ತುಮಕೂರು: ರಾಜ್ಯದಲ್ಲಿ ನವೆಂಬರ್ ಕ್ರಾಂತಿಯ ಚರ್ಚೆ ತಣ್ಣಗಾಗುತ್ತಿರುವ ಸಮಯದಲ್ಲೇ ಕಾಂಗ್ರೆಸ್‌ನ ಮಾಜಿ ಸಚಿವ ಕೆ.ಎನ್ ರಾಜಣ್ಣ ಸಂಪೂರ್ಣ ಪಕ್ಷವೇ ಎಚ್ಚೆತ್ತುಕೊಳ್ಳುವ ಹೇಳಿಕೆ ನೀಡಿದ್ದಾರೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ದೊಡ್ಡೆರಿಯ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು, ದೊಡ್ಡೇರಿ ಹೋಬಳಿಯಿಂದ ಶಾಸಕರಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸರಿಯಾದ ಗೌರವ ಸಿಗದ ಕಾರಣ ಜನತಾದಳಕ್ಕೆ ಸೇರಿ ಸ್ಪರ್ಧಿಸಿದ್ದೆ. ಆಗ ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ವೈಟ್‌ವಾಶ್ ಆಗಿತ್ತು. ಮುಂದಿನ ದಿನಗಳಲ್ಲಿ ಇದೇ ಪರಿಸ್ಥಿತಿ ಮತ್ತೆ ಬರುತ್ತದೆಯೋ ಏನೋ ಗೊತ್ತಿಲ್ಲ ಎಂದಿದ್ದಾರೆ. ಈ ಮೂಲಕ ತಮ್ಮನ್ನು ಸಚಿವ ಸ್ಥಾನದಿಂದ ವಜಾ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಸಭೆಯಲ್ಲಿ ಮಾತು ಮುಂದುವರಿಸಿದ ಅವರು, ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿರುವ ಕಾರಣ ಹಿಂದೆ ಆದ ಪರಿಸ್ಥಿತಿ ಮತ್ತೆ ಬರುವುದಿಲ್ಲ. ಆದರೆ ಮುಂದಿನ ದಿನದ ಪರಿಸ್ಥಿತಿ ಏನಾಗುತ್ತದೆ ಎಂದು ಹೇಳಲಾಗದು. ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ. ಮುಂದಿನ ತೀರ್ಮಾನಗಳನ್ನು ಜನರು ಮಾಡಬೇಕು ಎಂದು ಹೇಳಿದ್ದಾರೆ.


