ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ರಾಜ್ಯಸಭೆಯಲ್ಲಿ ಬುಧವಾರ ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಭಾವನಾತ್ಮಕವಾಗಿ ಭಾಷಣ ಮಾಡಿ ಗಮನ ಸೆಳೆದಿದ್ದಾರೆ.
ರಾಜ್ಯಸಭೆಯಲ್ಲಿ ಮಂಗಳವಾರ ಶೂನ್ಯವೇಳೆ ಈ ವಿಷಯ ಪ್ರಸ್ತಾಪಿಸಿದ ಅವರು, ಬೆಂಗಳೂರಿನ ಜನತೆಗೆ ಕಾವೇರಿ ನದಿಯ ಕುಡಿಯುವ ನೀರಿನ ಹಂಚಿಕೆಯನ್ನು ನಿರಾಕರಿಸಲಾಗಿದೆ. ನಾನು ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಮಾತ್ರ ಮಾತನಾಡುತ್ತಿದ್ದೇನೆ, ನನಗೆ ಕಾವೇರಿಯ ಕುರಿತ ಸಮಸ್ಯೆ ಬಗ್ಗೆ ಸಂಪೂರ್ಣ ಅರಿವಿದೆ ಮತ್ತು ಈ ಬಗ್ಗೆ ಪುಟಗಟ್ಟಲೆ ಮಾತನಾಡಬಲ್ಲೆ. ಆದರೆ, ಈ ಸಂದರ್ಭದಲ್ಲಿ ಅದನ್ನು ನಾನು ಪ್ರಸ್ತಾಪಿಸುವುದಿಲ್ಲ ಎಂದರು.
ಕುಡಿಯುವ ನೀರಿಗಾಗಿ ಬೆಂಗಳೂರು ನಗರದ ಜನತೆ ಭಿಕ್ಷೆ ಬೇಡುವ ಸ್ಥಿತಿಗೆ ತಲುಪಿರುವುದು ದುರದೃಷ್ಟಕರ ಹಾಗೂ ಅತ್ಯಂತ ನೋವಿನ ಸಂಗತಿ. ಕಾವೇರಿ ಜಲವಿವಾದ ನ್ಯಾಯಮಂಡಳಿಯಿಂದ ಕರ್ನಾಟಕಕ್ಕೆ ಸಂಪೂರ್ಣ ನ್ಯಾಯ ದೊರೆತಿಲ್ಲ. ಅಂದಾಜು 1.30 ಕೋಟಿ ಜನಸಂಖ್ಯೆ ಹೊಂದಿರುವ ರಾಜಧಾನಿ ಬೆಂಗಳೂರಿಗೆ ಕೇವಲ 4.75 ಟಿಎಂಸಿ ಅಡಿ ನೀರನ್ನು ಹಂಚಿಕೆ ಮಾಡಿರುವುದು ವಿಷಾದನೀಯ’ ಎಂದು ಹೇಳಿದರು.
‘ಕಾವೇರಿ ಕಣಿವೆ ವ್ಯಾಪ್ತಿಯಲ್ಲಿ ಯಾವುದೇ ಜಲಾಶಯ ನಿರ್ಮಿಸುವಂತೆ ಕೋರುವುದಿಲ್ಲ. ಬದಲಿಗೆ, ಬೆಂಗಳೂರು ನಗರದ ಜನತೆ ಎದುರಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸುವತ್ತ ಸರ್ಕಾರ ಮುಂದಾಗಬೇಕು’ ಎಂದು ಅವರು ಮನವಿ ಮಾಡಿದರು.
‘ಕಾವೇರಿ ನೀರಿನ ಹಂಚಿಕೆ ವಿಷಯದಲ್ಲಿ ಕರ್ನಾಟಕಕ್ಕೆ ಕಳೆದ 200 ವರ್ಷಗಳಿಂದ ಎಷ್ಟು ಪ್ರಮಾಣದ ಅನ್ಯಾಯ ಆಗಿದೆ ಎಂಬ ಕುರಿತು ಸದನದಲ್ಲಿ ಕೂಲಂಕುಷವಾಗಿ ಪ್ರಸ್ತಾಪಿಸಬಲ್ಲೆ. ಕುಡಿಯುವ ನೀರಿನ ಅತಿಯಾದ ಸಮಸ್ಯೆ ಕರ್ನಾಟಕದಾದ್ಯಂತ ಇದೆ. ಆದರೆ, ಕಡೆಯ ಪಕ್ಷ ಬೆಂಗಳೂರು ನಗರಕ್ಕೆ ಅಗತ್ಯ ಪ್ರಮಾಣದ ನೀರನ್ನು ಹಂಚಿಕೆ ಮಾಡಲು ಪಕ್ಷಭೇದ ಮರೆತು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.