ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದೇಶದಿಂದ(Prime Minister of Bangladesh resigns) ಪಲಾಯನಗೊಂಡಿರುವ ಶೇಖ್ ಹಸೀನಾ(Shaik Haseena) ಕೆಲಕಾಲ ಇಂಗ್ಲೆಂಡ್ನಲ್ಲಿ ವಾಸ್ತವ್ಯ ಹೂಡಲು ನಿರ್ಧರಿಸಿದ್ದಾರೆ. ಆದರೆ, ಅವರಿಗೆ ಅಲ್ಲಿಗೆ ತೆರಳಲು ಇನ್ನೂ ಅನುಮತಿ ಸಿಗದ ಹಿನ್ನೆಲೆಯಲ್ಲಿ ಸದ್ಯಕ್ಕೆ ಭಾರತದ ದೆಹಲಿಯಲ್ಲಿ (Indian Delhi) ಸುರಕ್ಷಿತ ಸ್ಥಳದಲ್ಲಿದ್ದಾರೆ. ಮೂಲಗಳ ಪ್ರಕಾರ ಯುಕೆ (England) ಆಕೆಗೆ ಆಶ್ರಯ ನೀಡಲು ಸಿದ್ಧವಾಗಿಲ್ಲ. ಹೀಗಾಗಿ, ಶೇಖ್ ಹಸೀನಾ ಅವರ ಪರಿಸ್ಥಿತಿ ಅತಂತ್ರವಾಗಿದೆ. ಇನ್ನೊಂದೆಡೆ ಅಮೆರಿಕಾ ಶೇಖ್ ಹಸೀನಾ ಅವರ ವೀಸಾವನ್ನು ರದ್ದುಗೊಳಿಸುವ ಮೂಲಕ ಮತ್ತೊಂದು ಶಾಕ್ ನೀಡಿದೆ.
ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಬಾಂಗ್ಲಾದಿಂದ ಪರಾರಿಯಾಗಿರುವ ಶೇಖ್ ಹಸೀನಾ ಭಾರತದಲ್ಲೇ ಉಳಿಯಬೇಕಾದ ಅನಿವಾರ್ಯತೆ ಎದುರಾಗಬಹುದು. ಶೇಖ್ ಹಸೀನಾ ಪ್ರಸ್ತುತ ಭಾರತದಲ್ಲಿ ಸುರಕ್ಷಿತ ಮತ್ತು ರಹಸ್ಯ ಸ್ಥಳದಲ್ಲಿದ್ದಾರೆ. ಅವರಿಗೆ ಭಾರತದಲ್ಲಿ ಆಶ್ರಯ ನೀಡಿರುವ ಬಗ್ಗೆ ಈಗಾಗಲೇ ಮೋದಿ ಸರ್ಕಾರ ರಾಜ್ಯಸಭೆಯಲ್ಲಿ ಘೋಷಿಸಿದೆ. ಈ ಹಿಂದೆ 1975ರಲ್ಲಿ ಕೂಡ ಶೇಖ್ ಹಸೀನಾ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಿಂದ ದೆಹಲಿಯಲ್ಲಿ 6 ವರ್ಷಗಳ ಕಾಲ ಆಶ್ರಯ ಪಡೆದಿದ್ದರು.
ಕೆಲವು “ಅನಿಶ್ಚಿತತೆಗಳಿಂದ” ಶೇಖ್ ಹಸೀನಾ ಅವರ ಪ್ರಯಾಣದ ಯೋಜನೆಗಳು ಬದಲಾಗಿವೆ. ಅವರು ಮುಂದಿನ ಒಂದೆರಡು ದಿನಗಳವರೆಗೆ ಭಾರತದಿಂದ ಹೊರಹೋಗುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಭಾರೀ ಹಿಂಸಾತ್ಮಕ ಪ್ರತಿಭಟನೆಗಳ ನಂತರ ಪ್ರಧಾನಿ ಹುದ್ದೆಯಿಂದ ಕೆಳಗಿಳಿದ ಕೆಲವೇ ಗಂಟೆಗಳಲ್ಲಿ ಶೇಖ್ ಹಸೀನಾ ನಿನ್ನೆ ಸಂಜೆ ತನ್ನ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ಭಾರತದ ಹಿಂಡನ್ ವಾಯುನೆಲೆಗೆ ಆಗಮಿಸಿದರು. ಅಲ್ಲಿಂದ ಬಿಗಿ ಭದ್ರತೆಯಲ್ಲಿ ಅವರನ್ನು ರಹಸ್ಯ ಸ್ಥಳಕ್ಕೆ ಸ್ಥಳಾಂತರಿಸಲಾಯಿತು.
ಶೇಖ್ ಹಸೀನಾ ಅವರ ಸಹೋದರಿ ಶೇಖ್ ರೆಹಾನಾ ಯುಕೆ ಪೌರತ್ವವನ್ನು ಹೊಂದಿದ್ದಾರೆ. ಹೀಗಾಗಿ, ಅವರು ಇಂಗ್ಲೆಂಡ್ನಲ್ಲಿ ವಾಸವಾಗುವ ಪ್ಲಾನ್ ಮಾಡಿದ್ದರು. ಆದರೆ, ಶೇಖ್ ಹಸೀನಾಗೆ ಆಶ್ರಯ ನೀಡುವ ಬಗ್ಗೆ ಇಂಗ್ಲೆಂಡ್ ಯಾವುದೇ ಖಚಿತತೆ ನೀಡಿಲ್ಲ.
“ವೀಸಾ ದಾಖಲೆಗಳು ಯುಎಸ್ ಕಾನೂನಿನ ಅಡಿಯಲ್ಲಿ ಗೌಪ್ಯವಾಗಿರುತ್ತವೆ. ಆದ್ದರಿಂದ, ನಾವು ವೈಯಕ್ತಿಕ ವೀಸಾ ಪ್ರಕರಣಗಳ ವಿವರಗಳನ್ನು ಚರ್ಚಿಸುವುದಿಲ್ಲ” ಎಂದು ಢಾಕಾದಲ್ಲಿನ ಯುಎಸ್ ರಾಯಭಾರ (US Embassy in Dhaka)ಕಚೇರಿಯ ವಕ್ತಾರರು ಇಂದು ಸುದ್ದಿಗಾರರಿಗೆ ತಿಳಿಸಿದ್ದಾರೆ ಎಂದು ಯುನೈಟೆಡ್ ನ್ಯೂಸ್ ಆಫ್ ಬಾಂಗ್ಲಾದೇಶ ವರದಿ ಮಾಡಿದೆ.