್ನೆಯಿಂದ 18 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್ ಆರಂಭವಾಗಿದ್ದು, ಸಾಕಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗ್ತಿಲ್ಲ. ಈ ಬಗ್ಗೆ ಗಮನಿಸಲಾಗುವುದು ಎಂದರು. ಖಾಸಗಿ ಆಸ್ಪತ್ರೆಗಳಿಂದ ಹೆಚ್ಚು ದರ ಸುಲಿಗೆ ಇನ್ನು ಖಾಸಗಿ ಆಸ್ಪತ್ರೆಗಳು ಕೋವಿಡ್ ಸಮಯದಷ್ಟೇ ಅಲ್ಲದೆ, ಉಳಿದ ಸಮಯದಲ್ಲೂ ನಿಗದಿಗಿಂತ ಅಧಿಕ ದರ ವಸೂಲಿ ಮಾಡಿದರೆ, ಲೈಸೆನ್ಸ್ ರದ್ದು ಮಾಡಬೇಕಾಗ್ತದೆ ಎಂದು ಎಚ್ಚರಿಕೆ ನೀಡಿದರು.