ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಗಲಾಟೆಯ ತನಿಖೆಯನ್ನು ಸಿಬಿಐಗೆ ಕೊಡಬೇಕು ಇಲ್ಲಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು. ವರದಿ ಬಂದ ನಂತರ ಸ್ಪೆಷಲ್ ಕೋರ್ಟ್ ನೇಮಿಸಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ) ಬೊಮ್ಮಾಯಿ(Basavaraj Bommai) ಆಗ್ರಹಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಬಳ್ಳಾರಿಯಲ್ಲಿ ನಡೆದ ಘಟನೆ ರಾಜಕೀಯ ದ್ವೇಷದಿಂದ ಕೂಡಿದೆ ಹಾಗೂ ವಿರೋಧಿಗಳನ್ನು ದೈಹಿಕವಾಗಿ ಮುಗಿಸಲು ಮಾಡಿರುವ ಸಂಚು. ಶಾಸಕ ಜನಾರ್ದನ ರೆಡ್ಡಿ ಮನೆ ಮುಂದೆ ಬಂದು ಗಲಾಟೆ ಮಾಡಿರುವುದು ಕಾಂಗ್ರೆಸ್ ಶಾಸಕರ ಪುಂಡರು ಎನ್ನುವುದು ಸ್ಪಷ್ಟ. ಅಲ್ಲದೇ ಎಂಟು ಗುಂಡು ಅವರ ಮನೆಯ ಮುಂದೆನೇ ಸೆಕ್ಯುರಿಟಿ ಹಾರಿಸಿರುವುದು ವಿಡಿಯೊಗಳಲ್ಲಿ ಸ್ಪಷ್ಟವಾಗಿದೆ.

ಇಷ್ಟೆಲ್ಲಾ ಆದರೂ ಯಾರ ಗನ್‌ನಿಂದ ಗುಂಡು ಹಾರಿದೆ ಎನ್ನುವುದು ಸ್ಪಷ್ಟವಾಗಿಲ್ಲ ಎಂದು ಎಸ್‌ಐಟಿ ರಚನೆ ಮಾಡುವ ಮಾತನಾಡುತ್ತಿದ್ದಾರೆ. ಆದರೆ, ಈಗಾಗಲೇ ಸರ್ಕಾರ ಡಜನ್ ಗಟ್ಟಲೇ ಎಸ್‌ಐಟಿ ರಚನೆ ಮಾಡಿದ್ದು, ಎಸ್‌ಐಟಿಯಿಂದ ತನಿಖೆ ಸಾಧ್ಯವಿಲ್ಲ. ಇದನ್ನು ಸಿಬಿಐಗೆ ಕೊಡಬೇಕು ಇಲ್ಲಾ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ಆಗಬೇಕು. ವರದಿ ಬಂದ ನಂತರ ಸ್ಪೆಷಲ್ ಕೋರ್ಟ್ ನೇಮಿಸಿ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ದ್ವೇಷ ರಾಜಕಾರಣ ಶುರುವಾಗಿದೆ. ಕಾಂಗ್ರೆಸ್ ಪುಂಡರಿಗೆ ಪೊಲೀಸರ ಭಯ ಇಲ್ಲದಾಗಿದೆ. ಪೊಲೀಸ್ ಠಾಣೆ ಮಾನ ಹರಾಜಾಗಿದೆ. ಪೊಲೀಸರನ್ನು ಹೆದರಿಸುತ್ತಾ ಕಾಂಗ್ರೆಸ್ ಪುಂಡರು ಮೆರೆಯುತ್ತಿದ್ದಾರೆ. ಇದು ಅತ್ಯಂತ ಖಂಡನೀಯ. ಕೂಡಲೇ ತನಿಖೆ ಆರಂಭವಾಗಬೇಕು. ಶಾಸಕ ಜನಾರ್ದನ ರೆಡ್ಡಿ ಹಾಗೂ ಮಾಜಿ ಸಚಿವ ಬಿ. ಶ್ರೀರಾಮುಲು ಅವರಿಗೆ ಸುರಕ್ಷತೆಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ದ್ವೇಷ ಭಾಷಣ ಮಾಡುವವರ ವಿರುದ್ಧ ಕಾನೂನು ತಂದಿರುವ ಕಾಂಗ್ರೆಸ್ ಸರ್ಕಾರ ದ್ವೇಷದಿಂದ ಗುಂಡು ಹಾರಿಸುವ ಅವರ ಶಾಸಕರನ್ನು ಬಂಧಿಸುವ ತಾಕತ್ತು ಸಿಎಂ ಹಾಗೂ ಗೃಹ ಸಚಿವರಿಗೆ ಇದೆಯೇ ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ.











