ನವದೆಹಲಿ: ರಾಷ್ಟ್ರೀಯ ಜನತಾ ದಳದ ಮುಖಂಡ ಮತ್ತು ಕೇಂದ್ರದ ಮಾಜಿ ಸಚಿವ ಶರದ್ ಯಾದವ್ (75) ನಿನ್ನೆ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ಸಮಯದಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಶರದ್ ಯಾದವ್ ಅವರು ಗುರುಗ್ರಾಮದ ಫೋರ್ಟಿಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
“ಪಪ್ಪ ನಹೀ ಹೇ” ಎಂದು ಅವರ ಮಗಳು ತನ್ನ ತಂದೆಯ ಮರಣ ವಾರ್ತೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. “ಗುರುವಾರ ರಾತ್ರಿ ಫೋರ್ಟಿಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆʼʼ ಎಂದು ಶರದ್ ಯಾದವ್ ಪುತ್ರಿ ಸುಭಾಷಿನಿ ಯಾದವ್ ತಿಳಿಸಿದ್ದಾರೆ.
ನಿನ್ನೆ ಅವರು ಪ್ರಜ್ಞೆ ತಪ್ಪಿದ್ದರು. ಬಳಿಕ ಫೋರ್ಟಿಸ್ ಆಸ್ಪತ್ರೆಯ ಫೋರ್ಟಿಸ್ ಮೊಮೊರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ದಾಖಲಿಸಲಾಗಿತ್ತು. “ರಿಸರ್ಚ್ ಇನ್‌ಸ್ಟಿಟ್ಯೂಟ್‌ಗೆ ಸೇರಿಸುವ ಸಮಯದಲ್ಲಿ ನಾಡಿ ಮಿಡಿತ ಸ್ಥಗಿತಗೊಂಡಿತ್ತು. ರಕ್ತದ ಪರಿಚಲನೆ ಸ್ಥಗಿತಗೊಂಡಿತ್ತು. ಹಲವು ತುರ್ತು ಚಿಕಿತ್ಸೆಗಳನ್ನು ನಡೆಸಲಾಯಿತು. ರಾತ್ರಿ 10.19 ಗಂಟೆಗೆ ಶರದ್ ಯಾದವ್ ಮೃತಪಟ್ಟಿರುವುದನ್ನು ಘೋಷಿಸಲಾಯಿತುʼʼ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಶರದ್ ಯಾದವ್ ನಿಧನ ವಾರ್ತೆಯಿಂದ ದುಃಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
ಶರದ್ ಯಾದವ್ ಅವರು ಬಿಹಾರದ ಪ್ರಭಾವಿ ರಾಜಕಾರಣಿಯಾಗಿದ್ದರು. ಇವರು ಮಧ್ಯಪ್ರದೇಶದ ಹೊಶಂಗಾಬಾದ್ ಜಿಲ್ಲೆಯ ಬಬೈ ಗ್ರಾಮದಲ್ಲಿ ಕಿಶೋರ್ ಯಾದವ್ ಮತ್ತು ಸುಮಿತ್ರಾ ಯಾದವ್ ಸುಪುತ್ರರಾಗಿ 1947ರ ಜುಲೈ 1ರಂದು ಜನಿಸಿದರು. ಇವರು 1974ರ ಉಪಚುನಾವಣೆಯ ವೇಳೆ ಲೋಕಸಭೆಗೆ ಆಯ್ಕೆಯಾಗಿದ್ದರು. ಇವರು ಲೋಕಸಭೆಗೆ ಏಳು ಭಾರಿ ಆಯ್ಕೆಯಾಗಿದ್ದರು. ರಾಜ್ಯಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದರು.
ಇವರು ಜನತಾದಳ ಪಕ್ಷದ ರಾಷ್ಟ್ರೀಯ ಸ್ಥಾಪಕರು. 2004ರ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ನಿತೀಶ್ ಕುಮಾರ್ ನೆರವಿನಿಂದ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. 2018ರಲ್ಲಿ ಲೋಕತಾಂತ್ರಿಕ ಜನತಾದಳ ಆರಂಭಿಸಿದ್ದರು. ನಿತೀಶ್ ಜತೆ ಸಂಬಂಧ ಹಾಳಾದ ಕಾರಣ ಈ ಪಕ್ಷ ಆರಂಭಿಸಿದರು. ಕಳೆದ ವರ್ಷ ಎಲ್‌ಜೆಡಿ ಆರ್‌ಜೆಡಿ ವಿಲೀನವಾಗಿತ್ತು.

