ರೆಪ್ಪಾಲೆ ಶಿವ ಪ್ರವೀಣ್ ಕುಮಾರ್. ಸದ್ಯಕ್ಕೆ ಈ ಹೆಸರು ತೆಲಂಗಾಣದಲ್ಲಿ ತೀವ್ರ ಚರ್ಚೆಗೆ ಒಳಗಾಗುತ್ತಿದೆ. ತಮ್ಮ ನಿವೃತ್ತಿಗೆ ಇನ್ನೂ ಸುಮಾರು ಆರು ವರ್ಷಗಳು ಬಾಕಿ ಇರುವಾಗಲೇ ಐಪಿಎಸ್ ಹುದ್ದೆಯಿಂದ ಸ್ವ-ನಿವೃತ್ತಿ ಪಡೆದ ಡಾ. ಆರ್ ಎಸ್ ಪಿ ಅವರು, ಈಗ ಬಹುಜನ ಸಮಾಜ ಪಕ್ಷವನ್ನು ಅಧಿಕೃತವಾಗಿ ಸೇರಿಕೊಂಡಿದ್ದಾರೆ. ತೆಲಂಗಾಣದ ನಾಲ್ಗೊಂಡ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಬಿ ಎಸ್ ಪಿ ಸೇರಿರುವ ಪ್ರವೀಣ್ ಕುಮಾರ್, ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಸಮುದಾಯದ ಅಭಿವೃದ್ದಿಗೆ ಶ್ರಮಿಸುವ ಭರವಸೆ ನೀಡಿದ್ದಾರೆ.
1995 ಬ್ಯಾಚ್’ನ ಐಪಿಎಸ್ ಅಧಿಕಾರಿಯಾಗಿರುವ ಪ್ರವೀನ್, ಹಾರ್ವರ್ಡ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದಾರೆ. ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗಶೀಲತೆಯನ್ನು ಗಮನದಲ್ಲಿಟ್ಟುಕೊಂಡು ತೆಲಂಗಾಣದಿಂದ ಸಕ್ರಿಯ ರಾಜಕಾರಣಕ್ಕೆ ಅವರು ಪ್ರವೇಶಿಸಿದ್ದಾರೆ. ತೆಲಂಗಾಣದಲ್ಲಿ ಶಿಕ್ಷಣ ಪ್ರಮಾಣವು ಶೇ. 53ರಷ್ಟಿದ್ದು, ದೇಶದ ಸರಾಸರಿಗಿಂತ ತುಂಬಾ ಕೆಳಗಿದೆ. ಈ ಪ್ರಮಾಣವನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವುದಾಗಿ ಅವರು ಹೇಳಿದ್ದಾರೆ.
![](https://pratidhvani.com/wp-content/uploads/2021/08/RSP-bsp1200main_0.jpg)
ಈ ವರ್ಷಾರಂಭದಲ್ಲಿ ಹಿಂದುತ್ವ ಪಂಗಡಗಳ ಕೆಂಗಣ್ಣಿಗೆ ಪ್ರವೀಣ್ ಗುರಿಯಾಗಿದ್ದರು. ತೆಲಂಗಾಣದ ಪೆದ್ದಪಳ್ಳಿ ಜಿಲ್ಲೆಯ ಧೂಲಿಕಟ್ಟಾದಲ್ಲಿರುವ ಪ್ರಸಿದ್ದ ಬೌದ್ಧ ದೇವಾಲಯದಲ್ಲಿ, ಹಿಂದೂ ದೇವರುಗಳನ್ನು ಪೂಜಿಸುವುದಿಲ್ಲ ಮತ್ತು ಹಿಂದೂ ಸಂಪ್ರದಾಯದ ಆಚರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಪ್ರತಿಜ್ಞೆ ಸ್ವೀಕರಿಸಿದ್ದ ವಿಡಿಯೋ ವೈರಲ್ ಆಗಿತ್ತು. ತಮ್ಮ ಕೆಲಸಕ್ಕೆ ರಾಜಿನಾಮೆ ನೀಡಿದ ಮೂರೇ ದಿನಗಳಲ್ಲಿ ಅಂದರೆ, ಜುಲೈ 23 ರಂದು ಮಾಜಿ ಐಪಿಎಸ್ ಅಧಿಕಾರಿ ವಿರುದ್ದ ‘ಹಿಂದೂ ದೇವತೆಗಳನ್ನು ಅಪಮಾನಿಸಿದ್ದಕ್ಕಾಗಿ ಪ್ರಕರಣ ದಾಖಲಾಯಿತು. ತೆಲಂಗಾಣ ರಾಜ್ಯ ಸರ್ಕಾರದ ದ್ವೇಷ ರಾಜಕಾರಣಕ್ಕೆ ಇದೊಂದು ಮುನ್ನುಡಿ ಎಂದೇ ಪರಿಗಣಿಸಲಾಗಿದೆ.
