ಬೆಂಗಳೂರು: ಉದ್ಯಮಿ ಮನೋಜ್ ಎಂಬಾತನ ಕಿಡ್ನಾಪ್ ಪ್ರಕರಣದಲ್ಲಿ(Kidnap Case) ಮಾಜಿ ರೌಡಿ ಶೀಟರ್ ಯಶಸ್ವಿನಿಯನ್ನ ಸಿಸಿಬಿ(CCB) ಪೊಲೀಸರು ಬಂಧಿಸಿದ್ದಾರೆ.

ನಟ, ನಿರ್ದೇಶಕ ನಂದಕಿಶೋರ್‌ಗೆ(Nanda Kishore) ಉದ್ಯಮಿ ಮನೋಜ್ ಕುಮಾರ್ ಅವರಿಗೆ ಪರಿಚಿತನಾಗಿದ್ದ ರಾಜೇಶ್ ಎಂಬಾತ ಹಣ ಸಾಲ ಕೊಡಿಸಿದ್ದ. ಆದರೆ ಒಂದು ವರ್ಷ ಕಳೆದರೂ ಸಾಲದ ಹಣವನ್ನು ನಿರ್ದೇಶಕ ಹಿಂತಿರುಗಿಸದಿದ್ದಾಗ ರಾಜೇಶ್ ಮೇಲೆ ಮನೋಜ್ ಕುಮಾರ್ ಒತ್ತಡ ಹೇರಿದ್ದರು. ಹೀಗಾಗಿ ರಾಜೇಶ್ ಬೇಕರಿ ರಘು ಮತ್ತು ಗ್ಯಾಂಗ್ ಜೊತೆ ಸೇರಿ ಉದ್ಯಮಿ ಎಚ್.ವಿ. ಮನೋಜ್‌ನನ್ನು ಅಪಹರಿಸಿ ಬೆದರಿಸಿದ್ದ ಆರೋಪದ ಅಡಿ ಕಳೆದ ಆಗಸ್ಟ್‌ನಲ್ಲಿ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿತ್ತು. ಆ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ್ದ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು, ಬೇಕರಿ ರಘು ಸೇರಿದಂತೆ ಅನೇಕರನ್ನು ಬಂಧಿಸಿದ್ದರು.

ಈ ಪ್ರಕರಣದ ಆರೋಪಿಯ ಬಂಧನಕ್ಕೆ ತೆರಳಿದ್ದ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆರೋಪದಡಿ ಮಾಜಿ ರೌಡಿಶೀಟರ್ ಯಶಸ್ವಿನಿ ಗೌಡ (47) ಅವರನ್ನು ಸಿಸಿಬಿಯ ಸಂಘಟಿತ ಅಪರಾಧ ನಿಯಂತ್ರಣ ದಳದ ಪೊಲೀಸರು ಈಗ ಬಂಧಿಸಿದ್ದಾರೆ.

ಪ್ರಕರಣದಲ್ಲಿ ಇಲ್ಲಿಯವರೆಗೂ 13 ಜನರನ್ನ ಬಂಧನ ಮಾಡಲಾಗಿದೆ. ಸದ್ಯ ಬಂಧಿತ ಯಶಸ್ವಿನಿ ಮೇಲೆ ಸುಮಾರು 10 ಕೇಸ್ ಗಳಿವೆ. ಮೂರು ಪ್ರಕರಣಗಳು ವಿಚಾರಣೆ ಹಂತದಲ್ಲಿದ್ದು, ಕೋಕಾ ಕಾಯ್ದೆಯಡಿ ಬಂಧನ ಮಾಡಲಾಗಿದೆ. ಹಾಗೆ ಈ ಕೇಸ್‌ನಲ್ಲಿ ಎಲ್ಲಾ ಆರೋಪಿಗಳ ಮೇಲೆ ಕೋಕಾ ಕಾಯ್ದೆ ಜಾರಿ ಮಾಡಲಾಗಿದೆ. ಕೋಕಾ ಕಾಯ್ದೆ ಪ್ರಕಾರ ಬಂಧಿತರಾದ ಆರೋಪಿಗೆ ಎರಡು ವರ್ಷ ಜಾಮೀನು ಸಿಗುವುದಿಲ್ಲ.







