
ರಾಜ್ಯ ವಿಧಾನಮಂಡಲ ಅಧಿವೇಶನ ಆರಂಭ ಮಾಡಲು ದಿನಗಣನೆ ಆರಂಭ ಆಗಿದೆ. ಸರ್ಕಾರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಹೆಜ್ಜೆ ಮೇಲೂ ಕಣ್ಣಿಟ್ಟಿರುವ ವಿರೋಧ ಪಕ್ಷಗಳು, ಸರ್ಕಾರವನ್ನು ಹೇಗೆಲ್ಲಾ ಇಕ್ಕಟ್ಟಿಗೆ ಸಿಲುಕಿಸಬಹುದು ಅನ್ನೋ ಬಗ್ಗೆ ಭಾರೀ ಲೆಕ್ಕಾಚಾರ ನಡೆಯುತ್ತಿವೆ. ಇದೀದ ಅಧಿಕೃತ ವಿರೋಧ ಪಕ್ಷದಲ್ಲಿ ವಿಪಕ್ಷ ನಾಯಕನ ಸ್ಥಾನವೇ ಭರ್ತಿಯಾಗದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕನ ಪಾತ್ರವನ್ನು ನಿರ್ವಹಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಅಸ್ತಿತ್ವಕ್ಕೆ ಬಂದು ತಿಂಗಳಾಗುತ್ತಿದ್ದು ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. ಈ ವರ್ಗಾವಣೆ ಹಿಂದೆ ಹಣಕಾಸಿನ ದಂಧೆ ನಡೆಯುತ್ತಿದೆ ಅನ್ನೋದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪ. ಈ ಆರೋಪಕ್ಕೆ ಬಿಜೆಪಿ ನಾಯಕರು ಉಘೇ ಎಂದಿದ್ದಾರೆ.
ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದ್ದು, ಒಂದೇ ಹುದ್ದೆಗೆ ಮುಖ್ಯಮಂತ್ರಿ ಅವರೇ ನಾಲ್ಕರಿಂದ ಐದು ಜನರಿಗೆ ಶಿಫಾರಸು ಪತ್ರ ಮಾಡಿದ್ದಾರೆ. ಸಿಎಂ ಕಚೇರಿಯಲ್ಲಿ ಏನೇನು ನಡೆಯುತ್ತಿದೆ..? ಒಂದು ಹುದ್ದೆಗೆ ಐದು ವ್ಯಕ್ತಿಗಳು ನಿಯುಕ್ತಿಗೊಳಿಸಿದ್ದಾರೆ. ಇದನ್ನ ಯಾರು ಆದೇಶ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ವರ್ಗಾವಣೆ ದಂಧೆ ದೊಡ್ಡಮಟ್ಟದಲ್ಲಿ ನಡೆಯುತ್ತಿದೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಚನ್ನಪಟ್ಟಣದ ಮೈಲನಾಯಕನಹೊಸಳ್ಳಿ ಗ್ರಾಮದಲ್ಲಿ ಮಾತನಾಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಅಧಿಕೃತ ಬಿಜೆಪಿ ಮಾಡಬೇಕಿರುವ ಕೆಲಸಕ್ಕೆ ಕುಮಾರಸ್ವಾಮಿ ಅಧಿಕೃತವಾಗಿ ಎಂಟ್ರಿಕೊಟ್ಟಂತಾಗಿದೆ.
ಕುಮಾರಸ್ವಾಮಿ ಹೇಳಿಕೆಗೆ ಉಘೇ ಎಂದ ಬಿಜೆಪಿ ಲೀಡರ್ಸ್..!
