ಬೆಂಗಳೂರು: ಮಾಜಿ ಸಚಿವ ಕಾಂಗ್ರೆಸ್ನ ಹಿರಿಯ ನಾಯಕ ಹೆಚ್.ಎಮ್ ರೇವಣ್ಣ(H.M. Revanna) ಅವರ ಪುತ್ರ ಶಶಾಂಕ್ ವಿರುದ್ಧ ಹಿಟ್&ರನ್ (Hit and Run) ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಯಲ್ಲಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಗಡಿಯ ಯುವಕ ಸಾವನ್ನಪ್ಪಿದ್ದಾರೆ. ರಾಜೇಶ್ ಬಿ.ಜಿ ಮೃತ ದುರ್ದೈವಿ.

ನಿನ್ನೆ ರಾತ್ರಿ ಗುಡೆಮಾರೇನಳ್ಳಿ ಟೋಲ್ನ 100 ಮೀಟರ್ ಅಂತರದಲ್ಲಿ ಅಪಘಾತ ನಡೆದಿದೆ. ಬೈಕ್ಗಳನ್ನು ಓವರ್ ಟೇಕ್ ಮಾಡಲು ಹೋಗಿ ಶಶಾಂಕ್ ಕಾರು ಬೈಕ್‌ಗೆ ಗುದ್ದಿ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಅಲ್ಲದೇ ಅಪಘಾತವಾಗುತ್ತಿದ್ದಂತೆ ಸ್ಥಳೀಯರು ಕಾರನ್ನು ಚೇಸ್ ಮಾಡಿ ನಿಲ್ಲಿಸಿದಾಗ ಶಶಾಂಕ್ ನಾನು ಹೆಚ್.ಎಮ್ ರೇವಣ್ಣ ಪುತ್ರ ಎಂದು ಆವಾಜ್ ಹಾಕಿದ್ದಾರೆ ಎನ್ನಲಾಗಿದೆ.

ಇನ್ನು ಮೃತ ರಾಜೇಶ್ ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದ ನಿವಾಸಿಯಾಗಿದ್ದು, ದಾಬಸ್ ಪೇಟೆಯಲ್ಲಿರುವ ಫ್ಯಾಕ್ಟರಿ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ನಿನ್ನೆ ಕೆಲಸ ಮುಗಿಸಿ ಮನೆಗೆ ಬರುವಾಗ ಈ ಅಪಘಾತ ನಡೆದಿದೆ. ಇಬ್ಬರು ಅಕ್ಕ ಹಾಗೂ ತಂದೆ ತಾಯಿಯ ಜವಾಬ್ದಾರಿ ಹೊತ್ತಿದ್ದ ರಾಜೇಶ್‌ನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.







