ಹಾಸನ : ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆ ನಡೆಸದ ವಿಚಾರವಾಗಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಹಾಸನ ಜಿಲ್ಲೆ ಅರಸಿಕೇರೆ ತಾಲೂಕಿನ ಕರಗುಂದ ಗ್ರಾಮದಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಯಾಕೆ ಎಲ್ಲರೂ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದೀರಾ..? ನಾವು ಹಾಸನದಲ್ಲಿಯೂ ಪಂಚರತ್ನ ಯಾತ್ರೆ ಮಾಡುತ್ತೇವೆ. ಸದ್ಯದಲ್ಲೇ ನಾನು ಹಾಗೂ ರೇವಣ್ಣ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಹಾಸನ ಜಿಲ್ಲೆಯಿಂದ ಹೊರ ಹೋಗುವ ಮುನ್ನವೇ ಹಾಸನದಲ್ಲಿ ಜೆಡಿಎಸ್ ಪಂಚರತ್ನ ಯಾತ್ರೆ ನಡೆಸಲಿದೆ. ಮನೆಯಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ನಮಗೆ ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಕ್ಷೇತ್ರಗಳನ್ನು ಗೆಲ್ಲುವುದು ಮುಖ್ಯ. ಯಾರನ್ನೂ ಸೋಲಿಸಬೇಕು ಎಂಬುದು ನಮಗೆ ಇಲ್ಲ. ರೇವಣ್ಣ ಜೊತೆ ಮಾತನಾಡಿ ಶೀಘ್ರದಲ್ಲಿಯೇ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಗೆ ದಿನಾಂಕ ನಿಗದಿ ಪಡಿಸುತ್ತೇವೆ ಎಂದು ಹೇಳಿದ್ದಾರೆ.
ನಾವು ರಾಜ್ಯದಲ್ಲಿ 123 ಸ್ಥಾನಗಳನ್ನು ಗೆದ್ದರೆ ಮಾತ್ರ ರಾಜ್ಯ ಪಂಚರತ್ನ ಯೋಜನೆಗಳು ಜಾರಿಗೆ ಬರುವುದು ಸಾಧ್ಯವಾಗುತ್ತದೆ. 123 ಗುರಿಯನ್ನು ತಲುಪಬೇಕು ಎಂದರೆ ಹಾಸನದಲ್ಲಿ ಏಳಕ್ಕೆ ಏಳು ಸ್ಥಾನಗಳನ್ನು ಗೆಲ್ಲಬೇಕು. ಅದನ್ನು ಹೊರತುಪಡಿಸಿ ಇದರ ಬಗ್ಗೆ ಚರ್ಚೆ ಮಾಡುವುದು ಇನ್ನೇನು ಉಳಿದಿಲ್ಲ ಎಂದು ಹೇಳಿದ್ದಾರೆ.
ಹಾಸನ ಟಿಕೆಟ್ ಆಕಾಂಕ್ಷಿ ಸ್ವರೂಪ್ ಮಾಜಿ ಸಚಿವ ರೇವಣ್ಣರನ್ನು ಭೇಟಿ ಮಾಡಿದ ವಿಚಾರವಾಗಿಯೂ ಇದೇ ವೇಳೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ಅವರು ಒಂದೇ ಜಿಲ್ಲೆಯವರು, ಸ್ವರೂಪ್ ರೇವಣ್ಣ ರಾಜಕೀಯವಾಗಿ ಬೆಳೆಸಿದ ಹುಡುಗ. ಭೇಟಿ ಮಾಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಏನು ಚರ್ಚೆ ಮಾಡಿದ್ದಾರೆ ಎಂಬುದರ ಬಗ್ಗೆ ನಾನು ತಿಳಿದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.