ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದ್ದು, ಸಚಿವ ಸಂಪುಟದಿಂದ (Cabinet) ವಜಾಗೊಂಡ ಬಳಿಕ ಅಭಿಮಾನಿಗಳಿಗೆ, ಬೆಂಬಲಿಗರಿಗೆ ಮಾಜಿ ಸಚಿವ ರಾಜಣ್ಣ (KN Rajanna) ಸಂದೇಶವೊಂದನ್ನ ರವಾನಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಭಾವುಕ ಪೋಸ್ಟ್ ಒಂದನ್ನ ಹಂಚಿಕೊಂಡಿರೋ ಮಾಜಿ ಸಚಿವರು, ನೀವು ನನ್ನ ಕುಟುಂಬ, ಅತಿರೇಕದ ವರ್ತನೆ ನಿಮ್ಮ ಕುಟುಂಬಕ್ಕೆ ಹಾನಿಯಾಗಬಹುದು ಅಂತಾ ಕಿವಿಮಾತು ಹೇಳಿದ್ದಾರೆ.

ಈ ರೀತಿಯ ರಾಜಕೀಯ ಏರುಪೇರುಗಳು ನನಗೆ ಹೊಸತಲ್ಲ. ನಿಮ್ಮಲ್ಲಿ ನನ್ನ ವಿನಂತಿ ಏನೆಂದರೆ, ಯಾವುದೇ ಕಾರಣಕ್ಕೂ ಅಭಿಮಾನದ ಅತಿರೇಕದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕೆಲವು ಯುವಜನರು ಅಹಿತಕರವಾಗಿ ತಮಗೆ ತಾವು ನೋವು ಮಾಡಿಕೊಂಡಿದ್ದು ನನ್ನ ಮನಸ್ಸಿಗೆ ದುಃಖ ತಂದಿದೆ ಎಂದಿದ್ದಾರೆ.

ನಿಮ್ಮನ್ನು ನಂಬಿಕೊಂಡು ನಿಮ್ಮ ಕುಟುಂಬಗಳು ಮನೆಯಲ್ಲಿ ಕಾಯುತ್ತಿರುತ್ತಾರೆ. ನಮ್ಮ ನಾಯಕರಾದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಸಂವಿಧಾನ ಉಳಿಸುವ ಪ್ರಯತ್ನಕ್ಕೆ ಬಲ ತರಬೇಕಿದೆ ಹಾಗೂ ನಮ್ಮ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕೈ ಬಲಪಡಿಸುವ ಕಡೆಗೆ ನಮ್ಮ ಚಿಂತನೆ ಇರಲಿ ಎಂದು ನಿಮ್ಮನ್ನು ಕೋರುತ್ತೇನೆ ಎಂದು ರಾಜಣ್ಣ ಬರೆದುಕೊಂಡಿದ್ದಾರೆ.