ದಲಿತರಾಗಿರುವ ಪ್ರವೀಣ್ ಕುಮಾರ್ ಅವರು, ಬಿ ಎಸ್ ಪಿ ಪಕ್ಷವನ್ನು ಅಧಿಕೃತವಾಗಿ ಸೇರುವ ದಿನ, ತಮ್ಮ ಭಾಷಣದಲ್ಲಿ ಅಂಬೇಡ್ಕರ್, ಜ್ಯೋತಿರಾವ್ ಫುಲೆ ಹಾಗೂ ಕಾನ್ಶಿ ರಾಮ್ ಅವರ ಸಿದ್ದಾಂತಗಳ ಕುರಿತು ಜನರಿಗೆ ಮನದಟ್ಟು ಮಾಡುವ ಪ್ರಯತ್ನ ಪಟ್ಟಿದ್ದರು.
![](https://pratidhvani.com/wp-content/uploads/2021/08/EbHuLkyUcAI6oDQ-1024x683.jpg)
“ನೀವು ಮೇಲ್ಜಾತಿಯವರ ಕೆಳಗೆ ಗುಲಾಮರಾಗಿಯೇ ಬದುಕಬೇಕು ಎಂದು ಅಂದುಕೊಳ್ಳುತ್ತೀರೋ? ಅಥವಾ ನಿಮ್ಮ ಮಾಲೀಕರು ನೀವೇ ಆಗಿರಬೇಕು ಎಂದು ಅಂದುಕೊಳ್ಳುತ್ತೀರೋ?” ಎಂಬ ಬಹಿರಂಗ ಪ್ರಶ್ನೆ ಕೇಳುವ ಮೂಲಕ ಮೇಲ್ವರ್ಗದ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕೆ ಸಿ ಆರ್ ವಿರುದ್ದ ‘ಮೇಲ್ಜಾತಿ’ ಪ್ರೇಮದ ಆರೋಪ:
ಪ್ರವೀಣ್ ಕುಮಾರ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡುತ್ತಿದ್ದಂತೆಯೇ, ತೆಲಂಗಾಣದಲ್ಲಿ ಅಧಿಕಾರ ಹಂಚಿಕೆಯಲ್ಲಿನ ತಾರತಮ್ಯ ಚರ್ಚೆಗೆ ಬಂದಿದೆ. ಕೆ ಚಂದ್ರಶೇಖರ್ ರಾವ್ ಸಿಎಂ ಆದ ಬಳಿಕ ದಲಿತ ಹಾಗು ಹಿಂದುಳಿದ ವರ್ಗದ ಜನರನ್ನು ಕಡೆಗಣಿಸಿ, ಆಯಕಟ್ಟಿನ ಜಾಗಗಳಲ್ಲಿ ಕೇವಲ ಮೇಲ್ವರ್ಗದ ಅಧಿಕಾರಿಗಳಿಗೆ ಮಾತ್ರ ಸ್ಥಾನ ನೀಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ಮುಖ್ಯಮಂತ್ರಿಗಳ ಕಚೇರಿಯಲ್ಲಿ ಉಬ್ಬನೇ ಒಬ್ಬ ದಲಿತ ಅಥವಾ ಹಿಂದುಳಿದ ವರ್ಗದ ಅಧಿಕಾರಿಯಿಲ್ಲ. ಮೇಲ್ವರ್ಗದ ಅಧಿಕಾರಿಗಳಿಗೆ ನಿವೃತ್ತಿಯ ನಂತರವೂ ವಿಶೇಷ ಸ್ಥಾನ ನೀಡಿ ಅಧಿಕಾರದಲ್ಲಿ ಮುಂದುವರೆಸಲಾಗುತ್ತದೆ, ಎಂದು 2006ರ ಬ್ಯಾಚ್’ನ ಐಎಎಸ್ ಅಧಿಕಾರಿಯಾಗಿದ್ದ ಅಕುನುರಿ ಮುರಳಿ ಅವರು ಹೇಳಿದ್ದಾರೆ.
