ಬೆಂಗಳೂರು: ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಆರ್.ವಿ.ದೇವರಾಜ್ (67) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನಾಳೆ ತಮ್ಮ ಹುಟ್ಟುಹಬ್ಬ ಹಿನ್ನಲೆ ನಿನ್ನೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದ ಆರ್.ವಿ.ದೇವರಾಜ್, ಬೆಂಗಳೂರಿಗೆ ಹಿಂತಿರುಗುವಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ತಕ್ಷಣ ಸಮೀಪದ ಆಸ್ಪತ್ರೆಗೆ ದೇವರಾಜ್ ರನ್ನ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ದೇವರಾಜ್ ಮೃತಪಟ್ಟಿದ್ದಾರೆ.
ಮೈಸೂರಿನ ಆಸ್ಪತ್ರೆಯಲ್ಲಿದ್ದ ದೇವರಾಜ್ ಮೃತದೇಹವನ್ನು ಬೆಳಗಿನ ಜಾವ ಬೆಂಗಳೂರಿನ ಕೆ.ಆರ್.ಮಾರ್ಕೆಟ್ ಬಳಿ ಇರುವ ನಿವಾಸಕ್ಕೆ ತರಲಾಗಿದೆ. ಬೆಳಗ್ಗೆ 10 ಗಂಟೆ ನಂತರ ಜೆ.ಸಿ.ರಸ್ತೆಯ ಆರ್.ವಿ.ದೇವರಾಜ್ ಕಛೇರಿ ಬಳಿ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ನಾಳೆ ಕನಕಪುರದ ಸೋಮನಹಳ್ಳಿ ತೋಟದ ಮನೆ ಬಳಿ ಅಂತ್ಯಸಂಸ್ಕಾರ ನಡೆಯುವ ಸಾಧ್ಯತೆ ಇದೆ.
ಆರ್.ವಿ.ದೇವರಾಜ್ ಪೂರ್ಣ ಹೆಸರು ರೋನೂರು ವೆಂಕಟೇಶಪ್ಪ ದೇವರಾಜ್. 1957, ಡಿಸೆಂಬರ್ 3ರಂದು ಜನಿಸಿದ್ದ ದೇವರಾಜ್ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದರು. 2000 ರಿಂದ ಅಕ್ಟೋಬರ್ 2007 ರವರೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ಬಳಿಕ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಎಐಸಿಸಿ ಸದಸ್ಯರಾಗಿದ್ದರು. ಚಾಮರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಶಾಸಕರಾಗಿ ಸೇವೆ ಸಲ್ಲಿಸಿದರು. ಚಾಮರಾಜಪೇಟೆ ಕ್ಷೇತ್ರದ ಕ್ಷೇತ್ರ ಪುನರ್ವಿಂಗಡಣೆಯ ನಂತರ ಚಿಕ್ಕಪೇಟೆಯ ಕಾಂಗ್ರೆಸ್ ಪಕ್ಷದ ಶಾಸಕರಾಗಿದ್ದರು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಉದಯ್ ಗರುಡಾಚಾರ್ ವಿರುದ್ಧ ಸೋತಿದ್ದರು.