ರಾಜ್ಯ ಸರ್ಕಾರ ವರ್ಗಾವಣೆ ದಂಧೆ ನಡೆಸುತ್ತಿದೆ ಎಂದಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆರೋಪದ ಬಗ್ಗೆ ಮಾತನಾಡಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಆಯಕಟ್ಟಿನ ಹುದ್ದೆಗಳಿಗೆ ನೇಮಕವಾಗುತ್ತಿರುವ ಅಧಿಕಾರಿಗಳ ಹಿನ್ನೆಲೆ ಪರಿಶೀಲಿಸಬೇಕು. ಆಗ ಸರ್ಕಾರದ ಆಶಯ ಏನು ಅಂತಾ ಗೊತ್ತಾಗುತ್ತದೆ. ಕುಮಾರಸ್ವಾಮಿ ಅವರಿಗೆ ಆಡಳಿತ ನಡೆಸಿದ ಅನುಭವ ಇದೆ. ಹಾಗಾಗಿ ಕುಮಾರಸ್ವಾಮಿ ಅವರು ಆಧಾರ ಇಲ್ಲದೆ ಆರೋಪ ಮಾಡಲ್ಲ. ಹರಾಜು ಕೂಗಿದಂತೆ ರೇಟ್ ಹೆಚ್ಚಾಗಿರಬಹುದು. ಅದಕ್ಕಾಗಿ ಒಂದೇ ಹುದ್ದೆಗೆ ನಾಲ್ಕಾರು ಸಲ ವರ್ಗಾವಣೆ ಆಗಿರಬಹುದು. ವರ್ಗಾವಣೆ ಮಾಡಿ ಆದೇಶ ಮಾಡಿದ ಬಳಿಕ ವಾಪಸ್ ತೆಗೆದುಕೊಳ್ಳುವುದು ದೊಡ್ಡ ಹಗರಣ. ಇದನ್ನು ನೋಡಿದಾಗ ಐದು ವರ್ಷದ ಆಡಳಿತ ಹೇಗಿರುತ್ತೆ ಎನ್ನುವುದು ಸ್ಪಷ್ಟವಾಗಿದೆ. ಹಗರಣಗಳಿಂದಲೇ ಮುನ್ನುಡಿ ಬರೆದಿದ್ದಾರೆ ಎಂದಿದ್ದಾರೆ.
ಪರ್ಸಂಟೇಜ್ ಬಗ್ಗೆಯೂ ಕುಮಾರಸ್ವಾಮಿ ಸಿಡಿಕಿಡಿ..!

ಜೆಡಿಎಸ್ ನಾಯಕ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದು, ಕಾಂಗ್ರೆಸ್‌ನಲ್ಲೂ ಈಗ ಪರ್ಸಂಟೇಜ್ ಶುರುವಾಗುತ್ತೆ, ರೇಟ್ ಫಿಕ್ಸ್ ಮಾಡುವ ಸಲುವಾಗಿ ಎಲ್ಲಾ ಕೆಲಸಗಳನ್ನು ನಿಲ್ಲಿಸಿದ್ದಾರೆ. 4 ವರ್ಷದ ಅಭಿವೃದ್ಧಿ ಕಾರ್ಯಗಳ ತನಿಖೆ ಎಲ್ಲಿಂದ ಮಾಡಲು ಸಾಧ್ಯ..? ಇದು ಐದು ಗ್ಯಾರಂಟಿಗಳ ಜೊತೆಗೆ ತನಿಖಾ ಜ್ಯೋತಿ ಕೊಡಲು ಹೊರಟಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು. ಈಗಿನ ರಾಷ್ಟ್ರೀಯ ಪಕ್ಷಗಳು ಕೂಡಾ ಈಸ್ಟ್ ಇಂಡಿಯಾ ಕಂಪನಿ ಇದ್ದಂತೆ. ನಮ್ಮದು ಸಂಪದ್ಭರಿತವಾದ ದೇಶ, ಎಷ್ಟು ಲೂಟಿ ಮಾಡಿದ್ರು ಸಂಪತ್ತು ಕರಗಲ್ಲ ಎಂದು ಕಿಡಿಕಾರಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಜ್ಯದಲ್ಲಿ ಬೆಲೆ ಏರಿಕೆ ಅಬ್ಬರಿಸುತ್ತಿದೆ. ಬೆಲೆ ಏರಿಕೆ ಇಳಿಸ್ತೀವಿ ಅಂತ ತಾನೆ ವೋಟ್ ಕೇಳಿದ್ದು, ಈಗ ಕೇಂದ್ರದ ಕಡೆ ಕೈ ತೋರಿಸಿದ್ರೆ ನೀವೇನು ಮಾಡ್ತೀರಿ..? ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ವಾ..? ಎಂದು ಕುಟುಕಿದ್ದಾರೆ.
ಕೃಷ್ಣಮಣಿ


