ಚೆನ್ನೈ: ಮುಂಬರುವ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಆಡಳಿತಾರೂಢ ಡಿಎಂಕೆ ವಿರುದ್ಧ ಗೆಲುವು ಸಾಧಿಸಲೇ ಬೇಕು ಎಂದು ಪಣತೊಟ್ಟಿರುವ ನಟ ವಿಜಯ್, ದಿನದಿಂದ ದಿನಕ್ಕೆ ತಮ್ಮ ತಮಿಳಗ ವೆಟ್ರಿ ಕಳಗಂ ಪಕ್ಷವನ್ನು ಬಲಿಷ್ಠ ಮಾಡುತ್ತಿದ್ದಾರೆ.

ಈಗಾಗಲೇ ಅನೇಕ ಹಿರಿಯ ರಾಜಕಾರಣಿಗಳು ನಟ ವಿಜಯ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದು, ಇದೀಗ ಇಂದು ಅಧೀಕೃತವಾಗಿ ತಮಿಳುನಾಡಿನ ಮಾಜಿ ಸಚಿವ ಎಐಎಡಿಎಂಕೆ ಉಚ್ಚಾಟಿತ ಶಾಸಕ, ಕೆ.ಎ ಸೆಂಗೊಟ್ಟೆಯನ್, ವಿಜಯ್ ಅವರ ಸಮ್ಮುಖದಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ಸೇರ್ಪಡೆಗೊಂಡಿದ್ದಾರೆ. ಪಕ್ಷದ ಶಾಲು ಹೊದಿಸುವ ಮೂಲಕ ವಿಜಯ್ ತಮ್ಮ ಪಕ್ಷಕ್ಕೆ ಕೆ.ಎ ಸೆಂಗೊಟ್ಟೆಯನ್ ಅವರನ್ನು ಕಾರ್ಯಕರ್ತರ ಸಮ್ಮುಖದಲ್ಲಿ ಸ್ವಾಗತಿಸಿಕೊಂಡಿದ್ದಾರೆ.

ಇನ್ನು 2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಅಖಾಡದಲ್ಲಿ ಆಡಳಿತಾರೂಢ ಡಿಎಂಕೆ ಮತ್ತು ನಟ ವಿಜಯ್ ನೇತೃತ್ವದ ಟಿವಿಕೆ ನಡುವಿನ ಹಣಾಹಣಿ ಜೋರಾಗಿದ್ದು, ತಮ್ಮ ಕೋಟ್ಯಂತರ ಅಭಿಮಾನಿಗಳ ಬೆಂಬಲ ಪಡೆಯುವ ಮೂಲಕ ವಿಜಯ್ ರಾಜಕೀಯ ಎದುರಾಳಿಗಳಲ್ಲಿ ನಡುಕ ಹುಟ್ಟಿಸುತ್ತಿದ್ದಾರೆ. ಸದ್ಯ ನಟ ವಿಜಯ್ ಪಕ್ಷ ಸಂಘಟನೆ ಜೋರಾಗಿ ನಡೆಯುತ್ತಿದೆ.











