ಇಸ್ರೇಲ್ : ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಈ ಸಂಬಂಧ ಯುದ್ಧ ಪೀಡಿತ ಇಸ್ರೇಲ್ನಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ.
ಆಪರೇಷನ್ ಅಜಯ್ ಕಾರ್ಯಾಚರಣೆಯ ಭಾಗವಾಗಿ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನವು ಭಾನುವಾರ ಮುಂಜಾನೆ ಇಸ್ರೇಲ್ನಿಂದ ಭಾರತಕ್ಕೆ ಹೊರಟಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಆಪರೇಷನ್ ಅಜಯ್ ಭಾಗವಾಗಿ ಭಾನುವಾರ ಬೆಳಗ್ಗೆ 274 ಭಾರತೀಯರನ್ನು ಒಳಗೊಂಡ ನಾಲ್ಕನೇ ವಿಮಾನವು ಇಸ್ರೇಲ್ನಿಂದ ಹೊರಟಿದೆ. ಇದು ಇಸ್ರೇಲ್ನಿಂದ ಭಾನುವಾರ ಹೊರಟಿರುವ ಎರಡನೇ ವಿಮಾನ ಎಂದು ಹೇಳಿದ್ದಾರೆ.
ಸಂಘರ್ಷ ಪೀಡಿತ ಇಸ್ರೇಲ್ನಿಂದ ಭಾರತೀಯರನ್ನು ಸುರಕ್ಷಿತವಾಗಿ ಕರೆತರುವ ಅಂಗವಾಗಿ ಭಾರತ ಸರ್ಕಾರವು ಆಪರೇಷನ್ ಅಜಯ್ ರಕ್ಷಣಾ ಕಾರ್ಯಾಚರಣೆ ಹಮ್ಮಿಕೊಂಡಿದೆ. ಈ ಮೂಲಕ ಇಸ್ರೇಲ್ನಲ್ಲಿ ಸಿಲುಕಿರುವ ಸುಮಾರು 18000 ಭಾರತೀಯ ನಾಗರೀಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ ಗುರುವಾರದಿಂದ ಇಸ್ರೇಲ್ನಿಂದ ಭಾರತೀಯರನ್ನು ಕರೆತರುವ ಕಾರ್ಯ ನಡೆಯುತ್ತಿದೆ. ಈ ಸಂಬಂಧ ನೋಂದಣಿಯೂ ಆರಂಭವಾಗಿದೆ.