2019ರಲ್ಲಿ ಸ್ವ-ನಿವೃತ್ತಿ ಪಡೆದಿದ್ದ ಮುರಳಿ ಅವರು, ತಮಗೆ ಯಾವುದೇ ಕೆಲಸವಿಲ್ಲದ ಸ್ಥಾನ ನೀಡಿರುವುದಾಗಿ ಆರೋಪಿಸಿದ್ದರು. ಗ್ರಾಮೀಣಾಭಿವೃದ್ದಿ ಕ್ಷೇತ್ರದಲ್ಲಿ ಉತ್ತಮವಾದ ಅನುಭವವನ್ನು ಹೊಂದಿದ್ದರೂ, ಅವರನ್ನು ಸರ್ಕಾರಿ ದಾಖಲೆಗಳ ವಿಭಾಗದ ನಿರ್ದೇಶಕರಾಗಿ ನಿಯೋಜಿಸಲಾಗಿತ್ತು. ಇದರಿಂದಾಗಿ ಮನನೊಂದ ಮುರಳಿ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಅವರು ರಾಜಿನಾಮೆ ನೀಡಿದ ಕೂಡಲೇ, ಆಂಧ್ರಪ್ರದೇಶದ ಸಿಎಂ ಜಗನ್ ಮೋಹನ್ ರೆಡ್ಡಿ ಅವರು, ಮುರಳಿಯವರನ್ನು ತಮ್ಮ ರಾಜ್ಯದ ಶಿಕ್ಷಣ ಇಲಾಖೆಯ ಸಲಹೆಗಾರರಾಗಿ ನೇಮಿಸಿದ್ದರು.
ಇದು ಅಧಿಕಾರಿಗಳ ವರ್ಗದಲ್ಲಿ ಕೆ ಸಿ ಆರ್ ಮಾಡಿರುವ ತಾರತಮ್ಯವಾದರೆ, ತಮ್ಮ ಸಚಿವ ಸಂಪುಟದಲ್ಲೂ ದಲಿತರಿಗೆ ಅನ್ಯಾಯವೆಸಗಿದ್ದಾರೆ. ತೆಲಂಗಾಣದ 18% ಜನತೆ ದಲಿತರಾಗಿದ್ದಂರಿಂದ, ಸಂಪುಟ ದರ್ಜೆಯ ಸಚಿವರನ್ನಾಗಿ ಮೂರು ಜನ ಶಾಸಕರಿಗೆ ಸ್ಥಾನ ನೀಡಬೇಕಾಗಿತ್ತು. ಆದರೆ, ನೀಡಿದ್ದು ಕೇವಲ ಒಂದು ಸ್ಥಾನ ಮಾತ್ರ. ಇನ್ನೊಂದೆಡೆ, ಕೆ ಸಿ ಆರ್ ಪ್ರತಿನಿಧಿಸುವ ವೇಲಮ ಸಮುದಾಯದಲ್ಲಿ ಕೇವಲ 1% ಜನರಿದ್ದರೂ ಅವರಿಗೆ ಸಂಪುಟ ದರ್ಜೆಯ ನಾಲ್ಕು ಸ್ಥಾನಗಳು, 5% ಜನಸಂಖ್ಯೆಯಿರುವ ರೆಡ್ಡಿ ಸಮುದಾಯಕ್ಕೆ ಆರರಿಂದ ಏಳು ಸ್ಥಾನಗಳನ್ನು ನೀಡಲಾಗಿದೆ.
ಪ್ರವೀಣ್ ಕುಮಾರ್ ಮುಂದಿದೆ ದುರ್ಗಮ ಹಾದಿ:
ಈಗಾಗಲೇ ತೆಲಂಗಾಣದಲ್ಲಿ ಆಳವಾಗಿ ಬೇರೂರಿರುವ ಪ್ರಾದೇಶಿಕ ಪಕ್ಷವಾದ ತೆಲಂಗಾಣ ರಾಷ್ಟ್ರ ಸಮಿತಿ, ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಪ್ರವೀಣ್ ಕುಮಾರ್ ಅವರು ಆನೆ(ಬಿ ಎಸ್ ಪಿಯ ಚುನಾವಣಾ ಚಿಹ್ನೆ)ಯನ್ನು ಏರುವುದೇನೋ ಸುಲಭ. ಆದರೆ, ಅವರ ಮೇಲಿನ ಸವಾರಿ ಅಷ್ಟು ಸರಳವಾಗಿರುವುದಿಲ್ಲ. ಎರಡು ರಾಷ್ಟ್ರೀಯ ಹಾಗು ಒಂದು ಪ್ರಬಲ ಪ್ರಾದೇಶಿಕ ಪಕ್ಷದ ನಡುವೆ ಇಕ್ಕಟ್ಟಾದ ಸ್ಥಳದಲ್ಲಿ ಆನೆಯನ್ನು ಕೂರಿಸುವ ಸಾಹಸಕ್ಕೆ ಪ್ರವೀನ್ ಕುಮಾರ್ ಅವರು ಮುಂದಾಗಬೇಕಿದೆ.
ಈಗಾಗಲೇ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಪ್ರಕರಣವನ್ನು ಮೈಮೇಲೆ ಎಳೆದುಕೊಂಡಿರುವ ಪ್ರವೀನ್ ಅವರು ಕ್ರಮಿಸುವ ಹಾದಿ ಬಹಳಷ್ಟಿದೆ. ಬಿ ಎಸ್ ಪಿಯ ನೆಲೆಯನ್ನು ವಿಸ್ತರಿಸಿ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲಿಸುವ ವರೆಗೆ ಅದನ್ನು ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ.